ಬೆಂಗಳೂರು ಫ್ರೀಡಂ ಪಾರ್ಕಲ್ಲಿ ನಡೆವ ಹೋರಾಟದಲ್ಲಿ ಜಿಲ್ಲೆಯಿಂದ ಹೆಚ್ಚು ಜನರು ಭಾಗವಹಿಸಲು ಮುನಿ ಅಂಜಿನಪ್ಪ ಮನವಿ

ಕನ್ನಡಪ್ರಭ ವಾರ್ತೆ ಕೋಲಾರ

ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಮಾ.೨೫ರಂದು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಜಿಲ್ಲೆಯಿಂದ ಸ್ವಯಂ ಪ್ರೇರಿತರಾಗಿ ಸಾವಿರಾರು ಬಲಗೈ ಸಮುದಾಯದ ಬಂಧುಗಳು ಭಾಗವಹಿಸಬೇಕು ಎಂದು ದಮನಿತರ ಸೇವಾ ಸಮಿತಿ ರಾಜ್ಯ ಅಧ್ಯಕ್ಷ ಮೇಡಿಹಾಳ ಮುನಿ ಅಂಜಿನಪ್ಪ ಮನವಿ ಮಾಡಿದರು.

ನಗರದ ನಚಿಕೇತನ ನಿಲಯದ ಬುದ್ಧ ಮಂದಿರದಲ್ಲಿ ಬಲಗೈ ಜಾತಿ ಸಮುದಾಯದಿಂದ ಮಾ.೨೫ ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಆಯೋಗದ ಅವೈಜ್ಞಾನಿಕ ವರದಿ ಕೂಡಲೇ ತಿರಸ್ಕರಿಸಬೇಕು. ಇಷ್ಟು ದಿವಸ ಹೊಲಯ ಹಾಗೂ ಮಾದಿಗರು ಸಹೋದರರೆಂದು ಭಾವಿಸಿದ್ದೇವು. ಆದರೆ ಅವರ ಮನಸ್ಸುಗಳ ಮಧ್ಯೆ ಬೆಂಕಿ ಇಡುವ ಕೆಲಸವನ್ನು ಮಾಡಿದ್ದಾರೆ, ಒಳಮೀಸಲಾತಿ ಆಯೋಗದ ವರದಿ ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.


ದರಕಾಸ್ತು ಸಮಿತಿ ಸದಸ್ಯ ಖಾದ್ರಿಪುರ ಬಾಬು ಮಾತನಾಡಿ, ರಾಜ್ಯದಲ್ಲಿ ಸುಮಾರು ೩೦ ಲಕ್ಷ ಇದ್ದ ಬಲಗೈ ಸಮಾಜದ ಜನಸಂಖ್ಯೆಯನ್ನು ೨೪ ಲಕ್ಷಕ್ಕೆ ತಂದಿದ್ದಾರೆ. ಒಳಮೀಸಲಾತಿ ಹಂಚಿಕೆ ಮುನ್ನೆಲೆಗೆ ಬಂದ ಮೇಲೆ ಅದು ಸುಳ್ಳೆಂಬುದು ಸಾಬೀತಾಗಿದೆ. ಸಮೀಕ್ಷೆ ಯಲ್ಲಿ ಹೊಲೆಯ ಜನಾಂಗದವರು ಸರಿಯಾಗಿ ಪಾಲ್ಗೊಳ್ಳದೇ ವ್ಯತ್ಯಾಸವಾಗಿದೆ. ಪ್ರಾದೇಶಿಕವಾರು ಭಿನ್ನಭಿನ್ನವಾಗಿ ಜಾತಿಯನ್ನು ನಮೂದಿಸಿ ತೊಂದರೆಗೆ ಸಿಲಿಕಿದ್ದಾರೆ. ಇದು ಮಕ್ಕಳ ಭವಿಷ್ಯಕ್ಕೆ ಕಂಟಕವಾಗಿದೆ. ಮುಂಬರುವ ಮಾರ್ಚ್ ೨೭ರ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.

ಡಿಪಿಎಸ್ ಮುನಿರಾಜು, ದಲಿತ ಸೇನೆ ರಾಜ್ಯ ಅಧ್ಯಕ್ಷ ದಲಿತ ನಾರಾಯಣಸ್ವಾಮಿ, ಮುಖಂಡರಾದ ಮತ್ತಿಕುಂಟೆ ಕೃಷ್ಣ, ಕರವೇ ಸೋಮಶೇಖರ್, ಅಪ್ಪಿ ನಾರಾಯಣಸ್ವಾಮಿ, ರಾಜಕುಮಾರ್, ಚೇತನ್ ಬಾಬು, ನಾರಾಯಣಪ್ಪ, ಶ್ಯಾಮ್, ರತ್ನಮ್ಮ, ರಾಮಪುರ ಮುನಿರಾಜು, ನಾಗನಾಳ ಶಂಕರ್, ಬೊಟ್ಟು ರಾಜಪ್ಪ, ಡಿ.ಎಂ.ಮುನಿರಾಜು ಇದ್ದರು.