ತಿತಿಮತಿ: ಸಿಎನ್‌ಸಿ ಜನಜಾಗೃತಿ ಮಾನವ ಸರಪಳಿ

| Published : Oct 07 2024, 01:36 AM IST

ಸಾರಾಂಶ

ತಿತಿಮತಿಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು. ಸಿಎನ್‌ಸಿ ಪ್ರಮುಖರು, ಗ್ರಾಮಸ್ಥರು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಕರ್ನಾಟಕ ಭೂಸುಧಾರಣಾ ಕಾಯ್ದೆ ತಿದ್ದುಪಡಿ 79ಎ, 79ಬಿ ದುರುಪಯೋಗವಾಗುತ್ತಿದ್ದು, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯ ಮೂಲಕ ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಆರ್ಥಿಕ ಅಪರಾಧಿಗಳು ಹಾಗೂ ಉದ್ಯಮಪತಿಗಳು ಕೊಡವಲ್ಯಾಂಡ್ ನ ಪರಿಸರವನ್ನು ಸಂಪೂರ್ಣ ನಾಶ ಮಾಡುತ್ತಿದ್ದಾರೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ.

ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ತಿತಿಮತಿಯಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ಕಪ್ಪು ಹಣ ಹೊಂದಿರುವವರು ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣದಲ್ಲಿ ತೊಡಗಿರುವ ಉದ್ಯಮಪತಿಗಳು ಹಾಗೂ ಬಂಡವಾಳಶಾಹಿಗಳು ಇಡೀ ಕೊಡಗಿನಲ್ಲಿ ವ್ಯಾಪಿಸಿದ್ದು, ಪಾಕೃತಿಕ ಕೊಡುಗೆಗಳನ್ನು ಆವರಿಸಿಕೊಂಡಿದ್ದಾರೆ. ಸರ್ಕಾರ ಆದಾಯವನ್ನಷ್ಟೇ ಗುರಿ ಮಾಡಿಕೊಂಡು ಪವಿತ್ರ ಕೊಡವಲ್ಯಾಂಡ್ ನ್ನು ಮೋಜು, ಮಸ್ತಿಗಾಗಿ ಬಿಟ್ಟುಕೊಡುತ್ತಿದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದರು.

ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ಬೂಸ್ಟ್ ಮಾಡುವುದಾಗಿ ಜಿಲ್ಲಾಡಳಿತ ಹೇಳಿಕೆ ನೀಡುತ್ತಿದೆ. ಪ್ರವಾಸೋದ್ಯಮದ ಬೆಳವಣಿಗೆ ಎಂದರೆ ಹಸಿರ ಬೆಟ್ಟಗುಡ್ಡಗಳನ್ನು ಕಡಿದು ಜಲನಾಳಗಳನ್ನು ನಾಶಪಡಿಸುವುದೇ ಎನ್ನುವುದನ್ನು ಶ್ವೇತಪತ್ರದ ಮೂಲಕ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಜನಜಾಗೃತಿ ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದ ಸಿಎನ್‌ಸಿ ಪ್ರಮುಖರು ಹಾಗೂ ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಅ.9ರಂದು ಅಮ್ಮತ್ತಿ, ನಂತರದ ದಿನಗಳಲ್ಲಿ ಭಾಗಮಂಡಲ ಹಾಗೂ ಮಡಿಕೇರಿಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.

ಮಾಂಗೇರ ಪದ್ಮಿನಿ, ಚಿಂಡಮಾಡ ಸರಿತಾ, ಕೂತಂಡ ವಾಣಿ, ಬೋಳ್ತಂಡ ಮೀನಾ, ಕಳ್ಳಿಚಂಡ ಪವಿತ, ಗಾಂಡಂಗಡ ಸುಂದರಿ, ಕೊಚ್ಚೆರ ಸ್ವಾತಿ, ಪಾಲೆಂಗಡ ಗಂಗಮ್ಮ, ಪಾಲೆಂಗಡ ತಂಗಮ್ಮ, ಪಾಲೆಂಗಡ ಶಮ್ಮಿ, ಮನೆಯಪಂಡ ಮನು, ಚೆಕ್ಕೇರ ಕೃತಿಕಾ, ಮದ್ರೀರ ಕೃತಿಕಾ, ಮದ್ರೀರ ಲೀನಾ ಮತ್ತಿತರರು ಇದ್ದರು.