ಮಹಿಳಾ ಮೀಸಲಾತಿ ವಿಧೇಯಕಕ್ಕೆ ವಿರೋಧ ಆರೋಪ । ಮುಂದೆ ಮಹಿಳೆಯರಿಂದ ಕಾಂಗ್ರೆಸ್‌ನಿಂದ ತಕ್ಕ ಉತ್ತರ: ಶಾಸಕ
ಕನ್ನಡಪ್ರಭ ವಾರ್ತೆ ಸಕಲೇಶಪುರಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ನಿಲುವಿಗೆ ಮುಂದಿನ ದಿನಗಳಲ್ಲಿ ದೇಶದ ಮಹಿಳೆಯರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಆಯೋಜಿಸಿದ್ದ ಜನಕ್ರೋಶ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ರಾಜಕೀಯದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ತರಲಾಗಿರುವ ಮಹಿಳಾ ಮೀಸಲಾತಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುವುದು ದುರದೃಷ್ಟಕರ ಬೆಳವಣಿಗೆ. ಮಹಿಳಾ ಸಬಲೀಕರಣಕ್ಕೆ ಇದು ಮಹತ್ವದ ಹೆಜ್ಜೆಯಾಗಿದ್ದು, ಇದನ್ನು ವಿರೋಧಿಸುವುದು ಮಹಿಳೆಯರ ಹಕ್ಕುಗಳಿಗೆ ಧಕ್ಕೆ ತರುವಂತಾಗಿದೆ ಎಂದು ಅಭಿಪ್ರಾಯಪಟ್ಟರು.ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವುದು ಕೇವಲ ತೋರಿಕೆಗಾಗಿ ಎಂಬುದು ನಾರಿ ಶಕ್ತಿ ವಂದನ್ ಅಧಿನಿಯಮದ ವಿರುದ್ಧ ಅವರು ತೋರಿದ ನಿಲುವಿನಿಂದ ಸಾಬೀತಾಗಿದೆ ಎಂದರು.ದಶಕಗಳ ಕಾಲ ಮಹಿಳೆಯರನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು, ಇಂದು ಮಹಿಳೆಯರಿಗೆ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಶೇಕಡಾ 33ರಷ್ಟು ರಾಜಕೀಯ ಮೀಸಲಾತಿ ನೀಡುವ ಐತಿಹಾಸಿಕ ಮಸೂದೆಯನ್ನು ಬೆಂಬಲಿಸುವ ಬದಲು ಅದರ ವಿರುದ್ಧ ನಿಂತಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.
ಈ ವಿರೋಧ ಪಕ್ಷಗಳು ಮಸೂದೆಯ ವಿರುದ್ಧ ಮತ ಚಲಾಯಿಸುವ ಮೂಲಕ ತಾವು ಮಹಿಳಾ ವಿರೋಧಿಗಳು ಎಂಬುದನ್ನು ಇಡೀ ದೇಶಕ್ಕೆ ಮತ್ತೊಮ್ಮೆ ಸ್ಪಷ್ಟಪಡಿಸಿವೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಮಾತನಾಡಿ, ಮಹಿಳೆಯರಿಗೆ ನಿಜವಾದ ಅಧಿಕಾರ ಸಿಗುವುದನ್ನು ಸಹಿಸದ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಈ ಧೋರಣೆಯು ಅವರ ಸಂಕುಚಿತ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಎಂದರು.
ಹಿಂದೆ ಇದೇ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಹಿಳಾ ಮೀಸಲಾತಿಯನ್ನು ಜಾರಿಗೆ ತರದೆ ಕಾಲಹರಣ ಮಾಡಿತ್ತು. ಈಗ ಅದನ್ನು ಜಾರಿಗೆ ತರಲು ಮುಂದಾದಾಗ ಕ್ಷುಲ್ಲಕ ಕಾರಣಗಳನ್ನು ನೀಡಿ ವಿರೋಧಿಸುತ್ತಿದೆ ಎಂದರು.ಬಿಜೆಪಿ ಜಿಲ್ಲಾ ಮುಖಂಡೆ ನೇತ್ರ ಸುರೇಶ್ ಮಾತನಾಡಿ, ಸ್ತ್ರೀಶಕ್ತಿಯ ಗೌರವಕ್ಕಾಗಿ ತಂದ ಈ ಅಧಿನಿಯಮಕ್ಕೆ ಅಡ್ಡಿಪಡಿಸಿದ ಕಾಂಗ್ರೆಸ್ ಮತ್ತು ವಿಪಕ್ಷಗಳ ಈ ನಡೆ ಕೋಟ್ಯಂತರ ಮಹಿಳೆಯರ ಕನಸಿಗೆ ಮಾಡಿದ ದ್ರೋಹವಾಗಿದೆ. ನಾರಿ ಶಕ್ತಿಯ ಪ್ರಗತಿಗೆ ಕಂಟಕವಾಗಿರುವ ಇಂತಹ ಮಹಿಳಾ ವಿರೋಧಿ ರಾಜಕಾರಣಕ್ಕೆ ದೇಶದ ಮಹಿಳೆಯರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವುದು ಖಚಿತ ಎಂದರು.
ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಟಿ. ರಾಜಕುಮಾರ್ ಮಾತನಾಡಿ, ಮಹಿಳೆಯರಿಗೆ ಆಸ್ತಿ ಹಕ್ಕು, ಶಿಕ್ಷಣ, ರಾಜಕೀಯ ಭಾಗವಹಿಸುವಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅವಕಾಶ ದೊರಕಬೇಕು. ಮಹಿಳೆಯರು ವಿಧಾನಸಭೆ, ಸಂಸತ್ ಸೇರಿದಂತೆ ಆಡಳಿತ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನೇತ್ರಾವತಿ, ಬಬಿತ ವಿಶ್ವನಾಥ್, ಸುಷ್ಮ, ಕೃಷ್ಣಮೂರ್ತಿ ಅಬ್ಬನ, ಆಗನಿ ಸೋಮಶೇಖರ್, ಶಾಸಕ ಸಿಮೆಂಟ್ ಮಂಜು ಅವರ ಪತ್ನಿ ಪ್ರತಿಭಾ, ಪುರಸಭಾ ಮಾಜಿ ಸದಸ್ಯರಾದ ವನಜಾಕ್ಷಿ, ರೇಖಾ ರುದ್ರ ಕುಮಾರ್, ಮುಖಂಡರಾದ ಲೋಕೇಶ್ ಎಸ್.ಎಲ್., ಮನು ಕುಮಾರ್, ಪ್ರಗತಿ, ಗಾಯತ್ರಿ, ಮೇಘ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.