ಕನ್ನಡಪ್ರಭವಾರ್ತೆ ತಿಪಟೂರು

ಎಪಿಎಂಸಿಯಲ್ಲಿ ಈಗಾಗಲೇ ಕೊಬ್ಬರಿ ವ್ಯಾಪಾರಕ್ಕೆ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದ್ದು, ಈಗ ಅಡಿಕೆ ಖರೀದಿ ಕೇಂದ್ರ ಆರಂಭವಾಗಿರುವುದು ಈ ಭಾಗದ ಅಡಿಕೆ ಬೆಳೆಗಾರ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.

ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ಕ್ಯಾಂಪ್ಕೊ ಸಂಸ್ಥೆಯ ಅಡಿಕೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಡಿಕೆ ಬೆಳೆಗಾರರಿಗೆ ನ್ಯಾಯಯುತ ಬೆಲೆ ಹಾಗೂ ಸುಗಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಅಡಕೆ ಖರೀದಿ ಕೇಂದ್ರ ಪ್ರಾರಂಭಿಸಲಾಗುತ್ತಿದ್ದು ತಾಲೂಕಿನ ಹಾಗೂ ಸುತ್ತಲಿನ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಕ್ಯಾಂಪ್ಕೊ ಜೊತೆಗೆ ಖಾಸಗಿ ವ್ಯಾಪಾರಿಗಳಿಗೂ ಅಡಿಕೆ ಖರೀದಿಗೆ ಅವಕಾಶ ನೀಡಲಾಗುವುದು. ಇದರಿಂದ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆ ನಿರ್ಮಾಣವಾಗಿ ರೈತರಿಗೆ ಉತ್ತಮ ಬೆಲೆ ದೊರೆಯಲಿದೆ. ಮಾರುಕಟ್ಟೆ ವ್ಯವಸ್ಥೆಯಲ್ಲಿ ಯಾವುದೇ ಅಕ್ರಮ ವ್ಯಸ್ಥೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ರೈತರ ಉತ್ಪನ್ನಗಳಿಗೆ ಗುಣಮಟ್ಟದ ಮಾರುಕಟ್ಟೆ ಒದಗಿಸುವುದು ಸರ್ಕಾರದ ಆದ್ಯತೆಯಾಗಿದ್ದು, ರಾಸಾಯನಿಕ ಮುಕ್ತ ಅಡಿಕೆ ಉತ್ಪಾದನೆ ಮತ್ತು ಮಾರಾಟಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು. ಸಹಕಾರ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಜಾರಿಗೆ ತರುತ್ತಿದ್ದು, ರೈತಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ. ರೈತರು ಬೆಳೆದ ಬೆಳೆಗಳಿಗೆ ಸ್ಥಿರ ಮತ್ತು ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯನಿರ್ವಹಿಸುತ್ತಿದ್ದು, ಮಾರುಕಟ್ಟೆಯ ಶಿಸ್ತು ಮತ್ತು ವಿಶ್ವಾಸಾರ್ಹತೆಯನ್ನು ಹಾಳು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಪ್ರಾರಂಭದ ದಿನವೇ ಕ್ಯಾಂಪ್ಕೊ ವತಿಯಿಂದ ಪ್ರತಿ ಕೆ.ಜಿ. ಅಡಿಕೆಯನ್ನು ರೈತರಿಂದ ರು. ೫೨೫ ದರದಲ್ಲಿ ಖರೀದಿಸಲಾಯಿತು. ಜೊತೆಗೆ ಸಂಸ್ಥೆಯ ಶಿಕ್ಷಣ ಮತ್ತು ಆರೋಗ್ಯ ನಿಧಿಯಡಿ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಯಿತು. ಎಪಿಎಂಸಿ ಸದಸ್ಯ ರೈತರ ಸಭೆಯನ್ನೂ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎಪಿಎಂಸಿ ಕಾರ್ಯದರ್ಶಿ ಎಸ್.ಬಿ. ನ್ಯಾಮೇಗೌಡ, ಕ್ಯಾಂಪ್ಕೊ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಸತ್ಯನಾರಾಯಣ, ನಿರ್ದೇಶಕರಾದ ರಾಧಾಕೃಷ್ಣ, ಮಹೇಶ್, ತೀರ್ಥರಾಮ, ವೆಂಕಟರಮಣ, ವಿವೇಕಾನಂದ, ಗಣೇಶ್, ಮಾಲಿನಿ ಪ್ರಸಾದ್, ಸೌಮ್ಯ ಪ್ರಕಾಶ್, ಗಣೇಶ್ ಪರಕಟ್ಟೆ, ರಾಮನಾಥಪುರ–ಅರಸೀಕೆರೆ ಸಮಿತಿಯ ಸಿಇಒ ಹಾಗೂ ತಾಲೂಕಿನ ಅಡಿಕೆ ಬೆಳೆಗಾರರು ಉಪಸ್ಥಿತರಿದ್ದರು.