ಹುಬ್ಬಳ್ಳಿ-ಅಂಕೋಲಾ ರೈಲು: ಶೀಘ್ರ ಅನುಮೋದನೆ

| Published : Oct 04 2025, 12:00 AM IST

ಸಾರಾಂಶ

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಬಹುವರ್ಷದಿಂದ ನನೆಗುದಿಗೆ ಬಿದ್ದಿದೆ. ಇದಕ್ಕೆ ವನ್ಯ ಜೀವಿ ಮಂಡಳಿ, ಅರಣ್ಯ ಇಲಾಖೆ ಹಾಗೂ ಪರಿಸರ ಇಲಾಖೆಯಿಂದ ಅಗತ್ಯ ಸಲಹೆ ಪಡೆಯಲಾಗಿದೆ. ಅದರಂತೆ ₹ 17,141 ಕೋಟಿ ವೆಚ್ಚದ ಹೊಸ ಡಿಪಿಆರ್‌ ಸಿದ್ಧಪಡಿಸಿ ಸಲ್ಲಿಸಲಾಗಿದೆ.

ಹುಬ್ಬಳ್ಳಿ:

ಈ ಭಾಗದ ಅಭಿವೃದ್ಧಿಗೆ ಪೂರಕವಾದ, ಬಹುನಿರೀಕ್ಷಿತ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆಗೆ ಕ್ಯಾಬಿನೆಟ್‌ ಒಪ್ಪಿಗೆ ಪಡೆಯುವುದು ಬಾಕಿಯಿದೆ. ಶೀಘ್ರದಲ್ಲೇ ಅದು ಸಿಗುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಇಲ್ಲಿನ ನೈಋತ್ಯ ರೈಲ್ವೆ ವಲಯದ ರೈಲ್‌ ಸೌಧದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಬಹುವರ್ಷದಿಂದ ನನೆಗುದಿಗೆ ಬಿದ್ದಿದೆ. ಇದಕ್ಕೆ ವನ್ಯ ಜೀವಿ ಮಂಡಳಿ, ಅರಣ್ಯ ಇಲಾಖೆ ಹಾಗೂ ಪರಿಸರ ಇಲಾಖೆಯಿಂದ ಅಗತ್ಯ ಸಲಹೆ ಪಡೆಯಲಾಗಿದೆ. ಅದರಂತೆ ₹ 17,141 ಕೋಟಿ ವೆಚ್ಚದ ಹೊಸ ಡಿಪಿಆರ್‌ ಸಿದ್ಧಪಡಿಸಿ ಸಲ್ಲಿಸಲಾಗಿದೆ. ಇನ್ನೇನು ಕ್ಯಾಬಿನೆಟ್ ಒಪ್ಪಿಗೆ ಪಡೆಯುವುದು ಬಾಕಿಯಿದೆ. ಇದು ಸಿಗುವ ವಿಶ್ವಾಸವಿದೆ. ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಈ ರೈಲ್ವೆ ಯೋಜನೆ ಜಾರಿಯಾದ ಮೇಲೆ ಅಂಕೋಲಾ ಬಳಿ ಬೇಲಿಕೇರಿ ಸೇರಿ ಎರಡು ಕಡೆ ಬಂದರು ಅಭಿವೃದ್ಧಿ ಪಡಿಸಲಾಗುವುದು. ರೈಲ್ವೆ, ರಸ್ತೆ ಹಾಗೂ ವಾಯು ಮಾರ್ಗಕ್ಕಿಂತ ಬಂದರಿನಿಂದ ವ್ಯಾಪಾರ, ವಹಿವಾಟು ಹೆಚ್ಚಾಗಲಿದೆ. ಉತ್ತರ ಕರ್ನಾಟಕ ಭಾಗದ ಕೈಗಾರಿಕಾ ಬೆಳವಣಿಗೆಗೆ ಇದು ಅನುಕೂಲವಾಗಲಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.

ಭೂಸ್ವಾಧೀನ ಸಮಸ್ಯೆ ಬಗೆಹರಿಸಿ:

ಧಾರವಾಡ-ಬೆಳಗಾವಿ ನಡುವಿನ ರೈಲು ಮಾರ್ಗದ ಯೋಜನೆ ಕೆಲವೆಡೆ ಭೂಸ್ವಾಧೀನಕ್ಕೆ ತೊಡಕುಂಟಾಗಿದೆ. ಬೆಳಗಾವಿ ಭಾಗದಲ್ಲಿ ಆಗಿರುವ ಭೂಸ್ವಾಧಿನ ಸಮಸ್ಯೆಯನ್ನು ಸಂಸದ ಜಗದೀಶ ಶೆಟ್ಟರ್ ಅವರು ಬಗೆಹರಿಸಿದ್ದಾರೆ. ಧಾರವಾಡ ಭಾಗದಲ್ಲಿ 42 ಎಕರೆ ಭೂಸ್ವಾಧೀನಕ್ಕೆ 22 ರೈತರಿಂದ ಆಕ್ಷೇಪ ವ್ಯಕ್ತವಾಗಿದೆ. ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರು ಈ ಸಮಸ್ಯೆಯನ್ನು ಬಗೆಹರಿಸಿ ರೈಲು ಮಾರ್ಗ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು. ಈ ಯೋಜನೆ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗಕ್ಕೂ ಪೂರಕವಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದರು.

ತುಮಕೂರು-ಚಿತ್ರದುರ್ಗ ಮಾರ್ಗದ 28 ಕಿ.ಮೀ ಕಾಮಗಾರಿ ಮಾತ್ರ ಬಾಕಿ ಇದ್ದು, 2026ರ ಫೆಬ್ರುವರಿ ಒಳಗೆ ಕಾಮಗಾರಿ ಮುಗಿಯುವ ವಿಶ್ವಾಸವಿದೆ. ಇದರಿಂದ ಧಾರವಾಡ-ಬೆಂಗಳೂರು ಪ್ರಯಾಣದ ಅವಧಿ ಒಂದು ಗಂಟೆ ಕಡಿಮೆಯಾಗಲಿದೆ ಎಂದು ಜೋಶಿ ತಿಳಿಸಿದರು.

ವಾರಕ್ಕೆ ಮೂರು ದಿನ:

ಅದೇ ರೀತಿ ಹುಬ್ಬಳ್ಳಿ ಭಾಗದ ಮಾರವಾಡಿ ಸಮುದಾಯದ ಬೇಡಿಕೆಯಂತೆ ಹುಬ್ಬಳ್ಳಿ-ಅಜ್ಮೀರ್ ರೈಲನ್ನು ವಾರಕ್ಕೆ ಮೂರು ಬಾರಿ ಓಡಿಸಲು ನಿರ್ಧರಿಸಲಾಗಿದೆ. ಬಾಗಲಕೋಟ-ಕುಡಚಿ ರೈಲು ಮಾರ್ಗದ ನಡುವಿನ ಲೋಕಾಪುರ-ದಾದನಟ್ಟಿ ಮಧ್ಯದ 6.6 ಕಿ,ಮೀ ರೈಲು ಮಾರ್ಗದ ಕಾಮಗಾರಿ 2026ರ ಮಾರ್ಚ್ ಒಳಗೆ ಪೂರ್ಣಗೊಳ್ಳಲಿದೆ ಎಂದರು.

ಗದಗ-ಧಾರವಾಡ ಪ್ಯಾಸೆಂಜರ್‌:

ಈ ಹಿಂದೆ ಗದಗ-ಧಾರವಾಡ ನಡುವೆ ಓಡಾಡುತ್ತಿದ್ದ ಪ್ಯಾಸೆಂಜರ್ ರೈಲನ್ನು ಪುನಾರಂಭಿಸಬೇಕು ಎಂಬ ಬೇಡಿಕೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರಿಂದ ಹೆಚ್ಚಾಗಿದೆ. ಹೀಗಾಗಿ ರೈಲ್ವೆ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಈ ರೈಲು ಪುನರ್ ಆರಂಭಕ್ಕೆ ನಿರ್ಧರಿಸಲಾಗಿದ್ದು, ಶೀಘ್ರವೇ ಗದಗ-ಧಾರವಾಡ ಪ್ಯಾಸೆಂಜರ್ ರೈಲು ಆರಂಭವಾಗಲಿದೆ. ಗದಗ-ಯಲವಿಗಿ ರೈಲು ಮಾರ್ಗದ ಡಿಪಿಆರ್ ಅನ್ನು ಡಿಸೆಂಬರ್ ಒಳಗೆ ಸಲ್ಲಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ಅಳ್ನಾವರ ಶೀಘ್ರ ಉದ್ಘಾಟನೆ:

ಅಮೃತ್‌ ಭಾರತ ಯೋಜನೆಯಡಿ ನವೀಕರಣ ಹಾಗೂ ಅಭಿವೃದ್ಧಿಗೊಂಡಿರುವ ಅಳ್ನಾವರ ರೈಲ್ವೆ ನಿಲ್ದಾಣವನ್ನು ಶೀಘ್ರದಲ್ಲೇ ಉದ್ಘಾಟಿಸಲಾಗುವುದು. ₹ 17.3 ಕೋಟಿ ವೆಚ್ಚದಲ್ಲಿ ಈ ನಿಲ್ದಾಣ ಅಭಿವೃದ್ಧಿಗೊಂಡಿದೆ ಎಂದರು.

ಕ್ರೀಡೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ರೈಲ್ವೆ ಇಲಾಖೆಯ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟದ ಹಾಕಿ ಟರ್ಫ್‌ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ಕ್ರೀಡಾ ಸಂಕೀರ್ಣದಲ್ಲಿ ಇಲ್ಲದ ಕ್ರೀಡೆಗಳನ್ನು ಈ ಕ್ರೀಡಾಂಗಣದಲ್ಲಿ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜೋಶಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ, ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ್ ಇದ್ದರು.ಹುಬ್ಬಳ್ಳಿ ನಿಲ್ದಾಣ ಅಭಿವೃದ್ಧಿ:

ವಿಶ್ವದ ಅತೀ ಉದ್ದದ ರೈಲ್ವೆ ಪ್ಲಾಟ್‌ ಫಾರ್ಮ್ ಹೊಂದಿರುವ ಹುಬ್ಬಳ್ಳಿ ಸದ್ಗುರು ಸಿದ್ದಾರೂಢ ಸ್ವಾಮಿ ರೈಲು ನಿಲ್ದಾಣವನ್ನು ಹೈಟೆಕ್ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಈಗಾಗಲೇ ರೈಲ್ವೆ ಇಲಾಖೆ ಅಧಿಕಾರಿಗಳು ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದ್ದು, ಸುಮಾರು ₹ 400 ಕೋಟಿ ವೆಚ್ಚದಲ್ಲಿ ಪ್ರಸ್ತಾವವನ್ನು ರೈಲ್ವೆ ಬೋರ್ಡ್‌ಗೆ ಸಲ್ಲಿಸಲಾಗುತ್ತಿದೆ ಎಂದರು. ರೈಲ್ವೆ ಬೋರ್ಡ್‌ಗೆ ಪ್ರಸ್ತಾವ ಸಲ್ಲಿಸಿದ ಮೇಲೆ ಅದಕ್ಕೆ ಒಪ್ಪಿಗೆ ನೀಡುವಂತೆ ರೈಲ್ವೆ ಸಚಿವ ವೈಷ್ಣವಿ ಅಶ್ವಿನ್ ಅವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.