ಸಾರಾಂಶ
ಸಂಡೂರು: ಹವಾಮಾನ ಇಲಾಖೆ ಪ್ರಕಾರ ಈ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಇದು ರೈತರಿಗೆ ಆಶಾದಾಯಕವಾಗಿದೆ. ಮಾರಾಟಗಾರರು ರೈತರು ಖರೀದಿಸಿದ ಕೃಷಿ ಪರಿಕರಗಳಿಗೆ ಕಡ್ಡಾಯವಾಗಿ ರಸೀದಿ ನೀಡಬೇಕು ಮತ್ತು ರಸೀದಿಯ ಮೇಲೆ ಸಂಬಂಧಪಟ್ಟ ರೈತರ ಸಹಿ ಪಡೆಯಬೇಕು ಎಂದು ಕೃಷಿ ಇಲಾಖೆಯ ಜಿಲ್ಲಾ ಉಪ ಕೃಷಿ ನಿರ್ದೇಶಕರಾದ ಎನ್. ಕೆಂಗೇಗೌಡ ಸೂಚಿಸಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಕೃಷಿ ಪರಿಕರ (ಬೀಜ, ರಸಗೊಬ್ಬರ, ಕೀಟನಾಶಕ) ಮಾರಾಟಗಾರರ ೨೦೨೪-೨೫ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅವಧಿ ಮುಗಿದ ಕೀಟನಾಶಕಗಳನ್ನು ಮಾರಾಟ ಮಾಡಬಾರದು ಮತ್ತು ಸರ್ಕಾರ ನಿಗದಿ ಪಡಿಸಿದ ದರದಲ್ಲಿಯೇ ಮಾರಾಟ ಮಾಡಬೇಕು. ರೈತರಿಗೆ ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ ಮತ್ತು ಕೀಟ ನಾಶಕಗಳನ್ನು ಅವಶ್ಯಕತೆಗೆ ಅನುಗುಣವಾಗಿ ವಿತರಿಸಬೇಕು ಎಂದು ತಿಳಿಸಿದರು.ಜಾರಿ ದಳದ ಸಹಾಯಕ ಕೃಷಿ ನಿರ್ದೇಶಕ ಮಜಿಬರ್ ರೆಹಮಾನ್ ಮಾತನಾಡಿ, ಪರವಾನಗಿ ಇಲ್ಲದೇ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮಾರಾಟ ಮಾಡುವುದು ಅಪರಾಧವಾಗಿದೆ. ಪರವಾನಗಿ ಪಡೆದು ಮಾರಾಟ ಮಾಡಬೇಕು. ರೈತರಿಗೆ ರಸಗೊಬ್ಬರವನ್ನು ವಿತರಿಸುವಾಗ ಪಿಒಎಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿ ವಿತರಿಸಲು ಸೂಚಿಸಿದರು.
ಸಹಾಯಕ ಕೃಷಿ ನಿರ್ದೇಶಕ ಸಿ.ಎ. ಮಂಜುನಾಥ ರೆಡ್ಡಿ ಮಾತನಾಡಿ, ಕೃಷಿ ಪರಿಕರ ಮಾರಾಟಗಾರರು ಕೃಷಿ ಪರಿಕರ ಮಾರಾಟ ಮಾಡುವುದರ ಜೊತೆಗೆ ಬೆಳೆ ಸಮೀಕ್ಷೆ, ಬೆಳೆ ವಿಮೆ, ನ್ಯಾನೋ ಯೂರಿಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ವಿವರಿಸಿದರು.ತಹಶೀಲ್ದಾರ್ ಜಿ.ಅನಿಲ್‌ಕುಮಾರ್ ಮಾತನಾಡಿದರು. ಕೃಷಿ ಅಧಿಕಾರಿ ರಾಘವೇಂದ್ರ, ಕೃಷಿ ಅಧಿಕಾರಿ ಕೆ.ಸೋಮಶೇಖರ, ರಮೇಶ್ ವಡ್ಡಟ್ಟಿ, ತಾಲೂಕಿನ ಕೃಷಿ ಪರಿಕರ ಮಾರಾಟಗಾರರು ಉಪಸ್ಥಿತರಿದ್ದರು.