ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬಡ್ತಿ ವಿಚಾರವಾಗಿ ಪೂರ್ವ ವಲಯ ಐಜಿಪಿ ಡಾ। ಬಿ.ಆರ್‌.ರವಿಕಾಂತೇಗೌಡ ಸೇರಿ 318 ಅಧಿಕಾರಿಗಳಿಗೆ ಸಂಬಂಧಿಸಿದ ನಾಪತ್ತೆಯಾಗಿವೆ ಎನ್ನಲಾದ ದಾಖಲೆಗಳ ಶೋಧನೆಗೆ ಸಮಿತಿಯೊಂದನ್ನು ರಾಜ್ಯ ಗೃಹ ಇಲಾಖೆ ರಚಿಸಿದೆ.

ಸೇವಾ ಹಿರಿತನ ಆಧಾರದ ಮೇರೆಗೆ ಉಪಾಧೀಕ್ಷರ ಹುದ್ದೆಯಿಂದ ಹೆಚ್ಚುವರಿ ಅಧೀಕ್ಷರ (ನಾನ್‌ ಐಪಿಎಸ್-ಎಎಸ್ಪಿ) ಹುದ್ದೆ ಪದನ್ನೋತಿಗೆ ಸಂಬಂಧಿಸಿದ ದಾಖಲೆಗಳು ‘ಕಣ್ಮರೆ’ಯಾಗಿವೆ ಎಂದು ಸರ್ಕಾರ ಹೇಳಿದೆ. ಈಗ ಉಪಾಧೀಕ್ಷರ (ಸಿವಿಎಲ್‌) ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದ ಬೆನ್ನಲ್ಲೇ ಕಡತಗಳು ನಾಪತ್ತೆ ಸಂಗತಿ ಚರ್ಚೆಗೆ ಬಂದಿದೆ.

ಅಲ್ಲದೆ ಮುಂಬಡ್ತಿ ವಿಷಯವಾಗಿ ನೇರ ನೇಮಕಾತಿ ಡಿವೈಎಸ್ಪಿ (ಡಿಆರ್‌) ಹಾಗೂ ಮುಂಬಡ್ತಿ ಡಿವೈಎಸ್ಪಿ (ಪಿಆರ್‌)ಗಳ ಮಧ್ಯೆ ಜಟಾಪಟಿ ನಡೆದಿದೆ. ಹಳೇ ದಾಖಲೆಗಳಿಲ್ಲದೆ ಜ್ಯೇಷ್ಠತಾ ಪಟ್ಟಿ ಪ್ರಕಟಣೆಗೆ ಪಿಆರ್‌ ಡಿವೈಎಸ್ಪಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿರೋಧವಾಗಿ ಪಿಆರ್ ಡಿವೈಎಸ್ಪಿಗಳು ಸಹ ಹಳೇ ತಪ್ಪುಗಳನ್ನು ಸರ್ಕಾರ ಸರಿಪಡಿಸಿದೆ ಎಂದು ವಾದಿಸಿದ್ದಾರೆ.


ಈ ವಿವಾದವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ, ನಾಪತ್ತೆ ಕಡತಗಳ ಶೋಧನೆಗೆ ಒಳಾಡಳಿತ ಇಲಾಖೆ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಐವರು ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿದೆ. ಈ ಸಂಬಂಧ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್‌.ರಶ್ಮಿ ಆದೇಶಿಸಿದ್ದಾರೆ. ಈಗ ಸಮಿತಿ ಸಲ್ಲಿಸುವ ವರದಿ ಮುಂಬಡ್ತಿ ವಿಷಯದಲ್ಲಿ ಬಹುಮುಖ್ಯವಾಗಲಿದೆ ಎಂದು ಇಲಾಖೆಯಲ್ಲಿ ಮಾತುಗಳು ಕೇಳಿವೆ ಬಂದಿವೆ.

ಐಪಿಎಸ್‌ ದಾಖಲೆ ನಾಪತ್ತೆ ಹೇಗೆ?:

ಸೇವಾ ಹಿರಿತನ ಆಧಾರದ ಮೇರೆಗೆ ಡಿವೈಎಸ್ಪಿ ಜ್ಯೇಷ್ಠತಾ ಪಟ್ಟಿ ರಚನೆಗೆ ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಕೆ.ಚಿನ್ನಮಾರಯ್ಯ ಸಲಹೆಗಾರರನ್ನಾಗಿ ಸರ್ಕಾರ ನೇಮಿಸಿತ್ತು. ಇತ್ತೀಚೆಗೆ ಈ ಏಕಸದಸ್ಯ ಸಮಿತಿ ಶಿಫಾರಸು ಆಧರಿಸಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ರಾಜ್ಯಪತ್ರದಲ್ಲಿ ಸರ್ಕಾರ ಪಟ್ಟಿಸಿದೆ. ಆದರೆ 1984 ರಿಂದ 2007ರವರೆಗೆ ಮುಂಬಡ್ತಿ ಹೊಂದಿದ್ದ ಸುಮಾರು 318 ಅಧಿಕಾರಿಗಳಿಗೆ ಸಂಬಂಧಿಸಿದ ದಾಖಲೆಗಳು ನಾಪತ್ತೆಯಾಗಿವೆ ಎಂದು ಸಮಿತಿ ಹೇಳಿತ್ತು. ಈ ಡಿವೈಎಸ್ಪಿಗಳ ಪೈಕಿ 16 ಮಂದಿ ಡಿಆರ್ ಹಾಗೂ 302 ಪಿಆರ್ ಡಿವೈಎಸ್ಪಿಗಳು ಸೇರಿದ್ದಾರೆ. ಗಮನಾರ್ಹ ಸಂಗತಿ ಅಂದರೆ ಡಿಆರ್‌ ಅಧಿಕಾರಿಗಳು ಎಲ್ಲರೂ ಐಪಿಎಸ್ ಹುದ್ದೆಗೆ ಸಹ ಬಡ್ತಿ ಪಡೆದಿದ್ದಾರೆ. ಆದರೆ ಹಳೇ ಕಡತ ನಾಪತ್ತೆಯಾಗಿವೆ ಎಂಬ ಸಂಗತಿ ಆಕ್ಷೇಪಣೆಗೆ ಕಾರಣವಾಗಿದೆ. ಅದರಲ್ಲೂ ಐಜಿಪಿ ಡಾ। ಬಿ.ಆರ್‌.ರವಿಕಾಂತೇಗೌಡ, ರಾಜ್ಯ ಗುಪ್ತದಳದ ಮಾಜಿ ಮುಖ್ಯಸ್ಥ ನಿವೃತ್ತ ಐಜಿಪಿ ಗೋಪಾಲ್ ಹೊಸೂರು, ಡಿಐಜಿಗಳಾದ ಡಿ.ದೇವರಾಜ್, ಎಸ್‌.ಗಿರೀಶ್‌, ಅಬ್ದುಲ್‌ ಅಹದ್‌, ಡಾ। ಧರಣಿದೇವಿ ಹಾಗೂ ಡಿ.ಆರ್‌.ಸಿರಿಗೌರಿ ಸೇರಿ ಘಟಾನುಘಟ್ಟಿ ಅಧಿಕಾರಿಗಳ ದಾಖಲೆಗಳು ನಾಪತ್ತೆಯಾಗಿವೆ.-ಬಾಕ್ಸ್‌-

ಯಾರ್‍ಯಾರು ಸಮಿತಿಯಲ್ಲಿ?

ಚಂದ್ರಕಾಂತ್‌- ಶಾಖಾಧಿಕಾರಿ ಪೊಲೀಸ್ ಸೇವೆಗಳು, ವಿಶ್ವನಾಥ್‌- ಸಹಾಯಕ ಆಡಳಿತಾಧಿಕಾರಿ ಎಚ್ಆರ್‌ಎಂ-1 ಡಿಜಿ-ಐಜಿಪಿ ಕಚೇರಿ, ಹನುಮಂತಪ್ಪ- ಹಿರಿಯ ಸಹಾಯಕರು ಪೊಲೀಸ್ ಸೇವೆಗಳು-ಎ ಒಳಾಡಳಿತ ಇಲಾಖೆ, ಸಾಗರ್- ದ್ವಿತೀಯ ದರ್ಜೆ ಸಹಾಯಕರು ಡಿಜಿ-ಐಜಿಪಿ ಕಚೇರಿ ಹಾಗೂ ನಿತ್ಯಾ-ಡಾಟಾ ಎಂಟ್ರಿ ಆಪರೇಟರ್ ಒಳಾಡಳಿತ ಇಲಾಖೆ.

---

ಎಜೆ ಕಚೇರಿಗೆ ಸಮಿತಿ ಪತ್ರ

ನಾಪತ್ತೆ ದಾಖಲೆಗಳ ಪತ್ತೆಗೆ ಗೃಹ ಇಲಾಖೆ ಸಮಿತಿ ಕಾರ್ಯಾಚರಣೆಗಿಳಿದೆ. ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯಲ್ಲಿ ಕೆಲ ಸರ್ಕಾರದ ಆದೇಶಗಳು ಲಭ್ಯವಾಗಿರುವುವೆಂದು ತಿಳಿಸಲಾಗಿದೆ. ಈ ಮಾಹಿತಿ ಹಾಗೂ ದಾಖಲೆಗಳನ್ನು ಸರ್ಕಾರದ ಹಂತದ ಮಹಾಲೇಖಪಾಲರ ಕಚೇರಿ ಹಾಗೂ ಡಿಜಿ-ಐಜಿಪಿ ಕಚೇರಿಯಲ್ಲಿ ಶೋಧಿಸುವಂತೆ ಸಮಿತಿಗೆ ಸರ್ಕಾರ ಸೂಚಿಸಿದೆ. ಈ ಹಿನ್ನಲೆಯಲ್ಲಿ ಮಹಾಲೇಖಪಾಲರ ಕಚೇರಿಗೆ ಸಮಿತಿ ಪತ್ರ ಬರೆದು ಮಾಹಿತಿ ಕೋರಿದೆ ಎಂದು ತಿಳಿದು ಬಂದಿದೆ.

----

ಒಬ್ಬರ ಹೆಸರಿನಲ್ಲಿ

ಹೆಚ್ಚುವರಿ ಹುದ್ದೆ

ಹಲವು ವರ್ಷಗಳಿಂದ ಡಿಆರ್‌ ಡಿವೈಎಸ್ಪಿಗಳಿಗೆ ಮುಂಬಡ್ತಿ ತಪ್ಪಿಸಲು ಕೆಲವರು ಭಾನಗಡಿ ಮಾಡಿದ್ದಾರೆ. ಇದರಿಂದ ಒಬ್ಬರ ಹೆಸರಿನಲ್ಲಿ ನಾಲ್ಕೈದು ಹುದ್ದೆಗಳು ಸೃಜನೆಯಾಗಿದ್ದವು. ಆ ಹುದ್ದೆಗಳ ದಾಖಲೆಗಳು ನಾಪತ್ತೆಯಾಗಿವೆ ಎಂದು ಡಿಆರ್ ಡಿವೈಎಸ್ಪಿಗಳು ಆರೋಪಿಸಿದ್ದಾರೆ.

ನಿವೃತ್ತ ವೇತನ ಸೌಲಭ್ಯ ಹೇಗೆ?:

ಕಡತಗಳು ನಾಪತ್ತೆಯಾಗಿದ್ದರೆ ಅಧಿಕಾರಿಗಳಿಗೆ ನಿವೃತ್ತ ಸೌಲಭ್ಯ ಹೇಗೆ ಸಿಗುತ್ತದೆ. ಕೆಲವರು ಗೊಂದಲ ಸೃಷ್ಟಿಸುವ ಸಲುವಾಗಿ ಏಕಸದಸ್ಯ ಸಮಿತಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಮೂರು ದಶಕಗಳು ಸೇವೆ ಸಲ್ಲಿಸಿದವರ ಅಧಿಕಾರಿಗಳಿಗೆ ಸಂಬಂಧಿಸಿದ ದಾಖಲೆಗಳು ನಾಪತ್ತೆಯಾಗಲು ಸಾಧ್ಯವೇ? ಎಜೆ ಕಚೇರಿ, ಎಚ್‌ಆರ್‌ಎಂಎಸ್ ಅಥವಾ ಡಿಜಿ-ಐಜಿಪಿ ಕಚೇರಿಯಲ್ಲಿ ಶೋಧಿಸಿದರೆ ಕಡತಗಳು ಸಿಗುತ್ತವೆ ಎಂದು ಪಿಆರ್ ಡಿವೈಎಸ್ಪಿಗಳು ಆಗ್ರಹಿಸಿದ್ದಾರೆ.