ಕನ್ನಡಪ್ರಭ ವಾರ್ತೆ ಹುಣಸೂರುದಕ್ಷಿಣ ಕನ್ನಡದ ಬಂಟವಾಳ ತಾಲೂಕಿನ ವಿಠಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮೊದಲ ವರ್ಷದ ಎಂ.ಎಸ್.ಡಬ್ಲ್ಯೂ. ವಿದ್ಯಾರ್ಥಿಗಳು ಆದಿವಾಸಿ ಅಧ್ಯಯನಕ್ಕಾಗಿ ಡೀಡ್ ಸಂಸ್ಥೆ ಹಾಗೂ ನೆರಳಕುಪ್ಪೆ ಬಿ. ಜೇನು ಕುರುಬರ ಹಾಡಿ, ಸೋಲಿಗರ ಮಾಸ್ತಮ್ಮನ ಹಾಡಿ ಮತ್ತು ಪಂಜರಿಯ ಅವರ ಶೆಟ್ಟಳ್ಳಿ ಹಾಡಿಗೆ ಭೇಟಿ ನೀಡಿ, ಆದಿವಾಸಿ ಸಮುದಾಯಗಳ ಸ್ಥಿತಿ ಗತಿಯ ಮಾಹಿತಿ ಸಂಗ್ರಹಿಸಿದರು.ನಂತರ ಹಾಡಿ ಸ್ಥಿತಿಯನ್ನು, ನಕ್ಷೆ ಬಿಡಿಸಿ ಜನರೊಟ್ಟಿಗೆ ಸಂವಾದ ನಡೆಸಿದರು. ಹಾಡಿಯಲ್ಲಿ ಆದಿವಾಸಿ ಮನೆಯಲ್ಲಿ ನಡೆಯುವ ಅಂಗನವಾಡಿ ಹೊರತುಪಡಿಸಿ ಮತ್ತೇನು ಇಲ್ಲದಿರುವುದು ಆತಂಕ ಹುಟ್ಟಿಸಿತು. ಜಮೀನಿಗೆ ಹಕ್ಕುಪತ್ರ ಇಲ್ಲ, ಅರಣ್ಯ ಹಕ್ಕು ಮಾನ್ಯ ಮಾಡಿಲ್ಲ, ಸಮುದಾಯ ಭವನ ಇಲ್ಲ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿದ್ದರು ಅರ್ಧ ಹಾಡಿಗೆ ಕುಡಿಯಲು ನೀರಿಲ್ಲದ ಸ್ಥಿತಿ, ಪೌಷ್ಟಿಕ ಆಹಾರ ಮೂರು ತಿಂಗಳಿಂದ ಬಂದಿರುವುದಿಲ್ಲ. ಗೃಹ ಲಕ್ಷ್ಮಿ ಹಣ ಬಂದಿಲ್ಲ. ಹಲವರಿಗೆ ಮನೆ ಬೇಕು ಕೃಷಿ ಮಾಡುತ್ತಿರುವ ಭೂಮಿ ಬೇರೆ ಹೆಸರಲ್ಲಿದೆ ಎಂದು ಮನೆ ಕೊಡುತ್ತಿಲ್ಲ. ಪೈರು ಮಾಡಲು ಮಳೆಯಿಲ್ಲ. ಕಾಡಿಗೆ ಹೋಗದಂತೆ ಕಂದಕ, ರೈಲು ಕಂಬಿ ಬೇಲಿ, ಕೆಲವು ಮನೆಗೆ ದೀಪ ಇಲ್ಲ. ಹೀಗೆ ಇಲ್ಲಗಳದ್ದೆ ಹಾಡಿಗಳನ್ನು ನೋಡಿ, ವಿದ್ಯಾರ್ಥಿಗಳಿಗೆ ಇದು ನಮ್ಮ ಸ್ವತಂತ್ರ ಭಾರತದ ಭಾಗವೇ? ಈಗಲೂ ಇಂತಹ ಸ್ಥಿತಿ ಇದೆಯಲ್ಲ ಎಂದು ಚಿಂತೆ ಗೀಡಾದರು.ಕಾಲೇಜಿನಲ್ಲಿ ಓದುವಾಗ, ಪಾಠ ಕೇಳುವಾಗ ಆದಿವಾಸಿಗಳು ಇನ್ನೂ ಹೀಗಿರಲು ಸಾಧ್ಯವೇ ಎಂಬ ಅನುಮಾನಗಳಿದ್ದವು. ಆದರೆ ವಾಸ್ತವ ಸ್ಥಿತಿ ನೋಡಿದಾಗ ಸಂವಿಧಾನ ಜಾರಿಯಾಗುತ್ತಿಲ್ಲ, ಹೈ ಕೋರ್ಟ್ ಆದೇಶ ಪಾಲನೆ ಆಗುತ್ತಿಲ್ಲ, ಹಕ್ಕು ರಕ್ಷಿಸಬೇಕಾದ ಕಾಯ್ದೆ ಗಳು ಜಾರಿಯಾಗಿಲ್ಲ, ಸರ್ಕಾರ, ಪಂಚಾಯತ್, ಇಲಾಖೆಗಳು ಆದಿವಾಸಿಗಳ ರಕ್ಷಣೆಗೆ ನಿಂತಿಲ್ಲ. ಭಾರತೀಯರಾದ ನಾವು ಎಂಬ ಪದದಲ್ಲಿ ಆದಿವಾಸಿ ಗಳನ್ನು ಹೊರತು ಪಡಿಸಲಾಗಿದೆಯೇ ಎಂಬ ನೋವು ಯುವ ವಿದ್ಯಾರ್ಥಿಗಳ ಮನಸ್ಸನ್ನು ಕಲಕಿತು.ಶೆಟ್ಟಳ್ಳಿ ರಾಮು ಮನೆಯಲ್ಲಿ ನೀರು ಕುಡಿದು ಅವರ ಮನೆಯವರು ಬೆಳೆಸಿದ ಹೂ ಗಿಡ ನೋಡಿ ಆನಂದಿಸಿದರು. ನೆರಳಕುಪ್ಪೆ ಸೀತೆಮನೆಗೆ ಹೋಗಿ ನೇರಳೆ ಮಾವು ತಿಂದರು.ಮಾಸ್ತಮ್ಮನ ಹಾಡಿಯಲ್ಲಿ ಮಾಸ್ತಮ್ಮನ ಭೇಟಿ ಮಾಡಿ, ಅವರ ಗಿಡಮೂಲಿಕೆ ಸೇವೆಯನ್ನು ಅರಿತರು. ಬಾಯಿಬಿಟ್ಟು ಕೇಳದ ಆದಿವಾಸಿಗಳಿಗೆ ಅವರ ಮನ ದಿಚ್ಛೆ ಅರಿತು ಸರ್ಕಾರ ಕೆಲಸ ಮಾಡಬೇಕು. ಅವರ ಕಾಡು ದೇಶಕ್ಕೆ ಬೇಕು ಆದರೆ ಅವರ ಬದುಕು ಸರ್ಕಾರ ಹಸನು ಮಾಡಬೇಡವೇ. ಹೈ ಕೋರ್ಟ್ ಆದೇಶ ಪಾಲಿಸಿ ಕಾಡಿಂದ ಹೊರಹಾಕಿದವರಿಗೆ ಪುನರ್ವಸತಿ ನೀಡಬೇಕಲ್ಲವೇ. ಆದಿವಾಸಿಗಳಿಗೆ ನೇರವಾಗದಿದ್ದರೆ ಸರ್ಕಾರ ಇರುವುದಾದರೂ ಏಕೆ ಎಂದು ನೊಂದುಕೊಂಡರು.ವಿದ್ಯಾರ್ಥಿಗಳಿಗೆ ಅಧ್ಯಯನದ ಮಾರ್ಗದರ್ಶನವನ್ನು ಕಾಲೇಜಿನ ಪ್ರಾಧ್ಯಾಪಕರಾದ ಸೌಮ್ಯ, ಪ್ರಸನ್ನಕುಮಾರ್ ಹಾಗೂ ಡೀಡ್ ನಿರ್ದೇಶಕ ಡಾ. ಎಸ್. ಶ್ರೀಕಾಂತ್ ಮಾಡಿದರು.ಹಾಡಿಯ ಹಿರಿಯರು ಸಹಕರಿಸಿದರು. ರೈಲು ಕoಬಿ ಬೇಲಿ ಬಳಿ ನಿಂತು ಕಚ್ಚುವಿನ ಹಳ್ಳಿ ಕಾಡನ್ನು ವಿದ್ಯಾರ್ಥಿಗಳು ವೀಕ್ಷಿಸಿದರು.