ಬರಲಿವೆ, ಪಿಲಿಕುಳ ಮೃಗಾಲಯಕ್ಕೆ ಹೊಸ ಅತಿಥಿಗಳು!

| Published : Sep 18 2024, 01:48 AM IST

ಸಾರಾಂಶ

ಶೀಘ್ರದಲ್ಲೇ ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ ಗಂಡು ಏಷ್ಯಾಟಿಕ್ ಸಿಂಹ, ಅಳಿವಿನಂಚಿನಲ್ಲಿರುವ ತೋಳ, ಘರಿಯಾಲ್ ಮೊಸಳೆ, ಅಪರೂಪದ ಪಕ್ಷಿಗಳು ಆಗಮಿಸಲಿವೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಹೊರವಲಯದ ಪಿಲಿಕುಳ ನಿಸರ್ಗಧಾಮದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಪ್ರಾಣಿಗಳ ವಿನಿಮಯ ಯೋಜನೆಯ ಅಡಿಯಲ್ಲಿ ದೇಶದ ವಿವಿಧ ಮೃಗಾಲಯಗಳಿಂದ ಅಪರೂಪದ ಪ್ರಾಣಿ, ಪಕ್ಷಿ ಹಾಗೂ ಉರಗಗಳನ್ನು ತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಶೀಘ್ರದಲ್ಲೇ ಒಡಿಶಾದ ನಂದನ್ ಕಾನನ್ ಮೃಗಾಲಯದಿಂದ ಗಂಡು ಏಷ್ಯಾಟಿಕ್ ಸಿಂಹ, ಅಳಿವಿನಂಚಿನಲ್ಲಿರುವ ತೋಳ, ಘರಿಯಾಲ್ ಮೊಸಳೆ, ಅಪರೂಪದ ಪಕ್ಷಿಗಳು ಆಗಮಿಸಲಿವೆ.

ಪಿಲಿಕುಳದಲ್ಲಿರುವ ಹೆಚ್ಚುವರಿ ಪ್ರಾಣಿಗಳದ ಧೋಳ (ಕಾಡು ನಾಯಿ), ರೆಟಿಕ್ಯುಲೆಟೆಡ್ ಹೆಬ್ಬಾವು, ಮರಬೆಕ್ಕು, ಬಿಳಿ ಗರುಡ ಇತ್ಯಾದಿಗಳನ್ನು ನೀಡಲಾಗುತ್ತದೆ.

ಮುಂಬೈನ ಬೈಕುಳ ಮೃಗಾಲಯದಿಂದ ದಕ್ಷಿಣ ಅಮೆರಿಕದ ಮೂಲದ ಪೆಂಗ್ವಿನ್ ಪಕ್ಷಿಗಳನ್ನು ತರಿಸಲಾಗುವುದು. ಪಿಲಿಕುಳದಿಂದ ಮಾರ್ಷ ಮೊಸಳೆಗಳನ್ನು ಬದಲಿಗೆ ನೀಡಲಾಗುವುದು. ಮದ್ರಾಸ್ ಪ್ರೊಕೊಡೈಲ್ ಬ್ಯಾಂಕ್‌ನಿಂದ ಹಳದಿ ಅನಕೊಂಡ ಉರಗಗಳು ಆಗಮಿಸಲಿವೆ. ಬದಲಿಗೆ ಸರ್ಪ ಮತ್ತು ವಿಷಕಾರಿ ಹಾವುಗಳನ್ನು ನೀಡಲಾಗುವುದು.ಪಂಜಾಬ್‌ನ ಮಹೇಂದ್ರ ಚೌಧರಿ ಮೃಗಾಲಯದಿಂದ ಅಳಿವಿನಂಚಿನಲ್ಲಿರುವ ತೋಳಗಳು, ಘರಿಯಾಲ್ ಮೊಸಳೆ, ಅಪರೂಪದ ಪಕ್ಷಿಗಳು ಬರಲಿವೆ. ಬದಲಿಗೆ ಹೆಚ್ಚುವರಿ ಪ್ರಾಣಿಗಳದ ಧೋಳ (ಕಾಡು ನಾಯಿ), ರೆಟಿಕ್ಯುಲೆಟೆಡ್ ಹೆಬ್ಬಾವು, ಮುಸಕೋವಿ ಬಾತುಕೋಳಿ ಹಾಗೂ ಹೈನಾ (ಕತ್ತೆಕಿರುಬ) ಗಳನ್ನು ನೀಡಲಾಗುವುದು.

ತಮಿಳುನಾಡಿನ ವನ್ನಲೂರ್ ಮೃಗಾಲಯದಿಂದ ಅಳಿವಿನಂಚಿನಲ್ಲಿರುವ ತೋಳಗಳು ಹಾಗೂ ಅಪರೂಪದ ಪಕ್ಷಿಗಳನ್ನು ತರಿಸಲಾಗುವುದು. ಬದಲಿಗೆ ಕಾಳಿಂಗ ಸರ್ಪ ಮತ್ತು ಹೈನಾ (ಕತ್ತೆಕಿರುಬ) ಗಳನ್ನು ನೀಡಲಾಗುವುದು.

ಪಿಲಿಕುಳದಲ್ಲಿ ಪೆಂಗ್ವಿನ್‌ಗಳಿಗೆ ಪೂರಕ ಪರಿಸರ ಒದಗಸಲು ವಿಶೇಷ ಆವರಣದ ಅ‍ವಶ್ಯಕತೆ ಇದೆ. ದಾನಿಗಳು ಅಥವಾ ಸಿಎಸ್‌ಆರ್‌ ಅನುದಾನ ಸಹಾಯದಲ್ಲಿ ಆವರಣ ರಚಿಸಲಾಗುವುದು. ಪೆಂಗ್ವಿನ್‌ ಹೊಂದುವುದರಿಂದ ಮೃಗಾಲಯಕ್ಕೆ ಆಗಮಿಸುವವರ ಸಂಖ್ಯೆ ಕೂಡ ಗಮನಾರ್ಹ ಹೆಚ್ಚಾಗಲಿದ್ದು, ಆದಾಯವೂ ಹೆಚ್ಚಳವಾಗಲಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕ ಎಚ್‌.ಜೆ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.