ಶಿರಹಟ್ಟಿ: ಸರ್ಕಾರದ ಮಾರ್ಗಸೂಚಿ ಮತ್ತು ಆದೇಶದಂತೆ ಮಾ. ೧೮ರಿಂದ ಏ. ೨ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಜರುಗಲಿದ್ದು, ಪಾರದರ್ಶಕವಾಗಿ ಪರೀಕ್ಷೆ ನಿಯಮ ಪಾಲನೆ ಮಾಡಿಕೊಂಡು ನಕಲುಮುಕ್ತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್‌ ಸೂಚಿಸಿದರು.ಬುಧವಾರ ತಹಸೀಲ್ದಾರ್‌ ಕಾರ್ಯಾಲಯದ ಸಭಾಭವನದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈಗಾಗಲೇ ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಯಾವುದೇ ರೀತಿಯಿಂದ ಲೋಪದೋಷ ಆಗದಂತೆ ಕಾರ್ಯನಿರ್ವಹಿಸಬೇಕು. ತಾಲೂಕು ವ್ಯಾಪ್ತಿಯ ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಯಾವುದೇ ಕಳವಳ, ಅಭದ್ರತೆಯ ಭಯವಿಲ್ಲದೇ ಪರೀಕ್ಷೆ ಬರೆಯಬೇಕು ಎಂದರು.ಪರೀಕ್ಷೆ ವಿದ್ಯಾರ್ಥಿಗಳ ಜ್ಞಾನ, ಪರಿಶ್ರಮ ಮತ್ತು ಸಾಮರ್ಥ್ಯವನ್ನು ಅಳೆಯುವ ಪ್ರಮುಖ ವಿಧಾನವಾಗಿದೆ. ಆದ್ದರಿಂದ ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ನಕಲುಮುಕ್ತವಾಗಿ ನಡೆಸುವುದು ಅತ್ಯಂತ ಅಗತ್ಯವಾಗಿದೆ. ನಕಲು ಮಾಡುವುದರಿಂದ ವಿದ್ಯಾರ್ಥಿಗಳ ನೈತಿಕ ಮೌಲ್ಯಗಳು ಕುಸಿಯುತ್ತವೆ ಹಾಗೂ ನಿಷ್ಠೆಯಿಂದ ಓದಿದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಶಿಕ್ಷಕರು ಹಾಗೂ ಪರೀಕ್ಷಾ ಮೇಲ್ವಿಚಾರಕರು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಿ ಪರೀಕ್ಷೆಯನ್ನು ನ್ಯಾಯಯುತವಾಗಿ ನಡೆಸಬೇಕು ಎಂದರು. ತಾಲೂಕಿನಲ್ಲಿ ಸರ್ಕಾರಿ ಶಾಲೆಗಳು ೧೪, ಅನುದಾನಿತ ಪ್ರೌಡ ಶಾಲೆಗಳು ೮, ಅನುದಾನ ರಹಿತ ಪ್ರೌಢಶಾಲೆಗಳು ೨ ಒಟ್ಟು ೨೪ ಶಾಲೆಗಳಿದ್ದು, ಒಟ್ಟು ೧೨೨೯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ತಾಲೂಕಿನಲ್ಲಿ ಒಟ್ಟು ೬ ಪರೀಕ್ಷಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದ್ದು, ೬ ಜನ ಅಧೀಕ್ಷಕರು, ೬ ಜನ ಕಸ್ಟೋಡಿಯನ್, ೬ ಜನ ಸ್ಥಾನಿಕ ಜಾಗೃತ ದಳದ ಅಧಿಕಾರಿಯನ್ನು, ೩ ಜನ ಮಾರ್ಗಾಧಿಕಾರಿಗಳು, ೬ ಜನ ಮೊಬೈಲ್ ಸ್ವಾಧೀನಾಧಿಕಾರಿಗಳು, ೧೧೫ ಜನ ಕೊಠಡಿ ಮೇಲ್ವಿಚಾರಕರನ್ನು, ೧೨ ಜನ ಆರೋಗ್ಯ ಇಲಾಖೆ ಸಿಬ್ಬಂದಿ ೧೨ ಜನ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯಕ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಬಸ್ಸಿನ ಸಮಸ್ಯೆ ಉಂಟಾಗದಂತೆ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಓಡಿಸಲು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಗೆ ಹಾಜರಾಗುವ ಮಕ್ಕಳು ಪ್ರವೇಶ ಪತ್ರ ತೋರಿಸಿದರೆ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ಅನುವು ಮಾಡಿಕೊಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಪ್ಪ ದೊಡ್ಡಮನಿ, ಗ್ರೇಡ್ ೨ ತಹಸೀಲ್ದಾರ್ ವಿ.ಎ. ಮುಳಗುಂದಮಠ, ಸಂತೋಷ ಅಸ್ಕಿ, ಮಲ್ಲಿಕಾರ್ಜುನ ಪಾಟೀಲ, ಎ.ಎ. ಬಾರಿಗಿಡದ, ಉಮೇಶ ಹುಚ್ಚಯ್ಯನಮಠ ಸೇರಿದಂತೆ ಇತರರು ಇದ್ದರು.