ಬಹುಕಾಲದ ಹಿಂದೆಯೇ ವಸಾಹತುಶಾಹಿ ಆಡಳಿತ ಕೊನೆಗೊಂಡರೂ ಅದರ ಭಿನ್ನ, ಭಿನ್ನ ಪಳೆಯುಳಿಕೆಗಳು ಇಂದಿಗೂ ನಮ್ಮ ಕಣ್ಣೆದುರಿಗಿವೆ.
ಗದಗ: ವಿನಾಶ ಮತ್ತು ವಿಮೋಚನೆ ಕ್ರಿಯೆಗಳೆರಡೂ ಭಾರತದ ಮೇಲೆ ವಸಾಹತುಶಾಹಿತ್ವವು ಉಂಟು ಮಾಡಿದ ಪರಿಣಾಮಗಳು. ಬ್ರಿಟಿಷರ ಕ್ರೌರ್ಯ, ಜೀವವಿರೋಧಿ ಕೃತ್ಯಗಳಿಗೆ ರಿಯಾಯಿತಿ ತೋರದೇ, ಬ್ರಿಟಿಷ್ ಆಳ್ವಿಕೆ ಸಂದರ್ಭದ ಜನಪರ ಮಾನವೀಯ ಘಟನೆಗಳನ್ನೂ ಮರೆಯಬಾರದೆಂದು ರಾಯಚೂರು ಆದಿಕವಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ ತಿಳಿಸಿದರು.ನಗರದ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸಮಾಜ ವಿಜ್ಞಾನ ಸಂಘವು ವಸಾಹತುಶಾಹಿ ಪ್ರಜ್ಞೆ: ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳು ಎಂಬ ವಿಷಯದ ಕುರಿತು ನಡೆದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರೊ. ಕೆ. ವೆಂಕಟೇಶ ಮಾತನಾಡಿ, ಬಹುಕಾಲದ ಹಿಂದೆಯೇ ವಸಾಹತುಶಾಹಿ ಆಡಳಿತ ಕೊನೆಗೊಂಡರೂ ಅದರ ಭಿನ್ನ, ಭಿನ್ನ ಪಳೆಯುಳಿಕೆಗಳು ಇಂದಿಗೂ ನಮ್ಮ ಕಣ್ಣೆದುರಿಗಿವೆ. ಪ್ರತಿನಿತ್ಯವೂ ಎದುರು ಬದುರಾಗುತ್ತಿವೆ. ಆರ್ಥಿಕ ಸಂಪತ್ತನ್ನು ವಶಪಡಿಸಿಕೊಳ್ಳುವ ಮೂಲ ಉದ್ದೇಶದ ವಸಾಹತಿಕರಣವು ಭಾರತೀಯ ಜನತೆಯ ಸಂಸ್ಕೃತಿ, ಮೌಲ್ಯ, ಕಲೆ, ಕಲೆ, ನೃತ್ಯ, ಶಿಕ್ಷಣ ವ್ಯವಸ್ಥೆಯ ಮೇಲೆ ಮಾಡಿದ ಅತಿದೊಡ್ಡ ದಾಳಿ ಎಂದರು.ವಸಾಹತು ರಾಷ್ಟ್ರವಾಗಿದ್ದ ಕೀನ್ಯಾದಲ್ಲಿ ವ್ಯಕ್ತಿಯೊಬ್ಬ ತನ್ನ ಮಾತೃಭಾಷೆಯಲ್ಲಿ ಸಾಹಿತ್ಯ ರಚಿಸಿದ್ದಾನೆ ಎನ್ನುವ ಕಾರಣಕ್ಕೆ ಹತ್ತು ವರ್ಷಗಳ ಕಾಲ ಜೈಲುವಾಸಕ್ಕೆ ತಳ್ಳಲಾಗಿತ್ತು. ನಮ್ಮ ಸಂಸ್ಕೃತಿ, ಧರ್ಮ, ಭಾಷೆಗಳ ಮೇಲೆ ವಸಾಹತುಶಾಹಿ ಮಾಡಿದ ವಿನಾಶದ ಗಾಯಗಳಿವೆ. ಇದರ ಜತೆಗೆ ನಮ್ಮ ಸಂಸ್ಕೃತಿ ಪರಂಪರೆಯ ಕೆಲವು ಗಾಯಗಳಿಗೆ ವಸಾಹತುಶಾಹಿ ಧೋರಣೆಯು ವಿಮೋಚನೆಯ ಮುಲಾಮಾಗಿಯೂ ಕೆಲಸ ಮಾಡಿದೆ ಎಂದರು.ನಮ್ಮ ಶಿಕ್ಷಣ ವ್ಯವಸ್ಥೆಯಂತೂ ಹೆಚ್ಚು ವಸಾಹತುಶಾಹಿ ಮನಸ್ಥಿತಿ ಹೊಂದಿದೆ. ವಸಾಹತುಶಾಹಿ ಚಿಂತನೆಗಳು ನಮ್ಮ ಚಿಂತನೆಗಳಲ್ಲ ಎನ್ನುವ ಕಾರಣಕ್ಕೆ ರಾಮ ಮನೋಹರ ಲೋಹಿಯಾ ವಿದ್ಯಾಭ್ಯಾಸಕ್ಕಾಗಿ ಜರ್ಮನಿಗೆ ತೆರಳುತ್ತಾರೆ. ಬ್ರಿಟಿಷರ ವರ್ಣತಾರತಮ್ಯ ನೀತಿಯನ್ನು ಜಗತ್ತಿನ ಅತಿದೊಡ್ಡ ಶೋಷಣೆ ಎನ್ನುತ್ತಾರೆ. ವಸಾಹತುಶಾಹಿಯ ಕಾರಣಕ್ಕೆ ಭಾರತದ ಮೂಲ ನಿವಾಸಿಗಳಿಗೆ ಕೀಳರಿಮೆ ಉಂಟಾಯಿತೆನ್ನುವ ಲೋಹಿಯಾ ಅವರು ಬ್ರಿಟಿಷರ ಬದಲಾಗಿ ಆಫ್ರಿಕನ್ನರು ಅಥವಾ ನಿಗ್ರೋಗಳು ಭಾರತವನ್ನು ಆಳಿದರೆ ನಮ್ಮ ವರ್ಣನೀತಿ ಬದಲಾಗುತ್ತಿತ್ತು ಎನ್ನುತ್ತಾರೆ. ಇಂತಹ ವಿಸ್ಮೃತಿಗಳ ಮಧ್ಯ ಜನಭಾಷೆ ಮತ್ತು ಜನಸಂಸ್ಕೃತಿಗಳ ಮೇಲೆ ದಬ್ಬಾಳಿಕೆಯ ಮಧ್ಯೆಯೂ ಸಮಾಜದ ಬಹುಪಾಲು ಜನರಿಗೆ ವಸಾಹತುಶಾಹಿತ್ವವು ವಿಮೋಚನೆಯಾಗಿ ಕಂಡಿದೆ ಎಂದರು.
ವಿಚಾರಸಂಕಿರಣದಲ್ಲಿ ಮಂಡಿಸಲ್ಪಡುವ ಲೇಖನಗಳ ಸಂಕಲನ ಛಾಯೆ ಬಿಡುಗಡೆಗೊಳಿಸಲಾಯಿತು. ಐಕ್ಯುಎಸಿ ಸಂಚಾಲಕಿ ಡಾ. ವೀಣಾ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಂತ್ರಿಕ ಗೋಷ್ಠಿಗಳಲ್ಲಿ ಅಸ್ಸಾಂ ವಿಶ್ವವಿದ್ಯಾಲಯ ಸಿಲಚಾರ್‌ನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಹರ್ಷ ಎಸ್. ಹಾಗೂ ಉತ್ತರಪ್ರದೇಶದ ನೋಯ್ಡಾದ ಜೆಎಸ್ಎಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಅನುಷ ಹೆಗ್ಡೆ ವಸಾಹತುಶಾಹಿ ಅನುಭವದ ಕುರಿತು ಮಾತನಾಡಿದರು.ಅಧ್ಯಕ್ಷತೆಯನ್ನು ಆಡಳಿತ ಮಂಡಳಿ ಅಧ್ಯಕ್ಷೆ ರಜನಿ ಪಾಟೀಲ ವಹಿಸಿದ್ದರು. ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು. ಪ್ರಾ. ಡಾ. ಎ.ಕೆ. ಮಠ ಸ್ವಾಗತಿಸಿದರು.