ಸಾರಾಂಶ
ಕನ್ನಡಪ್ರಭ ವಾರ್ತೆ ಬೀರೂರು
ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಅನೇಕ ಮೂಲಭೂತ ಸೌಕರ್ಯಗಳು ಇನ್ನು ತಲುಪಿಲ್ಲ. ಮುಂದಿನ ದಿನಗಳಲ್ಲಿ ಅವುಗಳನ್ನು ಪೂರೈಸಲು ಆದ್ಯತೆ ನೀಡಲಾಗುತ್ತಿದ್ದು, ಗ್ರಾಮೀಣ ಭಾಗದ ಜನರ ಅಭಿವೃದ್ದಿಗಾಗಿ ಸದಾ ಬದ್ಧ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.ಅವರು ಪಟ್ಟಣ ಸಮೀಪದ ಜೋಡಿತಿಮ್ಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಇಂಗ್ಲಾರನಹಳ್ಳಿ ಗ್ರಾಮದಲ್ಲಿ ಬುಧವಾರ ನೂತನ ಸಮುದಾಯ ಭವನ ನಿರ್ಮಾಣ ಮಾಡುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಗ್ರಾಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಗ್ರಾಮದಲ್ಲಿ ಸಭೆ ಸಮಾರಂಭ ನಡೆಸಲು ಸಮುದಾಯ ಭವನದ ಅವಶ್ಯಕತೆ ಇದ್ದು ತಾವುಗಳು ಶಾಸಕರಾದರೇ ಸಮುದಾಯ ನಿರ್ಮಾಣ ಮಾಡಿಕೊಡುವಂತೆ ಬೇಡಿಕೆಯನ್ನು ಇಟ್ಟಿದ್ದರು. ಅದರಂತೆ ನಿಮ್ಮ ಮಾತಿಗೆ ಗೌರವಿಸಿ ಇಂದು ಭವನ ನಿರ್ಮಾಣಕ್ಕೆ ನನ್ನ ಶಾಸಕರ ನಿಧಿಯಿಂದ 10ಲಕ್ಷರೂ ಹಣ ಬಿಡುಗಡೆ ಮಾಡಿಸಿದ್ದೇನೆ. ಇಂದು ಅದರ ಭೂಮಿಪೂಜೆ ನಡೆಯುತ್ತಿದ್ದು ಹಣದ ಕೊರತೆಯಾದರೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನ ನೀಡುತ್ತೇನೆ ಎಂದರು.ಈ ಸಮುದಾಯ ಭವನ ನಿರ್ಮಾಣದಿಂದ ಗ್ರಾಮದಲ್ಲಿ ಆರ್ಥಿಕವಾಗಿ ಹಿಂದುಳಿದ ರೈತಾಪಿ ಬಡ ಜನರಿಗೆ ಮದುವೆ, ನಾಮಕರಣ ಮತ್ತಿತರ ಸಭೆ ಸಮಾರಂಭ ಗಳನ್ನು ನಡೆಸಲು ಅನುಕೂಲವಾಗುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಸಮುದಾಯ ಭವನ ಇಲ್ಲದ ಗ್ರಾಮಗಳಿಗೆ ಹಣ ಬಿಡುಗಡೆ ಮಾಡಿಸಿ ಕೆಲವು ಗ್ರಾಮಗಳಲ್ಲು ಸುಸಜ್ಜಿತವಾದ ಸಮುದಾಯ ಭವನಗಳು ತಲೆ ಎತ್ತುತ್ತಿವೆ. ನನ್ನ ಶಾಸಕ ಸ್ಥಾನದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ಸದಾ ದುಡಿಯಲು ಸಿದ್ಧ ಎಂದರು.
ಬೀರೂರು ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ನಿಮ್ಮಂತ ಕುಗ್ರಾಮ ಮತ್ತು ಗಡಿ ಭಾಗದ ಗ್ರಾಮಗಳಿಗೆ ಯಾವ ಶಾಸಕರು ಸಹ ತಲೆಹಾಕುವುದಿಲ್ಲ. ನಮ್ಮ ಶಾಸಕ ಆನಂದ್ ರವರು ನಿಮ್ಮ ಮಾತನ್ನು ಗೌರವಿಸಿ, ಅದರಂತೆ ಕಾಮಗಾರಿಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಕ್ಷೇತ್ರದ ಅಭಿವೃದ್ದಾಗಿ ಶ್ರಮಿಸುತ್ತಿರುವ ಅಂತವರನ್ನು ಆಯ್ಕೆ ಮಾಡಿಕೊಂಡ ನಾವೇ ಧನ್ಯರು. ಗ್ರಾಮಸ್ಥರು ಸಮುದಾಯ ಭವನ ನಿರ್ಮಾಣಕ್ಕೆ ಗ್ರಾಮದಲ್ಲಿ ಯಾವುದೇ ದ್ವೇಷವಿದ್ದರು ಒಗ್ಗಟ್ಟಾಗಿ ಮುಂದೆ ನಿಂತು ಕಾಮಗಾರಿ ಮಾಡಿಸಿಕೊಳ್ಳಿ. ಮುಂದೆ ಬರುವ ಕ್ಷೇತ್ರದ ಚುನಾವಣೆ ವೇಳೆಗೆ ಕಾಮಗಾರಿ ಮುಗಿಸಿಕೊಂಡು ಶಾಸಕ ಆನಂದ್ ರವರೇ ಶೀಘ್ರವಾಗಿ ಉದ್ಘಾಟನೆ ಮಾಡಲಿ ಎಂದರು.ಕೆ.ಐ.ಡಿ.ಆರ್.ಎಲ್ ನ ಎಇಇ ಅಶ್ವಿನಿ, ಇಂಜಿನಿಯರ್ ಗಿರೀಶ್, ಮಾಜಿ ತಾ.ಪಂ.ಸದಸ್ಯ ಹೊಗರೇಹಳ್ಳಿ ಶಶಿಕುಮಾರ್, ದೋಗೆಹಳ್ಳಿ ಸೋಮೇಶ್, ಬ್ಯಾಗಡೇಹಳ್ಳಿ ಶಿವು ದೇವಾಲಯ ಕಮಿಟಿ ಅಧ್ಯಕ್ಷ ವರದರಾಜು, ಗ್ರಾಮದ ಮುಖಂಡರುಗಳಾದ ಕರಿಬಸಪ್ಪ, ರಾಜಕುಮಾರ್, ಪ್ರದೀಪ್, ಗಿರೀಶ್, ನಿಂಗೇಶ್, ಮಹಾಲಿಂಗಪ್ಪ ಸೇರಿ ಇತರರು ಇದ್ದರು.