ಹಾವೇರಿ ಉಪನೋಂದಣಾಧಿಕಾರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ

| Published : May 18 2024, 12:32 AM IST

ಸಾರಾಂಶ

ಜಮೀನು ನೋಂದಣಿಗಾಗಿ ಅರ್ಜಿ ಸಲ್ಲಿಸಿದವರಿಗೆ ನೋಂದಣಿ ಮಾಡಿಸಲು ಈ ಹಿಂದಿನಂತೆ 24 ಗಂಟೆಯ ಕಾಲಾವಕಾಶ ಕೊಡಬೇಕು. ಅದಕ್ಕಾಗಿ ಕಾವೇರಿ 2.0 ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಶುಕ್ರವಾರ ಇಲ್ಲಿಯ ತಾಲೂಕು ಆಡಳಿತ ಸೌಧದಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.

ಹಾವೇರಿ: ಜಮೀನು ನೋಂದಣಿಗಾಗಿ ಅರ್ಜಿ ಸಲ್ಲಿಸಿದವರಿಗೆ ನೋಂದಣಿ ಮಾಡಿಸಲು ಈ ಹಿಂದಿನಂತೆ 24 ಗಂಟೆಯ ಕಾಲಾವಕಾಶ ಕೊಡಬೇಕು. ಅದಕ್ಕಾಗಿ ಕಾವೇರಿ 2.0 ಸಾಫ್ಟ್‌ವೇರ್ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಶುಕ್ರವಾರ ಇಲ್ಲಿಯ ತಾಲೂಕು ಆಡಳಿತ ಸೌಧದಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದರು.

ಗ್ರಾಮೀಣ ಭಾಗದಿಂದ ಬಸ್ ಹಿಡಿದು ಕಚೇರಿಗೆ ಬರುವಾಗ ಒಂದು ಗಂಟೆ ಹೆಚ್ಚು ಕಡಿಮೆ ಆಗುತ್ತದೆ. ಹಾಗಾಗಿ, ಹಳೆಯ ಪದ್ಧತಿ ಸರಿಯಾಗಿತ್ತು. ಇದೀಗ ದಿಢೀರನೇ 5, 15 ನಿಮಿಷದೊಳಗೇ ನೋಂದಣಿ ಮಾಡಿಸಲೇಬೇಕು ಎಂಬ ನಿಯಮ ಸರಿಯಲ್ಲ. ಈ ಕೂಡಲೇ ಇದನ್ನು ಬದಲಾಯಿಸಿ, ಹಳೆಯ ನಿಯಮ ಜಾರಿಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬಳಿಕ ಸ್ಥಳಕ್ಕೆ ಜಿಲ್ಲಾ ನೋಂದಣಿ ಕಚೇರಿ ಅಧಿಕಾರಿಗಳು ಆಗಮಿಸಿ, ಬಾಗಿಲು ತೆರೆಸಿ ನೋಂದಣಿ ಸರತಿಯಲ್ಲಿದ್ದವರ ನೋಂದಣಿ ಮಾಡಿಸಿಕೊಟ್ಟರು. ಈ ಸಮಸ್ಯೆ ಪರಿಹರಿಸುವ ಕುರಿತು ಇಲಾಖೆಗೆ ತಿಳಿಸುವುದಾಗಿ ಭರವಸೆ ನೀಡಿದರು.

ಗುರುವಾರ ಸಂಜೆ ಜಮೀನು ನೋಂದಣಿ ಮಾಡಿಸಬೇಕಿತ್ತು. ಆಗ ಬಂದರೆ ನಾಳೆ ಬನ್ನಿ ಎಂದರು. ಬ್ಯಾಡಗಿಯಿಂದ ಹಾವೇರಿ ಕಚೇರಿಗೆ ಬರುವಷ್ಟರಲ್ಲಿ ಐದು ನಿಮಿಷ ತಡವಾಯಿತು. ಅದಕ್ಕಾಗಿ ಮತ್ತೆ ನಾಳೆ ಬನ್ನಿ ಎಂದರು. ಸರ್ಕಾರ ಈ ನಿಯಮ ತಿದ್ದುಪಡಿ ಮಾಡಿ ಮೊದಲಿನಂತೆ 24 ತಾಸುಗಳ ಕಾಲಾವಕಾಶ ಕೊಡಬೇಕು ಎಂದು ಬ್ಯಾಡಗಿ ನಿವಾಸಿ ಶಿವಾನಂದ ಕಾಸಂಬಿ ಹೇಳಿದರು.