ಗೌರವ ಧನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

| Published : Jan 04 2025, 12:32 AM IST

ಸಾರಾಂಶ

ಪ್ರಸ್ತುತ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಲಭ್ಯವಾಗುವ ಗೌರವಧನ ಮತ್ತು ಪ್ರೋತ್ಸಾಹಧನವನ್ನು ಹೆಚ್ಚಿಸಿ, ಮಾಸಿಕ ₹15,000 ನಿಗದಿಪಡಿಸಬೇಕು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಗೌರವ ಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಜಿಲ್ಲಾ ಸಮಿತಿ ಹಾಗೂ ಆಲ್ ಇಂಡಿಯಾ ಯುನೈಟೆಡ್ ಯೂನಿಯನ್ ಸೆಂಟರ್ ನೇತೃತ್ವದಲ್ಲಿ ನವನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಿವಿಧ ತಾಲೂಕುಗಳ ಆಶಾ ಕಾರ್ಯಕರ್ತೆಯರು ಆಗಮಿಸಿ ಆಶಾ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಪ್ರಸ್ತುತ ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಲಭ್ಯವಾಗುವ ಗೌರವಧನ ಮತ್ತು ಪ್ರೋತ್ಸಾಹಧನವನ್ನು ಹೆಚ್ಚಿಸಿ, ಮಾಸಿಕ ₹15,000 ನಿಗದಿಪಡಿಸಬೇಕು. ನಗರ ಜೀವನದ ದುಬಾರಿ ವೆಚ್ಚಗಳನ್ನು ಗಮನದಲ್ಲಿ ಇಟ್ಟುಕೊಂಡು, ನಗರ ಆಶಾ ಕಾರ್ಯಕರ್ತೆಯರಿಗೆ ಹೆಚ್ಚುವರಿ ₹2000 ಗೌರ ವಧನ ನೀಡಬೇಕು. ಮೊಬೈಲ್ ಮೂಲಕ ತೀವ್ರ ಒತ್ತಡದಿಂದ ಕೆಲಸ ಮಾಡಿಸಿಕೊಳ್ಳುತ್ತಿರುವುದನ್ನು ತಕ್ಷಣ ಕೈಬಿಡಬೇಕು. ಇದಕ್ಕೆ ಬದಲಾಗಿ, ಮೊಬೈಲ್ ಡೇಟಾ ಸೌಲಭ್ಯ ಒದಗಿಸಬೇಕು ಮತ್ತು ಪ್ರೋತ್ಸಾಹಧನ ನಿಗದಿ ಮಾಡಬೇಕು. 60 ವರ್ಷ ಸೇವಾ ನಿವೃತ್ತಿಯಾದ ಆಶಾ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ₹3 ಲಕ್ಷ ನಿವೃತ್ತಿ ಪರಿಹಾರ ನೀಡಬೇಕು ಒತ್ತಾಯಿಸಿದರು.

ತೀವ್ರ ಅನಾರೋಗ್ಯ ಅಥವಾ ಚಿಕಿತ್ಸೆಗಾಗಿ ಕನಿಷ್ಠ 3 ತಿಂಗಳುಗಳ ಕಾಲ ನಿಗದಿತ ಗೌರವಧನವನ್ನು ಸರಕಾರದಿಂದ ನೀಡಬೇಕು. ಸೇವೆ ಅವಧಿಯಲ್ಲಿ ಅಪಘಾತಗಳು ಸಂಭವಿಸಿದರೆ, ಅದರ ಸಂಪೂರ್ಣ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಳ್ಳಬೇಕು. ಪ್ರತಿವರ್ಷ ಆಶಾ ಕಾರ್ಯಕರ್ತೆಯರ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಬೇಕು. ತೀವ್ರ ಕಾಯಿಲೆಗಳಿದ್ದಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಠ ವೇತನ, ಗ್ರಾಜ್ಯುಟಿ, ಪಿಎಫ್, ಹಾಗೂ ಇಎಸ್ಐ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತೆಯರು ಭಾಗವಹಿಸಿದ್ದರು.