ನಿಗದಿತ ಅವಧಿಯಲ್ಲೇ ಸಮೀಕ್ಷೆ ಮುಗಿಸಿ

| Published : Oct 04 2025, 12:00 AM IST

ಸಾರಾಂಶ

ಪ್ರತಿ ದಿನ 300ರಿಂದ 400 ಮನೆ ಸಮೀಕ್ಷೆ ಮಾಡುವಂತೆ ಮೇಲ್ವಿಚಾರಕರು ಕ್ರಮವಹಿಸಬೇಕು ಎಂದು ಸೂಚಿಸಿದ ಅವರು, ಹೆಚ್ಚುವರಿ ಸಿಬ್ಬಂದಿ ಅವಶ್ಯವಿದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಜಿಪಂ ಸಿಇಒ ಹೇಳಿದ್ದಾರೆ.

ಹುಬ್ಬಳ್ಳಿ:

ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಿಲ್ಲಾದ್ಯಂತ ನಡೆಯುತ್ತಿದೆ. ಸಮೀಕ್ಷೆ ಕೆಲಸ ಯಾವುದೇ ಕಾರಣಕ್ಕೂ ವಿಳಂಬವಾಗಬಾರದು. ನಿತ್ಯ ಗುರಿ ಸಾಧಿಸಲು ಮೇಲ್ವಿಚಾರಕರು ಕ್ರಮಕೈಗೊಳ್ಳಬೇಕೆಂದು ಜಿಪಂ ಸಿಇಒ ಭುವನೇಶ ಪಾಟೀಲ ಹೇಳಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಸಭಾಂಗಣದಲ್ಲಿ ಸಮೀಕ್ಷೆ ಪ್ರಗತಿ ಕುರಿತು ನಡೆದ ಮೇಲ್ವಿಚಾರಕರ ಸಭೆಯಲ್ಲಿ ಮಾತನಾಡಿದ ಅವರು, ಸಮೀಕ್ಷೆ ಕಾರ್ಯ ಸೆ. 22ರಿಂದ ಆರಂಭವಾಗಿದ್ದರೂ ಈ ವರೆಗೆ ಶೇ.50ರಷ್ಟು ಸಾಧನೆ ಮಾಡಿಲ್ಲ. ಹೀಗಾಗಿ ಗಣತಿ ಕಾರ್ಯಕ್ಕೆ ವೇಗ ನೀಡಬೇಕಿದೆ. ನೆಟ್‌ವರ್ಕ್ ಸಿಗುವ ಜಾಗದಲ್ಲಿ ಸಮೀಕ್ಷೆ ನಡೆಸಬೇಕು. ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ನೂರಕ್ಕೆ ನೂರರಷ್ಟು ಗುರಿ ಸಾಧಿಸುವ ಭರದಲ್ಲಿ ತಪ್ಪು ಮಾಹಿತಿ ಸಂಗ್ರಹಿಸಬಾರದು. ಒಂದು ವೇಳೆ ತಪ್ಪು ಮಾಹಿತಿ ನೀಡಿದರೆ ಮೇಲ್ವಿಚಾರಕರನ್ನು ಅಮಾನತು ಮಾಡಲಾಗುವುದು. ಅದಕ್ಕೆ ಅವಕಾಶ ಕೊಡದಂತೆ ಕಾರ್ಯ ನಿರ್ವಹಿಸಬೇಕು. ಮುಂದಿನ 5 ದಿನದಲ್ಲಿ ನಿಗದಿಪಡಿಸಿದ ಗುರಿ ಸಾಧಿಸಬೇಕು. ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸಿದರೆ ಮನವೊಲಿಸಿ ಅವರಿಂದ ನಿಖರ ಮಾಹಿತಿ ಸಂಗ್ರಹಿಸಬೇಕೆಂದರು.

ಪ್ರತಿ ದಿನ 300ರಿಂದ 400 ಮನೆ ಸಮೀಕ್ಷೆ ಮಾಡುವಂತೆ ಮೇಲ್ವಿಚಾರಕರು ಕ್ರಮವಹಿಸಬೇಕು ಎಂದು ಸೂಚಿಸಿದ ಅವರು, ಹೆಚ್ಚುವರಿ ಸಿಬ್ಬಂದಿ ಅವಶ್ಯವಿದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ಮಾತನಾಡಿ, ಖಾಲಿ ಮನೆ, ಹೊರ ರಾಜ್ಯದವರು ಇರುವ ಮನೆ ಗುರುತಿಸಿ ಅವರ ಮಾಹಿತಿ ಸಂಗ್ರಹಿಸಬೇಕು. ಅ. 8ರಿಂದ ಶಾಲೆ ಪುನಾರಂಭವಾಗಲಿದ್ದು ನಿಗದಿತ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕೆಂದು ಹೇಳಿದರು.

ಸಭೆಯಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ರಿತಿಕಾ ವರ್ಮಾ, ಹುಬ್ಬಳ್ಳಿ ಶಹರ ತಹಸೀಲ್ದಾರ್‌ ಮಹೇಶ ಗಸ್ತೆ, ಹುಬ್ಬಳ್ಳಿ ತಾಪಂ ಇಒ ಡಾ. ರಾಮಚಂದ್ರ ಹೊಸಮನಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಭಾನುಮತಿ ಎಚ್, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನಾಗರತ್ನಾ ಕ್ಯಾಸನೂರ ಸೇರಿದಂತೆ ಅಧಿಕಾರಿಗಳು, ಮೇಲ್ವಿಚಾರಕರು ಇತರರು ಉಪಸ್ಥಿತರಿದ್ದರು.