ಸಾರಾಂಶ
ಕಾಫಿ ಕುಡಿಯಿರಿ ಕಾಫಿ ಕುಡಿಸಿರಿ ಕಾಫಿಯೊಂದಿಗೆ ದೈನಂದಿನ ಜೀವನ ಪ್ರಾರಂಭಿಸಿ ಎಂಬ ಹೆಸರಿನಲ್ಲಿ ಕಾಫಿ ಹಬ್ಬ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಇಲ್ಲಿನ ತಾಲೂಕು ಕಾಫಿ ಬೆಳೆಗಾರರ ಸಂಘ ಹಾಗೂ ತಾಲೂಕು ಹೋಂ ಸ್ಟೇ ಅಸೋಸಿಯೇಷನ್ ವತಿಯಿಂದ ಪಟ್ಟಣದ ವಿವೇಕಾನಂದ ಸರ್ಕಲ್ ಬಳಿ, ಅಂತಾರಾಷ್ಟ್ರೀಯ ಕಾಫಿ ದಿನದ ಅಂಗವಾಗಿ ‘ಕಾಫಿ ಕುಡಿಯಿರಿ, ಕಾಫಿ ಕುಡಿಸಿರಿ, ಕಾಫಿಯೊಂದಿಗೆ ದೈನಂದಿನ ಜೀವನ ಪ್ರಾರಂಭಿಸಿ’ ಎಂಬ ಹೆಸರಿನಲ್ಲಿ ಕಾಫಿ ಹಬ್ಬ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಅವರು, ಹವಾಮಾನ ವೈಪರೀತ್ಯ, ಕಾರ್ಮಿಕರ ಸಮಸ್ಯೆ, ಕಾನೂನಿನ ಚೌಕಟ್ಟು, ಮಾರುಕಟ್ಟೆ ಸಮಸ್ಯೆಗಳ ನಡುವೆಯೂ ಬೆಳೆಗಾರರು ಕಾಫಿ ಗಿಡ, ತೋಟ, ಮಣ್ಣನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಈ ಶ್ರಮಕ್ಕೆ ನಾವೆಲ್ಲರೂ ಚಿರಋಣಿಯಾಗಿರಬೇಕು ಎಂದರು.ನಮ್ಮ ರಾಜ್ಯ, ದೇಶದಲ್ಲಿ ಕಾಫಿಯು ಶೇ. 30ರಷ್ಟು ಮಾತ್ರ ಬಳಕೆಯಾಗುತ್ತಿದೆ. ಉಳಿದ ಶೇ. 70ರಷ್ಟು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಹೋಗುತ್ತಿದೆ. ಉತ್ತರ ಭಾರತದಲ್ಲಿ ಟೀ ಹೆಚ್ಚಾಗಿ ಬಳಕೆಯಾಗುತ್ತಿದೆ. ಕಾಫಿಯನ್ನು ಕುಡಿಯುವವರ ಸಂಖ್ಯೆ ಹೆಚ್ಚಿಸಬೇಕು. ಇದಕ್ಕೆ ನಾವೇ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಾಫಿ ಬೆಳೆಗಾರ ಜಿ.ಎಸ್. ಪ್ರಭುದೇವ್ ಮಾತನಾಡಿ, ಗುಣಮಟ್ಟದ ಕಾಫಿ ಉತ್ಪಾದನೆಗೆ ಬೆಳೆಗಾರರು ಮುಂದಾಗಬೇಕು ಎಂದರು. ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್. ಮುತ್ತಣ್ಣ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ. ಲವ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಕಾಫಿ ಬೆಳೆಗಾರರಾದ ಹಾನಗಲ್ಲು ಗ್ರಾಮದ ಬಿ.ಎಸ್. ಸೀತಾರಾಂ, ಸುಳಿಮಳ್ತೆ ಗ್ರಾಮದ ಎಸ್.ಎಲ್.ಪುಟ್ಟರಾಜು, ಕಿರಗಂದೂರು ಗ್ರಾಮದ ವಿಮಲ ಕೃಷ್ಣಕಾಂತ್, ಕರ್ಕಳ್ಳಿ ಗ್ರಾಮದ ನಿರ್ಮಲ ಪ್ರಕಾಶ್, ತಣ್ಣೀರುಹಳ್ಳ ಗ್ರಾಮದ ರಾಣಿ ನರೇಂದ್ರ ಉಪಸ್ಥಿತರಿದ್ದರು.ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ. ರೋಹಿತ್, ಸಂಘದ ಉಪಾಧ್ಯಕ್ಷ ಗೌಡಳ್ಳಿ ಪ್ರಸಿ, ಕೆ.ಜಿ.ಎಫ್. ನಿರ್ದೇಶಕ ಸಿ.ಕೆ. ಮಲ್ಲಪ್ಪ, ಸಂಘದ ಕಾರ್ಯದರ್ಶಿ ಯಡೂರು ಮನೋಹರ್, ನಿರ್ದೇಶಕ ಎಸ್.ಎಂ. ಕೃಷ್ಣ, ತಿಲೋತ್ತಮೆ, ಆಶಾ ಯೋಗೇಂದ್ರ ಇದ್ದರು.