ತೆರಿಗೆ ವಂಚನೆಗಿಳಿದ ಕೋಚಿಂಗ್‌ ಕೇಂದ್ರಗಳು

| Published : Jul 01 2025, 12:48 AM IST

ಸಾರಾಂಶ

ಶಾಲಾವಧಿಯಲ್ಲಿ ನಡೆಯುತ್ತಿರುವ ಕೋಚಿಂಗ್‌ ಕೇಂದ್ರಗಳು ಶಿಕ್ಷಣ ಇಲಾಖೆಗೆ ನಾಮ ಹಾಕಿ ಲಕ್ಷ ಲಕ್ಷದ ರು. ವ್ಯವಹಾರ ಮಾಡ್ತಿದ್ದಾರೆಂಬ ಆರೋಪಗಳಲ್ಲದೆ ಸರ್ಕಾರಕ್ಕೆ ತೆರಿಗೆ ವಂಚಿಸಿ ರಾಜಾರೋಷವಾಗಿ ವಹಿವಾಟು ನಡೆಸಿರುವ ಅಂಶ ಬೆಳಕಿಗೆ ಬಂದಿದೆ.

ಅನೀಲ ಕುಮಾರ ದೇಶಮುಖ

ಕನ್ನಡಪ್ರಭ ವಾರ್ತೆ ಔರಾದ್‌

ಶಾಲಾವಧಿಯಲ್ಲಿ ನಡೆಯುತ್ತಿರುವ ಕೋಚಿಂಗ್‌ ಕೇಂದ್ರಗಳು ಶಿಕ್ಷಣ ಇಲಾಖೆಗೆ ನಾಮ ಹಾಕಿ ಲಕ್ಷ ಲಕ್ಷದ ರು. ವ್ಯವಹಾರ ಮಾಡ್ತಿದ್ದಾರೆಂಬ ಆರೋಪಗಳಲ್ಲದೆ ಸರ್ಕಾರಕ್ಕೆ ತೆರಿಗೆ ವಂಚಿಸಿ ರಾಜಾರೋಷವಾಗಿ ವಹಿವಾಟು ನಡೆಸಿರುವ ಅಂಶ ಬೆಳಕಿಗೆ ಬಂದಿದೆ.

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಡೆಯುತ್ತಿರುವ ನವೋದಯ ಕೋಚಿಂಗ್‌ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಂದ ಶುಲ್ಕ ರೂಪದಲ್ಲಿ ಸಾವಿರಾರು ರುಪಾಯಿಗಳನ್ನು ಬಾಚುತ್ತಿರುವುದಲ್ಲದೆ ಪುಸ್ತಕ, ವಾಹನ ಸಾಗಾಟ ಸೇರಿದಂತೆ ಮತ್ತಿತರಕ್ಕೂ ಹಣ ಸಂದಾಯವಾಗುತ್ತಿದೆ. ಒಂದು ಕೋಚಿಂಗ್ ಸೆಂಟರ್‌ ನಲ್ಲಿ ಕನಿಷ್ಠ 100 ಜನ ವಿದ್ಯಾರ್ಥಿಗಳು ವಸತಿ ಸೌಲಭ್ಯ ಪಡೆದರೆ ಕೇವಲ ಒಂದು ಕೋಚಿಂಗ್‌ ಕೇಂದ್ರದಲ್ಲಿ 50 ಲಕ್ಷ ರು.ಗಳಿಗೂ ಹೆಚ್ಚು ವ್ಯವಹಾರದ ಅಂದಾಜಿದೆ ಎಂದು ಹೇಳಲಾಗಿದೆ.

ಇದರಲ್ಲಿ ಒಂದು ನಯಾ ಪೈಸಾ ಕೂಡ ತೆರಿಗೆಯ ಪಾಲು ಹೋದ ಸಾಧ್ಯತೆಗಳು ಕಮ್ಮಿ. ಎಲ್ಲವೂ ನೇರವಾಗಿ ಕೋಚಿಂಗ್‌ ಕೇಂದ್ರಗಳ ಮಾಲೀಕರ ಜೇಬಿಗೆ ಸೇರ್ತಿದ್ದು, ವ್ಯವಸ್ಥಿತವಾಗಿ ಹಾಡು ಹಗಲೇ ತೆರಿಗೆ ವಂಚನೆ ಮಾಡ್ತಿರುವುದು ಕಂಡು ಬರ್ತಾ ಇದೆ.

ವಾಣಿಜ್ಯ ಮಳಿಗೆ ಬಾಡಿಗೆ ಕೊಟ್ಟ ಮಾಲೀಕನಿಂದಲೂ ವಂಚನೆ:

ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಿಸಲಾದ ಕಟ್ಟಡದ ಅಂಗಡಿಗಳನ್ನು ಕೋಚಿಂಗ್‌ ಕೇಂದ್ರಗಳಿಗೆ ಬಾಡಿಗೆ ನೀಡಿದ ಅಂಗಡಿ ಮಾಲಕನು ಕೋಚಿಂಗ್‌ ಕೇಂದ್ರದ ಮಾಲೀಕನಿಂದ ವಾರ್ಷಿಕ 3ರಿಂದ 4 ಲಕ್ಷ ರು. ಬಾಡಿಗೆ ರೂಪದಲ್ಲಿ ಹಣವನ್ನು ಪಡೆಯುತ್ತಿದ್ದಾನೆ. ಹೀಗಾಗಿ ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಿಸಿದ ಕಟ್ಟಡದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕೋಚಿಂಗ್‌ ದಂಧೆಗೆ ಅಂಗಡಿಗಳನ್ನು ಬಾಡಿಗೆಗೆ ನೀಡಿ ಕೋಚಿಂಗ್‌ ಕೇಂದ್ರದ ಮಾಲೀಕನೂ ತೆರಿಗೆ ಹಾಗೂ ಸರ್ಕಾರದ ನಿಯಮಗಳನ್ನು ನಿರ್ಲಕ್ಷಿಸಿದಂತಾಗಿದೆ.ಶಿಕ್ಷಣ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಅವರ ಸಹಕಾರದಿಂದಲೇ ಕೋಚಿಂಗ್‌ ಕೇಂದ್ರಗಳ ಹಾವಳಿ ಜಾಸ್ತಿಯಾಗಿದೆ. ಅಧಿಕಾರಿ ಮನಸ್ಸು ಮಾಡಿದ್ರೆ ಅರ್ಧ ಗಂಟೆಯಲ್ಲಿ ಎಲ್ಲಾ ನಕಲಿ ಕೇಂದ್ರಗಳನ್ನು ಬಂದ್ ಮಾಡ್ತಾರೆ. ಇದ್ಯಾವದೂ ಆಗ್ತಿಲ್ಲ ಅಂದ್ರೆ ಶಿಕ್ಷಣ ಇಲಾಖೆ ಅಧಿಕಾರಿಗಳ ಕೃಪಕಟಾಕ್ಷದಿಂದಲೇ ಕೋಚಿಂಗ್‌ ಕೇಂದ್ರಗಳು ನಡೆಯುತ್ತಿವೆ ಎಂದು ಆರೋಪಿಸಲಾಗ್ತಿದೆ.

--------------

ಶಾಲಾವಧಿಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕೋಚಿಂಗ್‌ ಕೇಂದ್ರಗಳು ಸರ್ಕಾರದ ಯಾವುದೇ ಹಂತದ ಸಂಸ್ಥೆಯಲ್ಲಿ ನೋಂದಣಿ ಮಾಡಿರುವುದಿಲ್ಲ. ಇವರು ಮಾಡ್ತಿರುವ ಹಣಕಾಸಿನ ವ್ಯವಹಾರ ಅಕ್ರಮವಾಗಿದ್ದಲ್ಲಿ ತೆರಿಗೆ ಇಲಾಖೆ ಇವರ ಮೇಲೆ ಯಾಕೆ ಕ್ರಮ ಕೈಗೊಳ್ತಿಲ್ಲ?

ಬಸವರಾಜ ಹಳ್ಳೆ, ಸ್ಥಳೀಯ ಮುಖಂಡ

----------------

ನಮ್ಮ ತಾಲೂಕಿನ ಶಿಕ್ಷಣ ವ್ಯವಸ್ಥೆಯನ್ನು ಸರಿ ಮಾಡಬೇಕಾದ ಅಧಿಕಾರಿಗಳೇ ಮಕ್ಕಳ ಭವಿಷ್ಯವನ್ನು ಅಂದಕಾರಕ್ಕೆ ದಬ್ಬುತ್ತಿರುವುದು ಕಳವಳಕಾರಿಯಾಗಿದೆ. ಇದನ್ನು ಕೇಳುವವರು ಯಾರು, ಇದು ನಮ್ಮ ದುರ್ದೈವ.

ಶಿವಶಂಕರ ನಿಶ್ಪತೆ, ಕನ್ನಡ ಸೇನೆ ತಾಲೂಕು ಅಧ್ಯಕ್ಷ