ಚಿಕ್ಕಬಳ್ಳಾಪುರ ಮೊದಲ ಪೈಲಟ್ ಜಿಲ್ಲೆ । ಕೆಎಸ್ಎಲ್ಎಸ್ಎನಿಂದ ಕಾರ್ಯಕ್ರಮ: ನ್ಯಾ.ಹಂಚಾಟೆ ಸಂಜೀವಕುಮಾರ್
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್ಎಲ್ಎಸ್ಎ)ವು ಕರ್ನಾಟಕದಾದ್ಯಂತ 50 ಮಿಲಿಯನ್ ಸಸಿಗಳನ್ನು ನೆಡುವ ಮಹತ್ವದ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಚಿಕ್ಕಬಳ್ಳಾಪುರ ಆಡಳಿತಾತ್ಮಕ ನ್ಯಾಯಾಧೀಶರಾದ ಹಂಚಾಟೆ ಸಂಜೀವಕುಮಾರ್ ತಿಳಿಸಿದರು.
ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲೆಯಾದ್ಯಂತ 5 ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಡುವ ಬಗ್ಗೆ ಶನಿವಾರ ಜಿಲ್ಲಾ ನ್ಯಾಯಾಲಯದ 1ನೇ ಮಹಡಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸಸಿ ನೆಡುವ ಅಭಿಯಾನದ ಪೈಲಟ್ ಯೋಜನೆಯಾಗಿ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದ್ದು, ಇಲ್ಲಿ ಮಿಯಾವಾಕಿ ವಿಧಾನದಲ್ಲಿ 5 ಲಕ್ಷ ಸಸಿಗಳನ್ನು ನೆಡುವ ಯೋಜನೆ ಕೈಗೊಳ್ಳಲಾಗಿದೆ ಎಂದರು.ಚಿಕ್ಕಬಳ್ಳಾಪುರ ಗ್ರೀನ್ ರಿಂಗ್ ಬೆಂಗಳೂರು ಕಾರಿಡಾರ್ ವ್ಯಾಪ್ತಿಯಲ್ಲಿಯೂ ಬರುತ್ತದೆ. ಈ ಕಾರಿಡಾರ್ ವಿಧಾನಸೌಧದಿಂದ ಸುಮಾರು 50 ಕಿ.ಮೀ. ವೈಮಾನಿಕ ಅಂತರದೊಳಗಿನ ಪ್ರದೇಶಗಳನ್ನು ಒಳಗೊಂಡಿದೆ. ಈ ಕಾರಿಡಾರ್ ಯೋಜನೆಯಡಿ, ವಿಸ್ತರಿಸುತ್ತಿರುವ ಬೆಂಗಳೂರು ಪ್ರದೇಶದ ಸುತ್ತಮುತ್ತ ಜೀವ ವೈವಿಧ್ಯತೆಯನ್ನು ವೃದ್ಧಿಸಲು, ಅಂತರ್ಜಲ ಮರುಪೂರಣವನ್ನು ಹೆಚ್ಚಿಸಲು ಹಾಗೂ ಧೂಳು ಮತ್ತು ವಾಯುಮಾಲಿನ್ಯವನ್ನು ಕಡಿಮೆ ಮಾಡಲು ರಾಜ್ಯದಲ್ಲಿ 5 ಕೋಟಿ ಸಸಿಗಳನ್ನು ನೆಡುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಗೆ ಹೆಚ್ಚಿನ ಅರಣ್ಯ ಪ್ರದೇಶಗಳ ಅಗತ್ಯ ತುರ್ತಾಗಿ ಇದೆ. ಜಿಲ್ಲೆ ಗಂಭೀರ ಪರಿಸರ ಒತ್ತಡವನ್ನು ಎದುರಿಸುತ್ತಿದ್ದು, ಅಂತರ್ಜಲ ಮಟ್ಟವು ಕುಸಿದಿದೆ. 2023ರ ಫೆಬ್ರವರಿಯಲ್ಲಿ ಜಿಲ್ಲೆಯ ಸರಾಸರಿ ಅಂತರ್ಜಲ ಮಟ್ಟವು ಭೂಮಿಯ ಮಟ್ಟದಿಂದ 17.52 ಮೀಟರ್ ಆಳದಲ್ಲಿತ್ತು. ಆದರೆ 2024ರ ಫೆಬ್ರವರಿಯ ವೇಳೆಗೆ ಅದು 35.66 ಮೀಟರ್ ಆಳಕ್ಕೆ ಕುಸಿದಿದ್ದು, ಸರಾಸರಿ 18.14 ಮೀಟರ್ ಕುಸಿತ ದಾಖಲಾಗಿದೆ.
ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಮಾತನಾಡಿ, ರಾಜ್ಯದಲ್ಲಿ 5 ಕೋಟಿ ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿಯ ಕಾರ್ಯಕ್ಕಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಧರೆ ಫೌಂಡೇಶನ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಆ ಮೂಲಕ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಜವಬ್ದಾರಿಯನ್ನು ತೋರುತ್ತಿದೆ. ಇದರ ಭಾಗವಾಗಿ ಈಗಾಗಲೇ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಇಂದಿರಾ ಗಾಂಧಿ ವಸತಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಕಳೆದ ಏಪ್ರಿಲ್ ಮಾಹೆಯಲ್ಲಿ ಚಾಲನೆ ದೊರಕಿದೆ. ಅದರ ಮುಂದುವರೆದ ಭಾಗವಾಗಿ ಸರ್.ಎಂ.ವಿಶ್ವೇಶ್ವರಯ್ಯ ನವರ ಸ್ಮಾರಕದ ಬಳಿ 5 ಗುಂಟೆ ಜಮೀನಿನಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.ಜಿಲ್ಲಾಧಿಕಾರಿ ಜಿ.ಪ್ರಭು ಅವರು ಮಾತನಾಡಿ, ಈ ವರ್ಷ 5 ಲಕ್ಷ ಗಿಡಗಳನ್ನು ಮುಂಗಾರು ಮಳೆಯ ಅವಧಿಯಲ್ಲಿ ನೆಡಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸಾರ್ವಜನಿಕ ಆಸ್ತಿಗಳಾದ ಸರ್ಕಾರಿ ಶಾಲಾ ಕಾಲೇಜುಗಳ ಆವರಣ, ಸರ್ಕಾರಿ ಆಸ್ಪತ್ರೆಗಳ ಆವರಣ, ಮುಜರಾಯಿ ಇಲಾಖೆಯ ಆಸ್ತಿಗಳು, ದೇವಸ್ಥಾನಗಳ ಆವರಣ, ಸ್ಮಶಾನಗಳು, ಕೆರೆಗಳ ಸುತ್ತಮುತ್ತ, ತ್ಯಾಜ್ಯ ವಿಲೇವಾರಿ ಘಟಕಗಳ ಆವರಣ ಸೇರಿದಂತೆ ಇನ್ನಿತರ ಸರ್ಕಾರಿ ಆಸ್ತಿಗಳ ವ್ಯಾಪ್ತಿಯಲ್ಲಿ ಗಿಡ ನೆಡಲು ಯೋಜಿಸಲಾಗಿದೆ. ಜಿಲ್ಲಾಡಳಿತದ ಕಾರ್ಯಕ್ರಮದ ಜೊತೆಗೆ ಕಾನೂನು ಸೇವಾ ಪ್ರಾಧಿಕಾರದ ಜೊತೆಗೂಡಿ ಹೆಚ್ಚುವರಿಯಾಗಿ 5 ಲಕ್ಷ ಸಸಿಗಳನ್ನು ಬೆಳೆಸುವ ಅರ್ಥಪೂರ್ಣ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುವುದು. ಜಿಲ್ಲೆಯಲ್ಲಿ ಈ ವರ್ಷ ನೆಡಲಿರುವ 10 ಲಕ್ಷ ಗಿಡಗಳ ಪೈಕಿ ಶೇ. 80 ರಷ್ಟು ಗಿಡಗಳನ್ನು ಉಳಿಸಿ ಬೆಳೆಸಲು ಎಲ್ಲಾ ನೆಟ್ಟ ಸಸಿಗಳ ಮೌಲ್ಯಮಾಪನ ಮಾಡುವ ಮೂಲಕ ಈ ಮೌಲ್ಯಯುತವಾದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು ಎಂದರು.
ಈ ವೇಳೆ ಜಿಲ್ಲಾ ನ್ಯಾಯಾಧೀಶರಾದ ಕಾಂತರಾಜ್, ಬಿ.ಶಿಲ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಅಭಿಲಾಷ್, ಧರೆ ಫೌಂಡೇಶನ್ ಪ್ರತಿನಿಧಿ ವೃಷಾಂಕ್ ಬಟ್, ಬಾರ್ ಕೌನ್ಸಿಲ್ ನ ಸದಸ್ಯ ಹರೀಶ್ ಕುಮಾರ್ ಇದ್ದರು.ಸಿಕೆಬಿ-1 ಸುದ್ದಿಗೋಷ್ಠಿಯಲ್ಲಿ ನ್ಯಾ.ಹಂಚಾಟೆ ಸಂಜೀವಕುಮಾರ್ ಮಾತನಾಡಿದರು.