ಕನ್ನಡಪ್ರಭವಾರ್ತೆ,ಮಧುಗಿರಿ

ಶೃಂಗೇರಿ ಪೀಠದ ವಿರುದ್ಧ ಮಾನಹಾನಿ ಹೇಳಿಕೆ ನೀಡಿರುವ ಗೋವಿಂದನಂದ ಸರಸ್ಪತಿ ವಿರುದ್ಧ ಖಂಡನಾ ನಿರ್ಣಯ ಕೈಗೊಂಡು ಪ್ರತಿಭಟಿಸುವುದಾಗಿ ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ. ದತ್ತಾತ್ರೇಯ ತಿಳಿಸಿದರು.

ತಾಲೂಕು ಬ್ರಾಹ್ಮಣ ಸಭಾ, ವಿಪ್ರ ಸೇವಾ ಟ್ರಸ್ಟ್ ,ಶಂಕರಸೇವಾ ಸಮಿತಿ, ಶ್ರೀಲಕ್ಷ್ಮೀನರಸಿಂಹಸ್ವಾಮಿ ಸೇವಾ ಟ್ರಸ್ಟ್ ದೊಡ್ಡದಾಳವಟ್ಟ , ಶ್ರೀಶಾರದ ಮಹಿಳಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶೃಂಗೇರಿ ಶ್ರೀಗಳ ವಿರುದ್ಧ ಮಾನಹಾನಿ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ತಿರುಪತಿಯಲ್ಲಿ ಸ್ಥಳೀಯ ಮಾಧ್ಯಮ ಮತ್ತು ದೆಹಲಿಯ ಲಾಲ್ ಬಹುದ್ದೂರು ರಾಷ್ಟ್ರೀಯ ಸಂಸ್ಕೃತ ಅಕಾಡೆಮಿ ಸಂದರ್ಶನಕ್ಕೆ ನೀಡಿದ್ದ ಗೋವಿಂದನಂದಸರಸ್ಪತಿ ಎಂಬ ವ್ಯಕ್ತಿ ಶೃಂಗೇರಿ ಶಾರದ ಪೀಠದಲ್ಲಿರುವವರು ನಿಜವಾದ ಸ್ವಾಮೀಜಿಗಳಲ್ಲ. ಅವರು ತಮ್ಮನ್ನು ಶಂಕರಚಾರ್ಯರೆಂದು ಬಿಂಬಿಸಿಕೊಳ್ಳುತ್ತಿದ್ದು ಇದೆಲ್ಲವು ನಿಜವಲ್ಲವೆಂದು ಮಾತನಾಡಿದ್ದಾರೆ. ಅಲ್ಲದೆ ದಕ್ಷಿಣದ ದ್ವಾರಕ್ಕೆ ಬದರಿ, ಪುರಿ ಹಾಗೂ ಶೃಂಗೇರಿ ಮಠವು ಸೇರಿ ನಾಲ್ಕೂ ಮಠಗಳನ್ನು 2 ಸಾವಿರ ವರ್ಷಗಳ ಹಿಂದೆ ಶಂಕರಚಾರ್ಯ ಭಾಗವತ್ಪಾದರು ಸ್ಥಾಪಿಸಿದ್ದು, ಈಗಿರುವ ದ್ವಾರಕ ಹಾಗೂ ಶೃಂಗೇರಿಯ ಪೀಠಾಧಿಪತಿಗಳು ನಿಜವಾದ ಸ್ವಾಮಿಗಳಲ್ಲ,ಇವರು ಸುಳ್ಳು ಹೇಳುತ್ತಾ ಹಿಂದು ಸಮಾಜ ವಂಚಿಸುತ್ತಿದ್ದಾರೆ. ಅದರಲ್ಲೂ ಶೃಂಗೇರಿ ಶ್ರೀಗಳಾದ ವಿಧುಶೇಖರಸ್ವಾಮಿಜಿಗಳು ತಿರುಪತಿ ಹಾಗೂ ಶ್ರೀಶೈಲಕ್ಕೆ ಭೇಟಿಯಿತ್ತಾಗ ನಾನು ಶಂಕರಚಾರ್ಯರೆಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆಂದು ಹೇಳಿಕೊಂಡಿದ್ದಾರೆ. ಇವರು ಶೃಂಗೇರಿ ಪೀಠಕ್ಕೆ ಆರ್ಹರಲ್ಲವೆಂದು ಸುಳ್ಳು ಹೇಳಿರುವುದು ನಿಜಕ್ಕೂ ದುರಂತ ಎಂದರು.

ದ್ವಾರಕ ಸ್ವಾಮಿಜಿ ವಿರುದ್ಧ 1978ರಲ್ಲಿ ಮಧ್ಯಪ್ರದೇಶದ ಕೋರ್ಟನಲ್ಲಿ ದಾವೆಯಿದ್ದು, ನಂತರ ಇತರೆ 4 ಸ್ವಾಮಿಜಿಗಳ ವಿರುದ್ಧವು ಅಸ್ತಿತ್ವ ಪ್ರಶ್ನಿಸಿ ವಿಚಾರಣೆ ನಡೆಯುತ್ತಿದೆ. ಸದ್ಯ ವಿಜಯನಗರದ ಹೊಸಪೇಟೆಯಲ್ಲಿ ಶೃಂಗೇರಿ ಮಠದ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂದರ್ಭದಲ್ಲಿ ಗೋವಿಂದನಂದರು ಇಂತಹ ಹೇಳಿಕೆ ನೀಡಿರುವುದನ್ನು ನಾವು ಖಂಡಿಸುವ ಮೂಲಕ ಪ್ರತಿಭಟಿಸುವುದಾಗಿ ತಿಳಿಸಿದರು.


ಹಿರಿಯ ವಕೀಲ ಶ್ಯಾಮನಾಥ್ ಮಾತನಾಡಿ, ದಕ್ಷಿಣ, ಹಾಗೂ ಉತ್ತರ ಭಾರತದ ಮಠಗಳಲ್ಲಿ ಬಹಳ ವ್ಯತ್ಯಾಸವಿದ್ದು ಕೆಲವರು ಹಿಂದು ಧರ್ಮದ ವಿರುದ್ಧವೇ ಮಾತನಾಡುವವರು ಇದ್ದಾರೆ.ಅದರಲ್ಲಿ ಶೃಂಗೇರಿ ಮಠದ ಬಗ್ಗೆ ಗೋವಿಂದನಂದಸರಸ್ಪತಿ ಹೇಳಿರುವ ಮಾತು ಖಂಡನೀಯ. ನಾವು ಆ ಮಠದ ವಿರೋಧಿಗಳಲ್ಲ, ಆ ಸ್ವಾಮಿಜಿ ವಿರುದ್ಧವಾಗಿ ಮಾತ್ರ ನಮ್ಮ ಪ್ರತಿಭಟನೆ ಕೇವಲ ಹತಾಶೆಯಿಂದ ಈ ಮಾತು ಬಂದಿದ್ದು ಹಿಂದು ಧರ್ಮ ಒಡೆಯುವ ಈ ಹುನ್ನಾರಕ್ಕೆ ಅವರು ತಕ್ಷಣ ಕ್ಷಮೆ ಕೇಳಬೇಕು ಎಂದರು.

ಗೋಷ್ಠಿಯಲ್ಲಿ ರವೀಶ್, ಬಿ.ಪಿ.ನಾರಾಯಣ್, ಶ್ರೀನಿವಾಸಮೂರ್ತಿ, ನಾರಾಯಣ್, ಲಕ್ಷ್ಮೀಪ್ರಸಾದ್, ಶಕುಂತಲಾ, ನಾಗಭೂಷಣ್ ಇತರರಿದ್ದರು.