ಕಾಫಿಗೆ ಈ ಬಾರಿ ಬಂಪರ್ ಬೆಲೆ ಬಂದಿದ್ದು ಕೊಡಗಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಳ

| Published : Jan 04 2025, 12:32 AM IST / Updated: Jan 04 2025, 12:51 PM IST

ಕಾಫಿಗೆ ಈ ಬಾರಿ ಬಂಪರ್ ಬೆಲೆ ಬಂದಿದ್ದು ಕೊಡಗಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾನ್ಯವಾಗಿ ಕಾಫಿ ಒಣಗಿಸುವ ಕಣ ಮತ್ತು ಮಾಲೀಕನ ಮನೆ ದೂರವೇ ಇರುತ್ತದೆ. ಕಣದ ಕೊರತೆ ಇರುವವರು ಗದ್ದೆಯಲ್ಲೇ ಕಾಫಿ ಒಣಗಿಸುತ್ತಾರೆ, ಆದರೆ ಹೀಗೆ ಎಲ್ಲೆಂದರಲ್ಲಿ ಕಾಫಿ ಹಾಕಿದರೆ ಕಳ್ಳರು ಬಹಳ ಸುಲಭವಾಗಿ ಕಾಫಿ ಕದಿಯುತ್ತಾರೆ. 

ವಿಘ್ನೇಶ್ ಎಂ. ಭೂತನಕಾಡು

 ಮಡಿಕೇರಿ : ಕಾಫಿಗೆ ಈ ಬಾರಿ ಬಂಪರ್ ಬೆಲೆ ಬಂದಿದ್ದು, ಬೆಳೆಗಾರರು ಒಂದೆಡೆ ಸಂಭ್ರಮದಲ್ಲಿದ್ದರೆ ಇದೀಗ ಕಳ್ಳರ ಹಾವಳಿಯಿಂದಾಗಿ ಭೀತಿಗೆ ಒಳಗಾಗಿದ್ದು, ಬೆಳೆ ಉಳಿಸಿಕೊಳ್ಳಲು ಸಂಕಷ್ಟ ಎದುರಿಸುತ್ತಿದ್ದಾರೆ.

ಬ್ರೆಝಿಲ್, ವಿಯೆಟ್ನಾಂ ದೇಶದಲ್ಲಿ ಕಾಫಿ ಇಳುವರಿ ತೀವ್ರ ಕುಸಿತ ಕಂಡ ಪರಿಣಾಮ ಭಾರತೀಯ ಕಾಫಿಗೆ ಹೆಚ್ಚಿನ ದರ ಬಂದಿದೆ. ಅರೆಬಿಕಾ ಹಾಗೂ ರೋಬೆಸ್ಟಾ ತಳಿಯ ಚೆರಿ, ಪಾರ್ಚ್ ಮೆಂಟ್ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಅಲ್ಲದೆ ಈ ದರ ಸರ್ವಕಾಲಿಕ ದಾಖಲೆ ಎಂದು ಹೇಳಲಾಗುತ್ತಿದೆ.

ಈ ಬಾರಿ ಫಸಲು ಚೆನ್ನಾಗಿದ್ದು ಕಾಫಿ ಬೆಲೆ ಕೂಡ ಈ ಹಿಂದೆಂದಿಗಿಂತಲೂ ಅತ್ಯುತ್ತಮವಾಗಿದೆ. ಆದರೆ ಬಂಪರ್ ಬೆಲೆ ಜೊತೆ ಕಾಫಿ ಬೆಳೆಗಾರರಿಗೆ ಹೊಸ ತಲೆನೋವು ಶುರುವಾಗಿದೆ. ಕಾಫಿಯನ್ನು ಕಣದಲ್ಲಿ ಸುಮಾರು 10-12 ದಿನಗಳ ಕಾಲ ಬಯಲಿನಲ್ಲಿ ಒಣಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಕಾಫಿ ಒಣಗಿಸುವ ಕಣ ಮತ್ತು ಮಾಲೀಕನ ಮನೆ ದೂರವೇ ಇರುತ್ತದೆ. ಕಣದ ಕೊರತೆ ಇರುವವರು ಗದ್ದೆಯಲ್ಲೇ ಕಾಫಿ ಒಣಗಿಸುತ್ತಾರೆ, ಆದರೆ ಹೀಗೆ ಎಲ್ಲೆಂದರಲ್ಲಿ ಕಾಫಿ ಹಾಕಿದರೆ ಕಳ್ಳರು ಬಹಳ ಸುಲಭವಾಗಿ ಕಾಫಿ ಕದಿಯುತ್ತಾರೆ. ಪ್ರತಿವರ್ಷ ಕಾಫಿ ಕಳ್ಳತನ ಪ್ರಕರಣಗಳು ಹೆಚ್ಚಳವಾಗುತ್ತಿದೆ.

ಕೆಲವರು ಈ ಕಳ್ಳತನ ಮಾಡಲೆಂದೇ ರಾತ್ರೋರಾತ್ರಿ ತೋಟಗಳಿಗೆ ನುಗ್ಗುತ್ತಿದ್ದಾರೆ. ಹಸಿ ಕಾಫಿಯನ್ನೇ ಚೀಲದಲ್ಲಿ ಕಳವು ಮಾಡಲಾಗುತ್ತಿದೆ. ಅಲ್ಲದೆ ಬೆಳೆಗಾರರು ಒಣಗಿಸಿಟ್ಟ ಕಾಫಿ ಕಣಕ್ಕೆ ತೆರಳಿ ಕಣದಿಂದಲೇ ಕದಿಯುವ ಪ್ರಕರಣ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ.

ಕೊಡಗು ಪೊಲೀಸರಿಗೂ ಕಾಫಿ ಕೊಯ್ಲಿನ ಅವಧಿ ಬಂದರೆ ತಲೆನೋವು ಶುರುವಾಗುತ್ತದೆ. ಈ ಕಾರಣದಿಂದ ಪೊಲೀಸ್ ಇಲಾಖೆ ಈಗಾಗಲೆ ಕಾಫಿ ಒಣಗಿಸುವ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದೆ. ಇದನ್ನ ಬಹುತೇಕ ಎಸ್ಟೇಟ್ ಮಾಲೀಕರು ಪಾಲಿಸುತ್ತಿದ್ದಾರೆ.

ಕಾಡಾನೆ ಹಾವಳಿ, ಕೂಲಿ ಕಾರ್ಮಿಕರ ಸಮಸ್ಯೆ, ಹವಾಮಾನ ವೈಪರೀತ್ಯದ ಪರಿಣಾಮ ಕೆಲವು ತೋಟದ ಮಾಲೀಕರು ವ್ಯಾಪಾರಿಗಳಿಗೆ ತೋಟವನ್ನು ಹುಂಡಿಗೆ ನೀಡಿದ್ದಾರೆ.

ಸಿಸಿ ಕ್ಯಾಮೆರಾ ಅಳವಡಿಕೆ:

ಕೆಲವು ತೋಟದ ಮಾಲೀಕರು ಬೆಳೆ ಉಳಿಸಿಕೊಳ್ಳಲು ಕಾವಲುಗಾರರನ್ನು ನೇಮಿಸಿಕೊಂಡಿದ್ದಾರೆ. ಕಾಫಿ ತೋಟದಲ್ಲಿ ಕಾಫಿ ಕಳ್ಳತನ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತೋಟಗಳಲ್ಲಿ ಮಾಲೀಕರು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಮುಂದಾಗಿದ್ದಾರೆ. ಕಾಫಿ ತೋಟ ಮಾತ್ರವಲ್ಲದೆ ಕಾಫಿ ಒಣಗಿಸಲು ಹಾಕಿರುವ ಕಣದಲ್ಲೂ ಕೂಡ ಕ್ಯಾಮೆರಾ ಅಳವಡಿಸಿ ಫಸಲು ಸಂರಕ್ಷಣೆಗೆ ಸಜ್ಜಾಗಿದ್ದಾರೆ.

ಇಂತಹ ಸ್ಥಳಗಳೇ ಇದೀಗ ಕಳ್ಳರಿಗೆ ಸುಲಭದ ತುತ್ತಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾಫಿ ಕಣಗಳಿಗೆ ಸೋಲಾರ್ ಆಧಾರಿತ ಸಿಸಿಟಿವಿ ಅಲಾರಂ ಇಟ್ಟುಕೊಂಡು ಕಾವಲುಗಾರರನ್ನು ನೇಮಿಸಿ ಕಾಫಿಯನ್ನು ರಕ್ಷಿಸಲಾಗುತ್ತಿದೆ.

ಕಾಫಿ ಬೆಲೆ ಹೀಗಿದೆಜ.3ರಂದು 50 ಕೆಜಿ ತೂಕದ ಕಾಫಿ ಅರೆಬಿಕಾ ಪಾರ್ಚ್ ಮೆಂಟ್ ರು. 22,800, ಅರೆಬಿಕಾ ಚೆರಿ ರು.12,700 ಹಾಗೂ ರೋಬೆಸ್ಟಾ ಪಾರ್ಚ್ ಮೆಂಟ್ ರು.20,000 ರೋಬೆಸ್ಟಾ ಚೆರಿ ಬೆಲೆ ರು.11,400 ಇತ್ತು.

ಕಳ್ಳತನ ಪ್ರಕರಣ

-ಇತ್ತೀಚೆಗೆ ದಕ್ಷಿಣ ಕೊಡಗಿನ ದೇವಣಗೇರಿಯ ತೋಟವೊಂದರಲ್ಲಿ ಯುವಕನೊಬ್ಬ ಚೀಲವೊಂದರಲ್ಲಿ ಕಾಫಿ ಕದ್ದಿದ್ದ.

-ಗುಡ್ಡೆಹೊಸೂರು ಸಮೀಪದ ರಂಗಸಮುದ್ರ ಗ್ರಾಮದ ಚಂದ್ರಶೇಖರ್ ಎಂಬವರ ತೋಟದಲ್ಲಿ ನವೆಂಬರ್‌ನಲ್ಲಿ ಹಣ್ಣಾದ ಕಾಫಿ ಕಳವಾಗಿತ್ತು. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

-ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ ಕಣದಲ್ಲಿ ಒಣಗಿಸಲು ಇಟ್ಟಿದ್ದ ಕಾಫಿ ಕದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.

ಜಿಲ್ಲೆಯಲ್ಲಿನ ಕಾಫಿ ವ್ಯಾಪಾರಸ್ಥರು ಕಾಫಿ ಖರೀದಿ ಮಾಡುವ ಸಂದರ್ಭದಲ್ಲಿ ಮಾರಾಟ ಮಾಡುವವರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳುವುದು ಮತ್ತು ಬೆಳೆ ಖರೀದಿ ಸಂದರ್ಭ ಸಂಶಯ ಉಂಟಾದಲ್ಲಿ ಅಂತಹ ವ್ಯಕ್ತಿಗಳ ಭಾವಚಿತ್ರವನ್ನು ತೆಗೆದುಕೊಳ್ಳುವುದು ಸೂಕ್ತ. ಕಾಫಿ ಕಳವು ಪ್ರಕರಣದ ಬಗ್ಗೆ ಎಚ್ಚರ ವಹಿಸಲು ನಮ್ಮ ಇಲಾಖೆ ಸಿಬ್ಬಂದಿಗೆ ಸೂಚಿಸಲಾಗಿದೆ. ಬೆಳೆಗಾರರು ತಮ್ಮ ಫಸಲು ಕಳವಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವುದು ಉತ್ತಮ.

-ಕೆ. ರಾಮರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.