ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಗೋಮಾಳದ ಜಮೀನಿನಲ್ಲಿ ದುರಸ್ತಿ ಪ್ರಕ್ರಿಯೆ ಪೂರ್ಣಗೊಳಿಸದೆ ಅಕ್ರಮವಾಗಿ ಜೆಎಂಸಿ ಸರ್ವೇ ನಡೆಸುತ್ತಿರುವುದನ್ನು ತಡೆದು, ಕಾನೂನು ಬದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿಗೆ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಬಿ.ಸಿ.ಕೃಷ್ಣೇಗೌಡ, ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಸದಸ್ಯರು ಹಾಗೂ ನೂರಾರು ರೈತರು ಕಚೇರಿ ಮುತ್ತಿಗೆ ಹಾಕಿ ಜಿಲ್ಲಾ ಹಾಗೂ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು.

ತಾಲೂಕಿನ ಬೀಚನಕುಪ್ಪೆ ಗ್ರಾಮದ ಸರ್ವೇ ನಂ.76ರಲ್ಲಿ ಸುಮಾರು 136 ಎಕರೆ ಗೋಮಾಳ ಜಮೀನಿದ್ದು, ಅದರಲ್ಲಿ 61.26 ಗುಂಟೆ ಜಮೀನಿಗೆ ದುರಸ್ತಿ (ಪೋಡಿ) ಪ್ರಕ್ರಿಯೆ ಪೂರ್ಣಗೊಳಿಸದೆ ಕೆಐಎಡಿಬಿ ಮತ್ತು ತಾಲೂಕು ಸರ್ವೇ ಅಧಿಕಾರಿಗಳು ಜೊತೆಗೂಡಿ ಅಕ್ರಮವಾಗಿ ಜೆಎಂಸಿ ಸರ್ವೇ ಸ್ಕೆಚ್ ತಯಾರಿಸುತ್ತಿದ್ದಾರೆ. ಅಲ್ಲದೇ, ಕೇವಲ 23 ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡಿದ್ದಾರೆ ಎಂದರು.

ಸುಮಾರು 45 ಎಕರೆ ಮಾತ್ರ ಸರ್ವೇ ದಾಖಲೆಗಳಿವೆ. ಉಳಿದ ಜಮೀನಿಗೆ ಆರ್‌ಟಿಸಿನಲ್ಲಿ ಸರಿಯಾದ ದಾಖಲೆಗಳಿಲ್ಲ. ಜೊತೆಗೆ ಬರ್ಗರಿನ್ ಪ್ರಾರ್ಪಟಿಸ್‌ನ ಮಾಲೀಕ ಯಾವುದೇ ಮೂಲ ದಾಖಲಾತಿಗಳಿಲ್ಲದೆ ಕೇವಲ ಆರ್‌ಟಿಸಿ ಮುಖಾಂತರ, ಬೇನಾಮಿ ವ್ಯವಹಾರ ಮೂಲಕ ಖಾಸಗಿ ವ್ಯಕ್ತಿಗಳಿಂದ ಜಮೀನು ಕ್ರಯಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದರು.


ಕಳೆದ 2020ರ ಸೆ.9ರಲ್ಲಿ ಅಂದಿನ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಅವರು ನಿರ್ಧರಣಾ ಸಲಹಾ ಸಮಿತಿ ಸಭಾ ನಡಾವಳಿಯಲ್ಲಿ ಸರ್ವೇ ನಂ.76ರ ಸರ್ಕಾರದ ಜಮೀನು ಅಕ್ರಮ ಮಂಜೂರಾತಿ ನಡೆದಿರುವ ಬಗ್ಗೆ ಹಾಗೂ ಬರ್ಗರಿನ್ ಪ್ರಾರ್ಪಟಿಸ್ ಪ್ರೈ. ಲಿಮಿಟೆಡ್ ಖರೀದಿಸಿರುವ ಜಮೀನಿನ ನೈಜನೆಯನ್ನು ಸಮಗ್ರವಾಗಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಭೆಯಲ್ಲಿ ಹಾಜರಿದ್ದ ಸ್ಥಳೀಯ ತಹಸೀಲ್ದಾರ್ ಹಾಗೂ ತಾಲೂಕು ಸಹಾಯಕ ಆಯುಕ್ತರಿಗೆ ಸೂಚಿಸಿದ್ದರು. ಆದರೆ, ಈಗಿನ ಅಧಿಕಾರಿಗಳು ಅದನ್ನ ಪಾಲಿಸುತ್ತಿಲ್ಲ ಎಂದು ದೂರಿದರು.

ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಕೇತಾಗನಹಳ್ಳಿ ಆರ್‌ಟಿಸಿಯಂತೆ ಕ್ರಯಕ್ಕೆ ಪಡೆದಿದ್ದು, ಅದರಲ್ಲಿ ಯಾವುದೇ ಸರ್ವೆ ಸ್ಕೆಚ್, ಒ ಅಂಡ್ ಎಂಯು ಸರ್ವೇ ದಾಖಲೆ, ಎಂಆರ್ ದಾಖಲೆಗಳಲ್ಲ ಎಂದು ನ್ಯಾಯಾಲಯ ಮತ್ತು ಕಾನೂನು ಅಧಿಕಾರಿಗಳು ಆರ್‌ಟಿಸಿ ರದ್ದುಪಡಿಸಿದ್ದಂತೆ, ಬೀಚನಕುಪ್ಪೆ ಗ್ರಾಮದ ಸರ್ವೇ ನಂ.76 ರನ್ನು ರದ್ದು ಪಡಿಸಬೇಕು. ಜನ-ಜಾನುವಾರಿಗಳಿಗೆ ಮತ್ತು ಸ್ಥಳೀಯ ಅಭಿವೃದ್ಧಿಗೆ ಈ ಜಮೀನನ್ನು ಮೀಸಲಿಡಬೇಕು ಎಂದು ಆಗ್ರಹಿಸಿದರು.

ಭೂಗಳ್ಳರಿಂದ ಗೋಮಾಳ ಜಮೀನು ನಾಶವಾಗುತ್ತಿದೆ. ಜಾನುವಾರುಗಳ ಮೇವು ಹಕ್ಕು ಕಳೆದುಹೋಗುತ್ತಿದೆ. ಅಲ್ಲದೇ, ಈ ವ್ಯಾಪ್ತಿ ಒಂದು ಎಕರೆ ಸುಮಾರು 1.5 ಕೋಟಿ ರು. ಬೆಲೆ ಬಾಳಲಿದ್ದು, ಸರ್ಕಾರಕ್ಕೆ ಕೋಟ್ಯಂತರ ನಷ್ಟ ಸಂಭವಿಸಲಿದೆ. ಈ ವಿಷಯವಾಗಿ ಈಗಾಗಲೇ ಹಲವು ಬಾರಿ ತಾಲೂಕು ಕಚೇರಿ ಸೇರಿದಂತೆ ಸಂಬಂಧಪಟ್ಟ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. ಅಲ್ಲದೇ, ಸರ್ವೇ ಅಧಿಕಾರಿಗಳನ್ನು ಘೇರಾವ್ ಮಾಡಿ ವಾಪಸ್ ಕಳುಹಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಸರ್ವೇ ನಂ.76ರನ್ನು ಸಂಪೂರ್ಣವಾಗಿ ಗೋಮಾಳ ಎಂದು ಘೋಷಿಸಬೇಕು. ಈಗಾಗಲೇ ನಡೆಯುತ್ತಿರುವ ಎಲ್ಲಾ ಜೆಎಂಸಿ ಸರ್ವೇ ಕಾರ್ಯಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು. ಜೊತೆಗೆ ಅಕ್ರಮ ಆರ್‌ಟಿಸಿ ಮತ್ತು ಬೇನಾಮಿ ದಾಖೆಲೆಗಳನ್ನು ರದ್ದುಪಡಿಸಬೇಕು. ಈ ಹಿಂದಿನ 2020ರ ಸೆ.9ರ ಆದೇಶವನ್ನು ತಕ್ಷಣ ಜಾರಿಗೊಳಿಸಬೇಕು. ಅಲ್ಲದೇ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಂ.ವಿ ಕೃಷ್ಣ, ಹೊಸಉಂಡುವಾಡಿ ಗ್ರಾಮದ ಮಹದೇವು, ಪುಟ್ಟಮಾದು, ರಾಮಸ್ವಾಮಿ, ರಮೇಶ್, ಸುನಿಲ್, ಉಮೇಶ್, ನಂಜುಂಡ, ದೇವರಾಜು ಸೇರಿದಂತೆ ನೂರಾರು ರೈತರು ಇದ್ದರು.