ಡಾ.ರಾಜ್‌ಕುಮಾರ್ ಪುಣ್ಯಭೂಮಿ ಜಾಗದ ಕುರಿತು ಅವಹೇಳನಕಾರಿ ಹೇಳಿಕೆ । ಡಾ.ರಾಜ್‌ಕುಮಾರ್ ಅಭಿಮಾನಿ ಸಂಘ ಆಗ್ರಹ
ಕನ್ನಡಪ್ರಭ ವಾರ್ತೆ ಹಾಸನವರನಟ ಡಾ.ರಾಜ್‌ಕುಮಾರ್ ಅವರ ಪುಣ್ಯಭೂಮಿ ಜಾಗದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ನಟ ಚೇತನ್ ವಿರುದ್ಧ ಕಾನೂನು ಕ್ರಮ ಕೈಗೊಂಡು, ಅವರನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದಿಂದ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಗರದ ಎನ್.ಆರ್. ವೃತ್ತದ ಸಮೀಪ ಇರುವ ರಾಜರತ್ನ ಡಾ.ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಚೇತನ್ ಅಹಿಂಸಾ ವಿರುದ್ಧ ತಕ್ಷಣ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಕರ್ನಾಟಕದ ಜನರ ಭಾವನೆಗೆ ಧಕ್ಕೆ ತಂದಿರುವ ಕಾರಣ ಅವರನ್ನು ರಾಜ್ಯದಿಂದ ಗಡಿಪಾರು ಮಾಡುವ ಕ್ರಮವನ್ನೂ ಪರಿಗಣಿಸಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಅಭಿಮಾನಿಗಳ ಸಂಘದ ಹಾಗೂ ಗಾಣಿಗರ ಸಮಾಜದ ಜಕ್ಕನಹಳ್ಳಿ ಮೋಹನ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದ, ಕೋಟ್ಯಂತರ ಕನ್ನಡಿಗರ ಆರಾಧ್ಯ ದೈವವಾಗಿರುವ ಡಾ.ರಾಜ್‌ಕುಮಾರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ರಾಜ್ಯದ ಜನರ ಭಾವನೆಗೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೇತನ್ ಅಹಿಂಸಾ ಅಮೆರಿಕದಲ್ಲಿ ಜನಿಸಿ ನಂತರ ಕರ್ನಾಟಕಕ್ಕೆ ಬಂದು ಕೆಲ ಸಿನಿಮಾಗಳಲ್ಲಿ ನಟಿಸಿದ್ದು, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ವಿವಾದಾತ್ಮಕ ಹೇಳಿಕೆಗಳ ಮೂಲಕ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಇದೀಗ ಡಾ.ರಾಜ್‌ಕುಮಾರ್ ಅವರ ಪುಣ್ಯಭೂಮಿ ಕುರಿತು ಅವಮಾನಕಾರಿಯಾಗಿ ಮಾತನಾಡಿರುವುದು ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಡಾ. ರಾಜ್‌ಕುಮಾರ್ ಅವರು ಕೇವಲ ನಟರಲ್ಲ, ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಕನ್ನಡಿಗರ ಆತ್ಮಗೌರವದ ಪ್ರತೀಕ. ಅವರ ಕುರಿತು ಯಾವುದೇ ರೀತಿಯ ಅವಹೇಳನವನ್ನು ಸಹಿಸಲು ಸಾಧ್ಯವಿಲ್ಲ. ಕನ್ನಡ ನಾಡಿನ ಗೌರವಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ, ಡಾ.ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘ ಹಾಗೂ ರಾಜರತ್ನ ಡಾ.ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎಸ್. ರತೀಶ್ ರಾಜ್, ಕಾರ್ಯದರ್ಶಿ ವಿಜಯಕುಮಾರ್, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ರೇವಣ್ಣ, ಉಮೇಶ್, ಸಯ್ಯಾದ್ ಏಜಾಜ್, ಹರೀಶ್ ಗೌಡ, ದಿನೇಶ್ ಗೌಡ, ಎನ್.ಎನ್. ಉಮೇಶ್, ಗೋಪಿನಾಥ್ ಇತರರು ಉಪಸ್ಥಿತರಿದ್ದರು.