ಮೌನ ಮೆರವಣಿಗೆ ನಡೆಸಿ ಎಸಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ

ಕನ್ನಡಪ್ರಭ ವಾರ್ತೆ ಭಟ್ಕಳ

ಗೊಂಡ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಹಾಗೂ ಸಿಂಧುತ್ವ ಪ್ರಮಾಣಪತ್ರ ನೀಡಬೇಕೆಂದು ಆಗ್ರಹಿಸಿ ಗೊಂಡ ಸಮಾಜದ ಸಾವಿರಾರು ಜನರು ಸೋಮವಾರ ಮೌನ ಮೆರವಣಿಗೆ ನಡೆಸಿ ಸಹಾಯಕ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗೊಂಡ ಸಮಾಜ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ನಡೆದ ಮೆರವಣಿಗೆ ಕೋಕ್ತಿನಗರದ ಶ್ರೀ ಮಹಾಸತಿ ದೇವಸ್ಥಾನದಿಂದ ಆರಂಭಗೊಂಡು ಬಂದರ ರಸ್ತೆ ೨ನೇ ಕ್ರಾಸ್, ವೆಂಕಟರಮಣ ದೇವಸ್ಥಾನ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ೬೬ ಮಾರ್ಗವಾಗಿ ತಾಲೂಕು ಸೌಧದವರೆಗೆ ಸಾಗಿತು.

ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ಪ್ರವೀಣ್ ಕುಮಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.


ಭಟ್ಕಳ ತಾಲೂಕಿನಲ್ಲಿ ಸುಮಾರು ೧೫ ಸಾವಿರಕ್ಕೂ ಅಧಿಕ ಗೊಂಡ ಬುಡಕಟ್ಟು ಜನರು ವಾಸವಿದ್ದು, ಅವರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಸ್ಥಿತಿಯಲ್ಲಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಗೊಂಡ ಸಮುದಾಯದವರು ತಮ್ಮದೇ ಆದ ಆಚರಣೆ, ಸಂಪ್ರದಾಯ ಹಾಗೂ ಕಟ್ಟುಪಾಡುಗಳನ್ನು ತಲತಲಾಂತರಗಳಿಂದ ಪಾಲಿಸಿಕೊಂಡು ಬಂದಿದ್ದಾರೆ. ೧೯೫೦ರ ಭಾರತದ ಸಂವಿಧಾನದ ಪರಿಶಿಷ್ಟ ಪಂಗಡ ಆದೇಶ ಹಾಗೂ ೧೯೫೬ರ ಮೈಸೂರು ಸರ್ಕಾರದ ಗೆಜೆಟ್ ಪ್ರಕಟಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೊಂಡ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿರುವುದಾಗಿ ಉಲ್ಲೇಖಿಸಿರುವುದನ್ನೂ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಗೊಂಡ ಮತ್ತು ಗೊಂಡ್ ಎಂಬ ಹೆಸರಿನ ವ್ಯತ್ಯಾಸವನ್ನು ಉಲ್ಲೇಖಿಸಿ ಜಾತಿ ಪ್ರಮಾಣಪತ್ರ ಹಾಗೂ ಸಿಂಧುತ್ವ ಪ್ರಮಾಣಪತ್ರ ನೀಡಲು ತೊಂದರೆ ಉಂಟುಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಸ್ಪಷ್ಟೀಕರಣದ ಆದೇಶವಿದ್ದರೂ ತಹಶೀಲ್ದಾರ್ ಕಚೇರಿಯಿಂದ ಪ್ರಮಾಣಪತ್ರ ನೀಡಲು ನಿರಾಕರಣೆ ನಡೆಯುತ್ತಿದೆ ಎಂದು ದೂರಿದ್ದಾರೆ.

ಶಾಲಾ ದಾಖಲಾತಿಗಳು ಲಭ್ಯವಿರದಿದ್ದಲ್ಲಿ ಅಥವಾ ತಪ್ಪಾಗಿದ್ದಲ್ಲಿ ಸ್ಥಳೀಯವಾಗಿ ಪರಿಶೀಲನೆ ನಡೆಸಿ ಜಾತಿ ಪ್ರಮಾಣಪತ್ರ ನೀಡುವಂತೆ ಸರ್ಕಾರ ಆದೇಶಿಸಬೇಕು. ಜಾತಿ ಹಾಗೂ ಸಿಂಧುತ್ವ ವಿಚಾರದಲ್ಲಿ ಮೂರನೇ ವ್ಯಕ್ತಿಗಳ ತಕರಾರುಗಳನ್ನು ಪರಿಗಣಿಸಬಾರದು. ಗೊಂಡ ಸಮುದಾಯದ ಜಾತಿಯನ್ನು ಓಟಿಸಿ ಕ್ರಮದಡಿ ಅಳವಡಿಸಿ ತಕ್ಷಣ ಜಾತಿ ಪ್ರಮಾಣಪತ್ರ ವಿತರಣೆ ಪ್ರಕ್ರಿಯೆ ಆರಂಭಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭ ಗೊಂಡ ಸಮುದಾಯದ ಮುಖಂಡರು, ಮಹಿಳೆಯರು, ಯುವಕ-ಯುವತಿಯರು, ಪುಟ್ಟ ಮಕ್ಕಳು ಸಹಿತ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.