ಸಾರ್ವಜನಿಕ ಹಿತಾಸಕ್ತಿ ಮತ್ತು ಜನಪರ ಕಾಳಜಿ ಇರುವವರು ವಿಧಾನಸೌಧಕ್ಕೆ ಹೋದರೆ ಜನರ ಅಭಿವೃದ್ಧಿ ಕೆಲಸಗಳು ಆಗಲು ಸಾಧ್ಯವಾಗುತ್ತದೆ

ಯಲಬುರ್ಗಾ: ಮುಖ್ಯಮಂತ್ರಿ ಸ್ಥಾನದ ಬಗ್ಗೆ ಆಗಿರುವ ಒಪ್ಪಂದದ ಬಗ್ಗೆ ನನಗೆ ಮಾಹಿತಿ ಇಲ್ಲ. ಸಿಎಂ, ಡಿಸಿಎಂ ಹಾಗೂ ಪಕ್ಷದ ವರಿಷ್ಠರಿಗೆ ಗೊತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ಜೊತೆ ಆಗಿರುವ ಒಪ್ಪಂದದ ಪ್ರಕಾರ ನಡೆದುಕೊಳ್ಳುವೆ ಎಂದಿರುವ ಡಿಸಿಎಂ ಡಿ.ಕೆ. ಶಿವಕುಮಾರ ಮಾತಿಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಪ್ರಿಯಾಂಕ್ ಖರ್ಗೆ ಅವರು ಅಮಿತ್ ಷಾ ಬಗ್ಗೆ ಯಾವಾಗ, ಏನು ಮಾತಾಡಿದ್ದಾರೆ ಅಂತ ನನಗೆ ಗೊತ್ತಿಲ್ಲ. ಪ್ರಧಾನ ಮಂತ್ರಿ ಮತ್ತು ಗೃಹಮಂತ್ರಿಗಳು ಘನತೆ ಗೌರವದಿಂದ ನಡೆದುಕೊಳ್ಳಬೇಕು. ತಮ್ಮ ಕಾರ್ಯವೈಖರಿ, ಕೆಲಸದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಅದೆಲ್ಲ ಬಿಟ್ಟು ನೆಹರುಗೆ ನಿಂದಿಸುವುದು, ಗಾಂಧೀಜಿ ಹೆಸರು ಬದಲಾಯಿಸುವುದು ಈ ರೀತಿಯಾದ ಕೇಂದ್ರ ಸರ್ಕಾರದ ಧೋರಣೆ, ಜನರ ಭಾವನೆ ಜತೆಗೆ ಚೆಲ್ಲಾಟ ಆಡುತ್ತಿದ್ದಾರೆ. ನರೇಗಾ ಕಾರ್ಯಕ್ರಮವನ್ನು ಯುಪಿಎ ಸರ್ಕಾರದ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಕೊಟ್ಟಿರುವ ದೇಶದ ಜನರ ಹಕ್ಕಾಗಿದೆ. ಗಾಂಧೀಜಿ ಹೆಸರು ತೆಗೆಯುವ ಹುನ್ನಾರ ಇದೆಯಲ್ಲ, ಅದು ಆರ್‌ಎಸ್‌ಎಸ್‌ನ ನಿಜವಾದ ಮುಖವಾಡ ಕಳಚಿದೆ. ಕಾಂಗ್ರೆಸ್ ಸರ್ಕಾರವು ೪೦ವರ್ಷಗಳಿಂದ ಮಾಡಿದ ಕೆಲಸವನ್ನು ಟೀಕಿಸುವ ಕೇಂದ್ರ ಸರ್ಕಾರ ತಮ್ಮ ೧೧ ವರ್ಷಗಳ ಸಾಧನೆ ಏನು? ಎಂದು ಹೇಳಲಿ ಎಂದರು.

ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮೀ ಹಣ ಹಾಕಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ರಾಯರಡ್ಡಿ, ಕಣ್ ತಪ್ಪಿನಿಂದ ಅಥವಾ ಮಾಹಿತಿ ಕೊರತೆಯಿಂದ ಹಣ ಜಮೆ ಆಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದರು. ಅದಕ್ಕೆ ಅವರು ವಿಷಾದ ವ್ಯಕ್ತಪಡಿಸಿ ಸೌಜನ್ಯತೆ ತೋರಿದ್ದಾರೆ. ಅದನ್ನು ವಿರೋಧ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು. ಬಾಕಿ ಹಣ ಜಮೆಯಾಗಲಿದೆ ಎಂದರು.