ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷನಾಗಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು 25 ಕ್ಕೂ ಹೆಚ್ಚು ಸರ್ಕಾರಿ ಆದೇಶಗಳನ್ನು ಸರ್ಕಾರಿ ನೌಕರರ ಪರವಾಗಿ ಮಾಡಿಸಿದ್ದು, ಇದರ ಹಿಂದಿನ ಶಕ್ತಿ ನೀವು.ಮುಂದೆಯೂ ಇದೇ ರೀತಿಯ ಸಹಕಾರ ನೀಡದರೆ ಮತ್ತಷ್ಟು ಕೆಲಸ ಕಾರ್ಯಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ತಿಳಿಸಿದ್ದಾರೆ. ನಗರದ ಗ್ರಂಥಾಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘ ಕೇಂದ್ರ ಸಂಘ ಹಾಗೂ ತುಮಕೂರು ಜಿಲ್ಲಾ ಶಾಖೆಯ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯೆ ಸ್ವಾಭಿಮಾನದ ಬದುಕು ಸಾಧ್ಯ. ದೊಡ್ಡ ಹುದ್ದೆಗಳಿಗೆ ಹೋದಾಗ ಸಂಬಂಧಗಳನ್ನು ಮರೆಯಬೇಡಿ. ಹಿರಿಯರ ಮೇಲಿನ ಗೌರವ ಕಡಿಮೆಯಾಗಬಾರದು. ನಿಮ್ಮ ಸಾಧನೆಯ ಹಿಂದೆ ಅವರ ಶ್ರಮವಿದೆ ಎಂದು ಕಿವಿಮಾತು ಹೇಳಿದರುಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಜಾರಿಗೆ ಬಂದಿದೆ. ಒಳ್ಳೆಯ ವೇತನ ದೊರೆತಿದೆ. 21500 ಕೋಟಿ ನೀಡಿದೆ. ಆಗಸ್ಟ್ ವೇತನಕ್ಕೆ ಸೇರಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಭಿನಂದನೆ ಸಲ್ಲಿಸುತ್ತೇನೆ ಎಂದರು. ನಗರ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಪ್ರತಿಭಾ ಪುರಸ್ಕಾರ ಎನ್ನುವುದು ಮಕ್ಕಳ ಶ್ರಮಕ್ಕೆ ಸಿಗುವ ಗೌರವ. ಇಂತಹ ಕಾರ್ಯಕ್ರಮಗಳಲ್ಲಿ ರಾಜಕೀಯ ಒಣ ಭಾಷಣಗಳಿಂದ ಯಾವುದೇ ಪ್ರಯೋಜನವಿಲ್ಲ. ಮಕ್ಕಳಿಗೆ ಭವಿಷ್ಯದಲ್ಲಿ ಎದುರಿಸಬಹುದಾದ ಸವಾಲುಗಳ ಕುರಿತು ಜಾಗೃತಿ ಮೂಡಿಸಿ, ಆ ಮೂಲಕ ಮಕ್ಕಳ ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗುವಂತೆ ಮಾಡಿ ಎಂದು ಸಲಹೆ ನೀಡಿದರು.ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜು, ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಮಾತನಾಡಿದರು. ನರಸಿಂಹರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಮಾರಂಭದಲ್ಲಿ 200 ಕ್ಕೂ ಹೆಚ್ಚು ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿ ಮಕ್ಕಳನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ನಿವಾಸ್ ತಿಮ್ಮೇಗೌಡ, ಖಜಾಂಚಿ ಡಾ.ಸಿದ್ದರಾಮಯ್ಯ, ಹಿರಿಯ ಉಪಾಧ್ಯಕ್ಷ ರುದ್ರಪ್ಪ, ಪಾಂಡುರಂಗ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಜಿ.ವಿ.ಮೋಹನಕುಮಾರ, ವಿವಿಧ ನೌಕರರ ಸಂಘದ ಅಧ್ಯಕ್ಷರಾದ ಆರ್.ಪರಶಿವಮೂರ್ತಿ, ರಮೇಶ್ ಎಚ್.ವಿ., ಬಿ.ಆರ್. ವೆಂಕಟೇಶ್, ಕರುಣಾಕರಶೆಟ್ಟಿ, ಎಚ್.ಎಂ.ರುದ್ರೇಶ್, ಪದಾಧಿಕಾರಿಗಳಾದ ಟಿ.ಎನ್. ಜಗದೀಶ್, ಮಂಜುಳ, ಎಚ್.ಕೆ. ನರಸಿಂಹಮೂರ್ತಿ, ಆರ್ ಪರಶಿವಮೂರ್ತಿ, ರೇಣುಕಾರಾಧ್ಯ, ದೊಡ್ಡಯ್ಯ,ಆರ್.ವೆಂಕಟೇಶ್, ದೇವರಾಜ್, ಎಚ್.ಇ.ರಮೇಶ್, ಡಿ.ಪದ್ಮರಾಜ್, ಜಿ.ಎಸ್.ಇರ್ಫಾನ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.