ಬೆಳೆಹಾನಿ ಸಮೀಕ್ಷೆ ಶೀಘ್ರ ಮುಗಿಸಿ, ಬೀಜ,ಗೊಬ್ಬರ ಕೊರತೆ ಆಗದಂತೆ ಎಚ್ಚರ ವಹಿಸಿ

| Published : Jun 28 2025, 12:18 AM IST

ಬೆಳೆಹಾನಿ ಸಮೀಕ್ಷೆ ಶೀಘ್ರ ಮುಗಿಸಿ, ಬೀಜ,ಗೊಬ್ಬರ ಕೊರತೆ ಆಗದಂತೆ ಎಚ್ಚರ ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಗಾರು ಮಳೆ ನಿರಂತರವಾಗಿ ಮತ್ತು ವಾಡಿಕೆಗಿಂತ ಹೆಚ್ಚಾಗಿದ್ದರಿಂದ ಭೂಮಿಯ ತೇವಾಂಶ ಹೆಚ್ಚಳವಾಗಿದೆ. ಪ್ರಸಕ್ತ ಸಾಲಿಗೆ 2.81 ಲಕ್ಷ ಹೆಕ್ಟೇರ್ ಭೂಮಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 2.35 ಲಕ್ಷ ಹೆಕ್ಟೇರ್ (ಶೇ.83ರಷ್ಟು) ಭೂಮಿ ಬಿತ್ತನೆಯಾಗಿದೆ

ಧಾರವಾಡ: ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದರಿಂದ ಅನೇಕ ರಸ್ತೆ, ಸೇತುವೆ, ಚರಂಡಿಗಳಿಗೆ ಹಾನಿಯಾಗಿದೆ. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲು ಆದ್ಯತೆ ಮೇಲೆ ದುರಸ್ತಿ ಮಾಡಬೇಕು. ಲೋಕೋಪಯೋಗಿ, ಪಿ.ಆರ್.ಇಡಿ, ಸಣ್ಣ ನೀರಾವರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಮಳೆ ಹಾನಿಯಿಂದ ಆಗಿರುವ ಮೂಲ ಸೌಕರ್ಯಗಳ ದುರಸ್ತಿಗೆ ಅಂದಾಜು ಮಾಡಿ ಆಯಾ ಇಲಾಖೆ ನೇರವಾಗಿ ಪ್ರಸ್ತಾವನೆ ಸಲ್ಲಿಸಿ ಅದರ ಪ್ರತಿ ಜಿಲ್ಲಾಧಿಕಾರಿಗಳ ಕಚೇರಿಗೆ ತಕ್ಷಣ ಸಲ್ಲಿಸುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದ್ದಾರೆ.

ಗೂಗಲ್ ಮೀಟ್‌ದಲ್ಲಿ ಆನ್‌ಲೈನ್ ಮೂಲಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿದ ಅವರು, ಜಿಲ್ಲೆಯ ಮೂಲ ಸೌಕರ್ಯಗಳ ಹಾನಿ ಕುರಿತು ಸರ್ಕಾರಕ್ಕೆ ತಕ್ಷಣ ಪ್ರಸ್ತಾವನೆ ಸಲ್ಲಿಸಬೇಕು. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಬೆಳೆ ಸಮೀಕ್ಷೆ, ರಸ್ತೆ, ಸೇತುವೆ ಹಾನಿ ಸಮೀಕ್ಷೆಯನ್ನು ಖುದ್ದಾಗಿ ಪರಿಶೀಲಿಸಬೇಕೆಂದರು.

ಶೇ.83ರಷ್ಟು ಬಿತ್ತನೆ: ಮುಂಗಾರು ಮಳೆ ನಿರಂತರವಾಗಿ ಮತ್ತು ವಾಡಿಕೆಗಿಂತ ಹೆಚ್ಚಾಗಿದ್ದರಿಂದ ಭೂಮಿಯ ತೇವಾಂಶ ಹೆಚ್ಚಳವಾಗಿದೆ. ಪ್ರಸಕ್ತ ಸಾಲಿಗೆ 2.81 ಲಕ್ಷ ಹೆಕ್ಟೇರ್ ಭೂಮಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಇಲ್ಲಿಯವರೆಗೆ 2.35 ಲಕ್ಷ ಹೆಕ್ಟೇರ್ (ಶೇ.83ರಷ್ಟು) ಭೂಮಿ ಬಿತ್ತನೆಯಾಗಿದೆ. ಅತಿಯಾದ ಮಳೆಯಿಂದ ಬೆಣ್ಣಿಹಳ್ಳ ಮತ್ತು ತುಪ್ಪರಿ ಹಳ್ಳದ ಅಕ್ಕಪಕ್ಕದ ಜಮೀನುಗಳಲ್ಲಿ ಪ್ರವಾಹದಿಂದ ನೀರು ಹೋಗಿ ಮೊಳಕೆಯೊಡೆಯುವ ಪ್ರಮಾಣ ಕಡಿಮೆಯಾಗಿದೆ. ಕೆಲವು ಭಾಗದಲ್ಲಿ ರೈತರು ಮರು ಬಿತ್ತನೆ ಮಾಡುತ್ತಿದ್ದಾರೆ. ಇಂತಹ ರೈತರಿಗೆ ಯಾವುದೇ ರೀತಿಯ ಬೀಜ, ಗೊಬ್ಬರ ಕೊರತೆಯಾಗದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಸೂಚಿಸಿದ ಅವರು, ಮುಂಗಾರು ಪೂರ್ವದಲ್ಲಿ ಸುಮಾರು 14,430 ಕ್ವಿಂಟಲ್ ವಿವಿಧ ರೀತಿಯ ಬೀಜಗಳನ್ನು ದಾಸ್ತಾನಿತ್ತು. ರೈತರಿಗೆ ಈವರೆಗೆ 12,899 ಕ್ವಿಂಟಲ್ ಬೀಜ ವಿತರಿಸಲಾಗಿದೆ. 1528 ಕ್ಷಿಂಟಲ್ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನಿದೆ. ಅಗತ್ಯವಿದ್ದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಬೀಜ ವಿತರಿಸಬೇಕು ಎಂದರು.

ಅಗತ್ಯ ರಸಗೊಬ್ಬರ ಪೂರೈಕೆ: ರೈತರ ಬೇಡಿಕೆಗೆ ಅನುಗುಣವಾಗಿ ಜಿಲ್ಲೆಯಲ್ಲಿ ಯೂರಿಯಾ ಸೇರಿದಂತೆ ವಿವಿಧ ರೀತಿಯ ರಸಗೊಬ್ಬರ ಪೂರೈಸಲಾಗುತ್ತಿದೆ. ಜೂನ್ ತಿಂಗಳ ಅಂತ್ಯಕ್ಕೆ ಸುಮಾರು 23 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. ಈಗಾಗಲೇ 32 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ರೈತರಿಗೆ ವಿತರಿಸಲಾಗಿದೆ. ಈಗಲೂ 14,200 ಮೆಟ್ರಿಕ್ ಟನ್ ರಸಗೊಬ್ಬರ ಲಭ್ಯವಿದೆ. ಈ ಪೈಕಿ 13 ಮೆಟ್ರಿಕ್ ಟನ್ ಯೂರಿಯಾ ಮಾರಾಟವಾಗಿ ಇನ್ನೂ 2,900 ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ಇದೆ ಎಂದರು.

ಮಾರುಕಟ್ಟೆಯಲ್ಲಿ ಕಳಪೆ ಬೀಜ, ಗೊಬ್ಬರದ ಬಗ್ಗೆ ನಿಗಾ ವಹಿಸಬೇಕು. ರಸಗೊಬ್ಬರಗಳನ್ನು ಎಆರ್‌ಪಿ ದರಗಳಲ್ಲಿಯೇ ಮಾರಾಟ ಮಾಡಬೇಕು. ಯಾವುದೇ ಲಿಂಕ್ ಗೊಬ್ಬರಗಳನ್ನು ರೈತರಿಗೆ ಒತ್ತಾಯ ಪೂರ್ವಕವಾಗಿ ನೀಡದಂತೆ ಕ್ರಮ ವಹಿಸಬೇಕೆಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

191 ಮನೆಗಳಿಗೆ ಹಾನಿ: ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ವಿವಿಧ ತಾಲೂಕುಗಳು ಸೇರಿ 191 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಈಗಾಗಲೇ ರಾಜೀವಗಾಂಧಿ ಹೌಸಿಂಗ್ ಕಾರ್ಪೋರೇಷನ್ ತಂತ್ರಾಂಶದ ಮೂಲಕ ಹಾನಿ ಮನೆಗಳ ವಿವರ ದಾಖಲಿಸಲಾಗುತ್ತಿದೆ. ಮನೆ ಹಾನಿ ಸಮೀಕ್ಷೆ ಸೋಮವಾರದ ಒಳಗಾಗಿ ಪೂರ್ಣಗೊಳಿಸಬೇಕು. ತಹಸೀಲ್ದಾರರು ಮತ್ತು ಇಓ ಈ ಕುರಿತು ನಿರಂತರ ಉಸ್ತುವಾರಿ ಮಾಡಬೇಕು. ಸುಳ್ಳು ದಾಖಲೆ ನೀಡಿ ವಂಚಿಸಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.

ಕೆರೆಗಳಿಗೆ ತಂತಿ ಬೇಲಿ: ಮಳೆ ಮುಗಿಯುವವರೆಗೆ ಕೆರೆಯ ಬಗ್ಗೆ ಎಚ್ಚರಿಕೆ ವಹಿಸಿ ಮುಳ್ಳಿನ ಬೇಲಿಗಳನ್ನು ಹಾಕುವ ಮೂಲಕ ಮಕ್ಕಳು, ಜಾನುವಾರಗಳು ಕೆರೆಯ ಹತ್ತಿರ ಬಿಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಿರಂತರ ಮಳೆಯಿಂದ ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬ ಬಾಗಿವೆ. ವಿದ್ಯುತ್ ತಂತಿ ಕೆಳಮಟ್ಟದಲ್ಲಿ ಜೋತು ಬಿದ್ದಿವೆ. ಇವುಗಳಿಂದ ಯಾವುದೇ ಜೀವ ಹಾನಿ, ಅವಘಡಗಳು ಆಗದಂತೆ ಹೆಸ್ಕಾಂ ಇಲಾಖೆಯವರು ಮುನ್ನಚ್ಚರಿಕೆ ವಹಿಸಬೇಕು ಎಂದರು.

ಸಭೆಯಲ್ಲಿ ಜಿಪಂ ಸಿಇಓ ಭುವನೇಶ ಪಾಟೀಲ ಬೆಳೆ ಹಾನಿ ಸಮೀಕ್ಷೆ ಹಾಗೂ ಮನೆ ಹಾನಿ ಸಮೀಕ್ಷೆ ಕುರಿತು ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ ಸಭೆ ನಿರ್ವಹಿಸಿದರು.

ಆದಷ್ಟು ಬೇಗ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳಿಸಿ: ನಿರಂತರ ಮಳೆಯಿಂದ ಜಿಲ್ಲೆಯ ನವಲಗುಂದ, ಕುಂದಗೋಳ ಹಾಗೂ ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ಬೆಳೆ ಹಾನಿ ಕುರಿತು ರೈತರಿಂದ ಮನವಿ ಸಲ್ಲಿಕೆಯಾಗಿವೆ. ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಈಗಾಗಲೇ ಈ ಭಾಗದಲ್ಲಿ ಸಮೀಕ್ಷೆ ಕಾರ್ಯ ಮಾಡಲಾಗುತ್ತಿದೆ. ಕಂದಾಯ, ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿಗಳ ತಂಡವು ಆದಷ್ಟು ಬೇಗ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಳಿಸಬೇಕು. ಮಾಹಿತಿಯನ್ನು ಸರಿಯಾಗಿ ದಾಖಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.