ಆಯುಷ್ ಇಲಾಖೆಯ ಗದಗ ವ್ಯಾಪ್ತಿಯಲ್ಲಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿದ್ದ ಔಷಧಿಗಳಲ್ಲಿ ಭಾರಿ ಪ್ರಮಾಣದ ಕಮಿಷನ್ ದಂಧೆ ನಡೆದಿರುವುದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲಸಿಂಗ್ ಸಮೋರೆಕರ್ ಅವರು ರೋನ್ಪಾಲ್ ಬಯೊಟೆಕ್ ಕಂಪನಿಯ ಪ್ರತಿನಿಧಿ ಜತೆಗಿನ ಆಡಿಯೋದಿಂದ ಬಹಿರಂಗವಾಗಿತ್ತು.
ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲೆಯ ಆಯುಷ್ ಇಲಾಖೆಗೆ ಔಷಧಿ ಪೂರೈಕೆಯಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಕನ್ನಡಪ್ರಭ ಶನಿವಾರ "ಆಯುಷ್ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ " ಶೀರ್ಷಿಕೆಯಡಿ ಪ್ರಕಟವಾದ ವಿಶೇಷ ವರದಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಸ್ಪಂದಿಸಿದ್ದು, ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿಯನ್ನು ಅಮಾನತು ಮಾಡಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಕನ್ನಡಪ್ರಭ ಸೋದರ ಸಂಸ್ಥೆ ಏಷ್ಯಾನೆಟ್ ಸುವರ್ಣ ವಾಹಿನಿಗೆ ಖಚಿತಪಡಿಸಿದ್ದಾರೆ.ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲಸಿಂಗ್ ಸಮೋರೆಕರ್ ಎಂಬವರೇ ಅಮಾನತ್ತಾದ ಅಧಿಕಾರಿ. ಆಯುಷ್ ಇಲಾಖೆಯ ಗದಗ ವ್ಯಾಪ್ತಿಯಲ್ಲಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಿಗೆ ಪೂರೈಕೆಯಾಗುತ್ತಿದ್ದ ಔಷಧಿಗಳಲ್ಲಿ ಭಾರಿ ಪ್ರಮಾಣದ ಕಮಿಷನ್ ದಂಧೆ ನಡೆದಿರುವುದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲಸಿಂಗ್ ಸಮೋರೆಕರ್ ಅವರು ರೋನ್ಪಾಲ್ ಬಯೊಟೆಕ್ ಕಂಪನಿಯ ಪ್ರತಿನಿಧಿ ಜತೆಗಿನ ಆಡಿಯೋದಿಂದ ಬಹಿರಂಗವಾಗಿತ್ತು. ಇದಕ್ಕಿಂತ ಆತಂಕದ ಸಂಗತಿ ಎಂದರೆ ಈ ಕಮಿಷನ್ ದಂಧೆಯ ಸಂದರ್ಭದಲ್ಲಿ ಪೂರೈಕೆಯಾದ ಔಷಧಿಗಳು ಗುಣಮಟ್ಟದ ಪರೀಕ್ಷೆಯಲ್ಲಿ ಫೇಲ್ ಆಗುವ ಮೂಲಕ ಆಘಾತಕಾರಿ ಸತ್ಯ ಹೊರಬಿದ್ದಿದೆ. ಈ ಹಿನ್ನೆಲೆ ಜಿಲ್ಲಾ ಆಯುಷ್ ಅಧಿಕಾರಿ ಡಾ. ಜಯಪಾಲಸಿಂಗ್ ಸಮೋರೆಕರ್ ಅವರನ್ನು ಅಮಾನತು ಮಾಡಲಾಗಿದೆ.
ಬಯಲಾದ ಕಹಿ ಸತ್ಯ: 2024- 25ನೇ ಸಾಲಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪೂರೈಕೆಯಾದ ಆಯುರ್ವೇದ ಔಷಧಿಗಳ ಕುರಿತು ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ, ಔಷಧ ಪರೀಕ್ಷಕರ ಕಚೇರಿಯು ರ‍್ಯಾಂಡಮ್ ಸ್ಯಾಂಪಲ್‌ಗಳನ್ನು ಸಂಗ್ರಹಿಸಿತ್ತು. ಬೆಂಗಳೂರಿನ ಸರ್ಕಾರಿ ಪ್ರಯೋಗಾಲಯದಲ್ಲಿ ನಡೆದ ಈ ಪರೀಕ್ಷೆಯ ವರದಿ ಈಗ ಲಭ್ಯವಾಗಿದ್ದು, ಹಲವು ಔಷಧಿಗಳು ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ (ಎನ್ಎಸ್‌ಕ್ಯು) ಎಂದು ದೃಢಪಟ್ಟಿವೆ. ಈ ಔಷಧಿಗಳು ಗುಣಮಟ್ಟದ ಮಾನದಂಡಗಳನ್ನು ಹೊಂದಿಲ್ಲದ ಕಾರಣ ಸಾರ್ವಜನಿಕ ಬಳಕೆಗೆ ಅನ್‌ಫಿಟ್ ಎಂದು ಘೋಷಿಸಲಾಗಿದೆ. ಲ್ಯಾಬ್ ವರದಿ ಪ್ರತಿಗಳು ಕನ್ನಡಪ್ರಭಕ್ಕೆ ಲಭ್ಯವಾಗಿವೆ.ಕಮಿಷನ್ ಆಸೆ: ಗದಗ ಜಿಲ್ಲಾ ಆಯುಷ್ ಅಧಿಕಾರಿ ಸೇರಿದಂತೆ ಕೆಲವು ಪ್ರಭಾವಿ ಅಧಿಕಾರಿಗಳು ಖಾಸಗಿ ಕಂಪನಿಗಳಿಂದ ದೊಡ್ಡ ಮಟ್ಟದ ಕಮಿಷನ್ ಪಡೆದು, ಕಳಪೆ ಗುಣಮಟ್ಟದ ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಲು ಅನುವು ಮಾಡಿಕೊಟ್ಟಿದ್ದಾರೆ. ಈ ಕುರಿತು ಕನ್ನಡಪ್ರಭ ನಡೆಸಿದ ವಿಶೇಷ ತನಿಖಾ ವರದಿಯು ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದು, ವರದಿ ಪ್ರಕಟವಾದ ಬೆನ್ನಲ್ಲೇ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಲ್ಲದೇ ಅವರನ್ನು ಅಮಾನತು ಕೂಡಾ ಮಾಡಲಾಗಿದೆ.
ಲ್ಯಾಬ್ ವರದಿಯಲ್ಲೇನಿದೆ?: ರೋನ್ಪಾಲ್ ಬಯೊಟೆಕ್ ಸೇರಿದಂತೆ ಹಲವು ಕಂಪನಿಗಳ ಔಷಧಿಗಳು ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಗದಗ, ಮೈಸೂರು ಸೇರಿದಂತೆ ರಾಜ್ಯಾದ್ಯಂತ ಪೂರೈಕೆಯಾದ ಕಳಪೆ ಔಷಧಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕರಿಗೆ ವಿತರಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಗುಣಮಟ್ಟವಿಲ್ಲದ ಈ ಔಷಧಿಗಳು ರೋಗಿಗಳಲ್ಲಿ ಚೇತರಿಕೆ ನೀಡುವ ಬದಲು ಆರೋಗ್ಯವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆ ಇದೆ ಎಂದು ತಜ್ಞರು, ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.ಲೋಕಾ ಅಧಿಕಾರಿಗಳಿಂದ ಪರಿಶೀಲನೆಶನಿವಾರ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲಿಯೇ ಗದಗ ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿಗಳು ಬೆಟಗೇರಿಯಲ್ಲಿರುವ ಜಿಲ್ಲಾ ಆಯುಷ್ ಇಲಾಖೆಯ ಕಚೇರಿಗೆ ಭೇಟಿ ನೀಡಿ, ಕಡತ ಪರಿಶೀಲನೆ ಹಾಗೂ ಟೆಂಡರ್ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದು, ಮುಂಬರುವ ದಿನಗಳಲ್ಲಿ ಈ ಕುರಿತು ಲೋಕಾ ತನಿಖೆ ಕೂಡಾ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.
ಕ್ರಿಮಿನಲ್ ಮೊಕದ್ದಮೆ: ಅಧಿಕಾರಿಗಳನ್ನು ಅಮಾನತು ಮಾಡಿದರೆ ಸಾಲದು. ಬಡ ರೋಗಿಗಳ ಜೀವದ ಜತೆ ಆಟವಾಡಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಹಾಗೂ ಕಳಪೆ ಔಷಧಿ ಪೂರೈಸಿದ ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಸರ್ಕಾರಿ ಆಸ್ಪತ್ರೆ ನಂಬಿ ಬರುವ ಬಡವರಿಗೆ ಗುಣಮಟ್ಟದ ಔಷಧಿ ನೀಡುವುದು ಸರ್ಕಾರದ ಕರ್ತವ್ಯ. ಅಲ್ಲಿಯೂ ಕಮಿಷನ್ ದಂಧೆ ನಡೆಸುವ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಶರಣಯ್ಯ ಹಿರೇಮಠ ತಿಳಿಸಿದರು.