ನಿರಾಶ್ರಿತರಿಗೆ ಪುನರ್‌ವಸತಿ ಕಲ್ಪಿಸಲು ಒತ್ತಾಯ

| Published : Jun 15 2024, 01:05 AM IST

ನಿರಾಶ್ರಿತರಿಗೆ ಪುನರ್‌ವಸತಿ ಕಲ್ಪಿಸಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕೋಟೆ ಪ್ರದೇಶದಲ್ಲಿನ ಗ್ರಾಮ ದೇವತೆ ದೇವಸ್ಥಾನ ನಿರ್ಮಾಣವಾಗಬೇಕಾದ ಸ್ಥಳದಲ್ಲಿ ವಾಸಿಸುತ್ತಿರುವವರಿಗೆ ಪುನರ್‌ವಸತಿ ವ್ಯವಸ್ಥೆ ಕಲ್ಪಿಸಬೇಕು.

ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಮನವಿ

ಕನ್ನಡಪ್ರಭ ವಾರ್ತೆ ಕಾರಟಗಿ

ಕೋಟೆ ಪ್ರದೇಶದಲ್ಲಿನ ಗ್ರಾಮ ದೇವತೆ ದೇವಸ್ಥಾನ ನಿರ್ಮಾಣವಾಗಬೇಕಾದ ಸ್ಥಳದಲ್ಲಿ ವಾಸಿಸುತ್ತಿರುವವರಿಗೆ ಪುನರ್‌ವಸತಿ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಪುರಸಭೆ ವ್ಯಾಪ್ತಿಯ ದೇವಿಕ್ಯಾಂಪಿನ ಸರ್ಕಾರಿ ಜಾಗದಲ್ಲಿ ಮೂಲ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು ಶುಕ್ರವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿವೆ.

ರೈತ ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಪಟ್ಟಣದಲ್ಲಿ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಇಲ್ಲಿನ ಕೋಟೆ ಪ್ರದೇಶದಲ್ಲಿನ ಗ್ರಾಮ ದೇವತೆ ದ್ಯಾವಮ್ಮದೇವಿ ನೂತನ ದೇವಸ್ಥಾನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅದೇ ರೀತಿ ಈಗಾಗಲೇ ಹಲವು ತಿಂಗಳಿನಿಂದ ಐತಿಹಾಸಿಕ ಪುರಷ್ಕರಣೆ ಜೀರ್ಣೋದ್ದಾರ ಕಾಮಗಾರಿ ನಡೆಯುತ್ತಿದೆ. ಈ ಎರಡು ಸ್ಥಳಗಳಲ್ಲಿ ಸುತ್ತಲಿನ ಗುಡಿಸಲು ಶೆಡ್‌ಗಳನ್ನು ತೆರವುಗೊಳಿಸಿ ನೂತನ ದೇವಸ್ಥಾನ ನಿರ್ಮಾಣಕ್ಕೆ ಶೀಘ್ರ ಅನುವು ಮಾಡಿಕೊಡುವಂತೆ ಸಂಘಟನೆಗಳು ಆಗ್ರಹಿಸಿದವು.

ರೈತ ಸಂಘದ ಮರಿಯಪ್ಪ ಸಾಲೋಣಿ ಮಾತನಾಡಿ, ಪಟ್ಟಣದಲ್ಲಿ ಭವ್ಯವಾದ ಗ್ರಾಮ ದೇವತೆ ದೇವಸ್ಥಾನ ನಿರ್ಮಿಸುವ ಸರ್ವ ಜನಾಂಗಗಳ, ಜನಪ್ರತಿನಿಧಿಗಳ, ಸಂಘ-ಸಂಸ್ಥೆಗಳ ಪ್ರಮುಖರು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಸಚಿವ ಶಿವರಾಜ ತಂಗಡಗಿಯವರು ಕೂಡಾ ದೇವಸ್ಥಾನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಮೂರು ತಿಂಗಳ ಹಿಂದೆಯೇ ದೇವಸ್ಥಾನದ ಸುತ್ತಲಿರುವ ಗುಡಿಸಲು, ಶೆಡ್‌ಗಳನ್ನು ತೆರವುಗೊಳಿಸುವ ಸಂಬಂಧ ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವರು ತೆರವು ಕಾರ್ಯಾಚರಣೆ ತೀವ್ರಗೊಳಿಸುವಂತೆ ಸೂಚನೆ ನೀಡಿದ್ದರು. ತೆರವಿಗೆ ಮುನ್ನ ಅಧಿಕಾರಿಗಳಿಗೆ ಅಲ್ಲಿನ ನಿವಾಸಿಗಳಿಗೆ ಪರ್ಯಾಯವಾಗಿ ಪಟ್ಟಣದ ೨೩ನೇ ವಾರ್ಡ್ ವ್ಯಾಪ್ತಿಗೆ ಬರುವ ದೇವಿಕ್ಯಾಂಪ್ (ದೇವಿಗುಡ್ಡ)ದಲ್ಲಿ ಜಾಗೆ ಒದಗಿಸಬೇಕು ಎಂದು ತಹಸೀಲ್ದಾರ್ ಸೇರಿದಂತೆ ಮುಖ್ಯಾಧಿಕಾರಿ, ಪಿಐ ಸೇರಿ ಮೂವರು ಅಧಿಕಾರಿಗಳು ಸೂಚಿಸಿದ್ದರು. ಈ ಮೂವರು ಅಧಿಕಾರಿಗಳು ಗುಡ್ಡಕ್ಕೆ ತೆರಳಿ, ಜಾಗೆ ಗುರುತಿಸಿ ಪುಷ್ಕರಣೆ ಮತ್ತು ಗ್ರಾಮದೇವತೆ ಸುತ್ತಲಿನ ಜನರಿಗೆ ನೀಡಬೇಕು ಎಂದು ಸೂಚಿಸಿದ್ದರು. ಆದರೆ, ಈಗ ತೆಲುಗು ಭಾಷಿಕರೆ ತುಂಬಿರುವ ದೇವಿಕ್ಯಾಂಪ್‌ನ ಕೆಲ ನಿವಾಸಿಗಳು ತಮಗೆ ಸ್ಮಶಾನಕ್ಕೆ ಜಾಗೆ ಬೇಕು. ನಾವು ಗುಡ್ಡದಲ್ಲಿ ಜಾಗೆ ನೀಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರಂತೆ. ಜಾಗೆ ಕೊಡಬೇಡಿ ಎಂದು ಹೇಳಲು ಅವರು ಯಾರು ಎಂದು ಸಂಘಟನೆಗಳ ಮುಖಂಡರು ಪ್ರಶ್ನಿಸಿದರು.

ಸ್ಮಶಾನ ಜಾಗೆಯ ನೆಪದಲ್ಲಿ ಅಲ್ಲಿನ ಕೆಲ ಪ್ರಭಾವಿಗಳು ಜಾಗೆ ಆಕ್ರಮಿಸಿದ್ದಾರೆ. ಮೊದಲು ಅವರನ್ನು ಅಲ್ಲಿಂದ ತೆರವುಗೊಳಿಸಿ ತಾಲೂಕಾಡಳಿತ ಖಾಲಿ ಜಾಗೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಕೂಡಲೇ ಇಲ್ಲಿಂದ ತೆರವುಗೊಳ್ಳುವವರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಈಗಲಾದರೂ ತಹಸೀಲ್ದಾರ್ ಸೇರಿದಂತೆ ಎಲ್ಲ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯಪೃವೃತ್ತರಾಗಬೇಕು. ಅತಿಕ್ರಮಣವನ್ನು ತೆರವುಗೊಳಿಸಿ ನಿವಾಸಿಗಳಿಗೆ ಗುಡ್ಡದಲ್ಲಿ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಮಾತನಾಡಿ, ಲೋಕಸಭಾ ಮತ್ತು ಎಂಎಲ್‌ಸಿ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಕಾರಣಕ್ಕೆ ದೇವಸ್ಥಾನ ಸುತ್ತಲಿನ ನಿವಾಸಿಗಳ ತೆರವಿಗೆ ತಡೆ ನೀಡಲಾಗಿತ್ತು. ಈಗ ನೀತಿ ಸಂಹಿತೆ ಮುಗಿದಿದೆ. ಇದೀಗ ತೆರವು ಕಾರ್ಯಾಚರಣೆಗೆ ವೇಗ ನೀಡುವುದಾಗಿ ಭರವಸೆ ನೀಡಿದರು.

ಈ ವೇಳೆ ಕರ್ನಾಟಕ ರೈತ ಸಂಘದ ಶರಣಪ್ಪ ದೊಡ್ಡಮನಿ, ನ್ಯಾಯವಾದಿ ಗವಿಸಿದ್ದಪ್ಪ ಸಾಲೋಣಿ, ಸಂಜೀವಪ್ಪ ಸಾಲೋಣಿ, ನಾರಾಯಣ ಈಡಿಗೇರ್, ಕಲ್ಲನಗೌಡ ಮಾಲಿ ಪಾಟೀಲ್, ವೆಂಕಟರಾವ್, ತಾಯಪ್ಪ ಕೋಟ್ಯಾಳ, ವಿರುಪಣ್ಣ ಮೂಲಿಮನಿ, ಅಂಬಣ್ಣ ಡಣಾಪುರ, ರಮೇಶ್ ಭಂಗಿ, ವೆಂಕಟಸಿಂಗ್, ಪರಸಪ್ಪ ಬಾವಜಿ, ಹುಚ್ಚಪ್ಪ ಕುರಿ, ಹನುಮಂತ ಎಲಿಗಾರ್, ಭಾಷಾಸಾಬ್, ಶ್ರೀನಿವಾಸ್ ಗೋಮರ್ಸಿ, ಗೌರಮ್ಮ ಡಂಕನಕಲ್, ಅಂಬಮ್ಮ ನಾಯಕ್, ದುರುಗಮ್ಮ ನಾಯಕ್, ಹನುಮಮ್ಮ ದೊಡ್ಡಮನಿ, ಸಣ್ಣೆಮ್ಮ ನಾಯಕ್, ಹುಲಿಗೆಮ್ಮ ಕೊಪ್ಪಳ, ದೇವಮ್ಮ ದೊಡ್ಡಮನಿ ಇನ್ನಿತರರು ಇದ್ದರು.