ಕನ್ನಡಪ್ರಭ ವಾರ್ತೆ ಯಲ್ಲಾಪುರ

ಅಡಕೆ ಬೆಳೆಗಾರರಿಗೆ ಕಾಲಕಾಲಕ್ಕೆ ಎದುರಾಗುತ್ತಿರುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ. ಬೆಳೆಗಾರರ ಹಿತ ಕಾಯಲು ಸದಾ ಬದ್ಧ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ಅಧ್ಯಕ್ಷ ಎನ್.ಕೆ. ಭಟ್ಟ ಹಾಗೂ ನಿರ್ದೇಶಕ ಮಂಡಳಿಯಿಂದ ಟಿಎಂಎಸ್ ಸದಸ್ಯರಿಗೆ ಹಾಗೂ ಹಿತೈಷಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಭೆ ಉದ್ಘಾಟಿಸಿ ಮಾತನಾಡಿದರು.

ಅಡಕೆ ಬೆಳೆಯುವ ಕ್ಷೇತ್ರ ವಿಸ್ತರಣೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಪಾರಂಪರಿಕ ಅಡಕೆ ಬೆಳೆಗಾರರಾದ ನಾವು ಕೇವಲ ಅಡಕೆಯನ್ನು ಮಾತ್ರ ನೆಚ್ಚಿಕೊಳ್ಳದೇ, ಪರ್ಯಾಯ ಬೆಳೆಗಳತ್ತ ಗಂಭೀರವಾಗಿ ಗಮನ ಹರಿಸಬೇಕಾಗಿದೆ ಎಂದರು.

ಸಹಕಾರಿ ಸಂಘಗಳು ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿವೆ. ಸಂಸ್ಥೆಯ ಬಗ್ಗೆ ಭಾವನೆ ಹೊಂದಿದ ಜಾಗೃತ ಸದಸ್ಯರಿರುವ ಕಾರಣಕ್ಕೆ ಟಿಎಂಎಸ್ ನಲ್ಲಿ ಎನ್.ಕೆ. ಭಟ್ಟ ತಂಡಕ್ಕೆ ಗೆಲುವು ದೊರೆತಿದೆ. ಸಹಕಾರಿ ರಂಗದ ಪಾವಿತ್ರ್ಯತೆ ಉಳಿಯುವ ಭರವಸೆಯನ್ನು ಈ ಫಲಿತಾಂಶ ನೀಡಿದೆ. ಎನ್.ಕೆ. ಭಟ್ಟ ತಂಡದ ಗೆಲುವು ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ನೈತಿಕ ಶಕ್ತಿ ನೀಡಿದೆ. ನಿತ್ಯವೂ ಸಹಕಾರಿ ರಂಗದಲ್ಲಿ ರಾಜಕೀಯ ಪ್ರವೇಶ ಬೇಡ ಎನ್ನುತ್ತಲೇ ರಾಜಕೀಯ ಮಾಡುವವರಿಗೆ ತಕ್ಕ ಉತ್ತರವನ್ನು ಈ ಫಲಿತಾಂಶ ನೀಡಿದೆ ಎಂದರು.


ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮಾತನಾಡಿ, ಸಹಕಾರಿ ರಂಗದ ಉಳಿವಿನ ಭರವಸೆಯನ್ನು ಟಿಎಂಎಸ್ ಚುನಾವಣೆಯಲ್ಲಿ ರೈತರು ತೋರಿಸಿದ್ದಾರೆ ಎಂದರು.

ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಅಗ್ಗಾಶಿಕುಂಬ್ರಿ ಅವರ ರೈತಪರ ಹೋರಾಟಗಳಿಗೆ ಜಯ ದೊರೆತಿದೆ. ಅವರ ತಂಡದ ಮೇಲೆ ರೈತರ ನಿರೀಕ್ಷೆ ಇನ್ನಷ್ಟು ಹೆಚ್ಚಿದೆ ಎಂದರು.

ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಟಿಎಂಎಸ್ ಉಪಾಧ್ಯಕ್ಷ ನರಸಿಂಹ ಕೋಣೆಮನೆ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಕೃಷಿಕ ನಾರಾಯಣ ಜಡ್ಡಿಪಾಲ, ಪ್ರಮುಖರಾದ ಎಲ್.ಟಿ. ಪಾಟೀಲ, ರಾಘವೇಂದ್ರ ಭಟ್ಟ, ಆರ್.ವಿ. ಹೆಗಡೆ ಇತರರಿದ್ದರು.

ವೇದಾ ಭಟ್ಟ ಪ್ರಾರ್ಥಿಸಿದರು. ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ ಸ್ವಾಗತಿಸಿದರು. ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಸುದೀಪ ಹೆಗಡೆ ನೂತನ ಆಡಳಿತ ಮಂಡಳಿಯನ್ನು ಪರಿಚಯಿಸಿದರು. ವಿ.ಟಿ. ಹೆಗಡೆ ತೊಂಡೆಕೆರೆ ನಿರ್ವಹಿಸಿದರು.