ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಜಲಸಿರಿ ನಿರ್ವಹಣೆ ವಿಶೇಷ ಸಭೆ ನಡೆಸಿ

| Published : Sep 18 2024, 01:48 AM IST

ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಜಲಸಿರಿ ನಿರ್ವಹಣೆ ವಿಶೇಷ ಸಭೆ ನಡೆಸಿ
Share this Article
  • FB
  • TW
  • Linkdin
  • Email

ಸಾರಾಂಶ

ಆಡಳಿತ ಪಕ್ಷದ ಸದಸ್ಯ ಭಾಮಿ ಅಶೋಕ್ ಶೆಣೈ ಅವರು ಜಲಸಿರಿ ಯೋಜನೆಯ ಸಂಪೂರ್ಣ ಜವಾಬ್ದಾರಿ ಅವರದ್ದೇ ಆಗಿರುವಾಗ ಕಿಂಡಿ ಅಣೆಕಟ್ಟು ಮತ್ತು ಗೇಟ್ ನಿರ್ವಹಣೆ ನಮ್ಮದಲ್ಲ ಎಂದು ಜಲಸಿರಿಯ ಅಧಿಕಾರಿಗಳು ಹೇಳುತ್ತಿರುವುದು ಸಮಂಜಸವಲ್ಲ. ಕಿಂಡಿ ಅಣೆಕಟ್ಟು ಮತ್ತು ಗೇಟ್ ನಿರ್ವಹಣೆಯನ್ನು ಅವರೇ ಮಾಡಬೇಕೆಂದು ನಿರ್ಣಯ ಮಾಡುವಂತೆ ಹೇಳಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಜಲಸಿರಿ ಯೋಜನೆಯ ನೆಕ್ಕಿಲಾಡಿಯಲ್ಲಿರುವ ಕಿಂಡಿ ಅಣೆಕಟ್ಟು ಮತ್ತು ಗೇಟುಗಳ ನಿರ್ವಹಣೆಯನ್ನು ಜಲಸಿರಿ ಯೋಜನೆಯವರೇ ನಿರ್ವಹಣೆ ಮಾಡಬೇಕಾ ಅಥವಾ ನಗರಸಭೆ ಮಾಡಬೇಕಾ ಎಂಬ ವಿಚಾರದಲ್ಲಿ ಗೊಂದಲವಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ವಿಶೇಷ ಸಭೆ ನಡೆಸಿ ಚರ್ಚೆ ನಡೆಸಲು ಅವಕಾಶ ನೀಡಬೇಕು ಎಂದು ನಗರಸಭಾ ಸದಸ್ಯರು ಆಗ್ರಹಿಸಿದರು.

ಪುತ್ತೂರು ನಗರಸಭೆಯ ಎರಡನೇ ಅವಧಿಯ ಪ್ರಥಮ ಸಭೆಯು ಮಂಗಳವಾರ ನಗರಸಭಾ ಸಭಾಂಗಣದಲ್ಲಿ ನೂತನ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಜೀವಂಧರ್ ಜೈನ್ ಅವರು ಜಲಸಿರಿ ಯೋಜನೆಯವರಿಗೆ ನಗರಸಭೆಯಿಂದ ಮಾಸಿಕ ೫೦ ಲಕ್ಷ ರು. ಪಾವತಿಸಬೇಕಾಗುತ್ತದೆ. ಆದರೆ ಯೋಜನೆಯ ವಿಚಾರದಲ್ಲಿ ಮಾಡಿಕೊಂಡಿರುವ ಕರಾರುಪತ್ರದಲ್ಲಿ ಕಿಂಡಿ ಅಣೆಕಟ್ಟು ಮತ್ತು ಗೇಟ್ ನಿರ್ವಹಣೆಯ ಬಗ್ಗೆ ಉಲ್ಲೇಖವಿಲ್ಲ. ೨೦೨೩ಕ್ಕೆ ಅವರು ಯೋಜನೆಯನ್ನು ಪೂರ್ಣಗೊಳಿಸಿ ಬಿಟ್ಟು ಕೊಡಬೇಕಿತ್ತು, ಅದೂ ಆಗಿಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಯೇ ಜಲಸಿರಿ ಯೋಜನೆಗೆ ಸಂಬಂಧಿಸಿದ ಕರಾರು ಪತ್ರ ಮಾಡಲಾಗಿರುವುದರಿಂದ ಅವರ ಉಪಸ್ಥಿತಿಯಲ್ಲಿ ನಗರಸಭೆಯ ವಿಶೇಷ ಸಭೆ ಕರೆದು ಈ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಭಾಮಿ ಅಶೋಕ್ ಶೆಣೈ ಅವರು ಜಲಸಿರಿ ಯೋಜನೆಯ ಸಂಪೂರ್ಣ ಜವಾಬ್ದಾರಿ ಅವರದ್ದೇ ಆಗಿರುವಾಗ ಕಿಂಡಿ ಅಣೆಕಟ್ಟು ಮತ್ತು ಗೇಟ್ ನಿರ್ವಹಣೆ ನಮ್ಮದಲ್ಲ ಎಂದು ಜಲಸಿರಿಯ ಅಧಿಕಾರಿಗಳು ಹೇಳುತ್ತಿರುವುದು ಸಮಂಜಸವಲ್ಲ. ಕಿಂಡಿ ಅಣೆಕಟ್ಟು ಮತ್ತು ಗೇಟ್ ನಿರ್ವಹಣೆಯನ್ನು ಅವರೇ ಮಾಡಬೇಕೆಂದು ನಿರ್ಣಯ ಮಾಡುವಂತೆ ಹೇಳಿದರು.

ಇದಕ್ಕೆ ಉತ್ತರಿಸಿದ ಪೌರಾಯುಕ್ತ ಮಧು ಎಸ್. ಮನೋಹರ್, ಜಲಸಿರಿ ಯೋಜನೆಯವರು ೨೦೨೩ರಲ್ಲಿ ಒಂದು ಬಾರಿ ಕಿಂಡಿ ಅಣೆಕಟ್ಟು ಮತ್ತು ಗೇಟ್ ದುರಸ್ತಿ ಮಾಡಿ ಕೊಟ್ಟಿದ್ದಾರೆ. ನಿರ್ವಹಣೆಯ ಜವಾಬ್ದಾರಿ ನಮಗಿಲ್ಲ ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ಆದರೆ ೮ ವರ್ಷಗಳ ಕಾಲ ಅವರೇ ನಿರ್ವಹಣೆ ಮಾಡಿಕೊಡಬೇಕು ಎಂದು ಎಂದು ಸ್ಪಷ್ಟನೆ ನೀಡಿದರು. ರಸ್ತೆ ದುರಸ್ತಿಗೆ ಅನುದಾನ: ನಗರದ ಮುಖ್ಯ ರಸ್ತೆಯೂ ಸೇರಿದಂತೆ ಕೆಲವೊಂದು ರಸ್ತೆಗಳು ಸಂಪೂರ್ಣವಾಗಿ ಗುಂಡಿ ಬಿದ್ದು ಹದಗೆಟ್ಟಿದೆ. ಇದರ ದುರಸ್ತಿಗೆ ೩ ಕೋಟಿ ರುಪಾಯಿಯಾದರೂ ಬೇಕಾದೀತು. ನಗರಸಭೆಯ ಅನುದಾನದಲ್ಲಿ ಈ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗಾಗಿ ಈ ಬಗ್ಗೆ ಶಾಸಕರ ಜತೆ ಮಾತುಕತೆ ನಡೆಸಿ ಸರ್ಕಾರದಿಂದ ವಿಶೇಷ ಅನುದಾನ ತರಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಭಾಮಿ ಅಶೋಕ್ ಶೆಣೈ ಸಲಹೆ ನೀಡಿದರು.

ನಗರಸಭೆ ಸದಸ್ಯರಾದ ರಮೇಶ್ ರೈ, ಸಂತೋಷ್‌ ಕುಮಾರ್, ಪಿ.ಜಿ. ಜಗನ್ನಿವಾಸ ರಾವ್, ವಿದ್ಯಾ ಆರ್. ಗೌರಿ, ಗೌರಿ ಬನ್ನೂರು, ಕೆ. ಫಾತಿಮತ್ ಝವುರಾ, ಬಾಳಪ್ಪ ಯಾನೆ ಸುಂದರ ಪೂಜಾರಿ ಬಡಾವು, ಶಶಿಕಲಾ ಸಿ.ಎಸ್. ಸಭೆಯಲ್ಲಿ ಹಾಜರಿದ್ದರು.