ಹಾವೇರಿ: ನೊಂದವರಿಗೆ ನ್ಯಾಯ ಒದಗಿಸುವಲ್ಲಿ ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದ್ದು, ಮಹಿಳಾ ನ್ಯಾಯಾಧೀಶರು ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇತರೆ ಮಹಿಳೆಯರಿಗೆ ಪ್ರೇರಣೆಯಾಗಿರುತ್ತಾರೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿರಾದಾರ ದೇವೀಂದ್ರಪ್ಪ ಎನ್. ಹೇಳಿದರು.

ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಭವನದಲ್ಲಿ ಸೋಮವಾರ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಅಭಿಯೋಜನಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಅಂತಾಷ್ಟ್ರೀಯ ಮಹಿಳಾ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನ್ಯಾಯಾಂಗದ ಎಲ್ಲ ಹಂತಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸಹ ಇತರರಿಗೆ ಮಾರ್ಗದರ್ಶಿ ಸ್ಥಾನದಲ್ಲಿ ನಿಲ್ಲಬೇಕು. ನಾಯಕತ್ವದ ಸ್ಥಾನ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಹಾಯ ಮಾಡಬಹುದು. ಪೋಕ್ಸೋ, ಬಾಲ್ಯವಿವಾಹ ಹಾಗೂ ವರದಕ್ಷಿಣೆ ಪಿಡುಗು ತಡೆಗೆ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ಇಂತಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯ. ಜೊತೆಗೆ ಬೇಸಿಗೆ ಸಮಯದಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ಪ್ರಾಣಿ-ಪಕ್ಷಿಗಳಿಗೆ ನಮ್ಮ ನಮ್ಮ ಮನೆಯ ಆವರಣದಲ್ಲಿ ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡುವುದು ಮಾನವೀಯತೆ ಆಗಿದೆ ಎಂದು ಹೇಳಿದರು.

ಸನ್ಮಾನ

ಇದೇ ಸಂದರ್ಭದಲ್ಲಿ ಮಹಿಳಾ ನ್ಯಾಯಾಧೀಶರಾದ ಅಶ್ವಿನಿ ಶಿರಿಯಣ್ಣನವರ, ಶೋಭಾ ಬಿ.ಜಿ., ಶ್ರೀಶೈಲಜಾ ಎಚ್.ವಿ., ಸರ್ಕಾರಿ ಅಭಿಯೋಜಕರಾದ ಸರೋಜಾ ಕೂಡಲಗಿಮಠ, ಸಹಾಯಕ ಸರ್ಕಾರಿ ಅಭಿಯೋಜಕರಾದ ಇಂದುಮತಿ ಪಾಟೀಲ ಅವರನ್ನು ಸನ್ಮಾನಿಸಲಾಯತು.

ಬಹುಮಾನ ವಿತರಣೆ


ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ ರಂಗೋಲಿ ಹಾಗೂ ಮನೋರಂಜನೆ ಕಾರ್ಯಕ್ರಮದಲ್ಲಿ ವಿಜೇತಾರದ ಮಹಿಳೆಯರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು.

ಕಾವೇರಿ ಬಿರಾದಾರ ದೇವೀಂದ್ರಪ್ಪ ಎನ್. ಅವರು ಉದ್ಘಾಟನೆ ನೆರವೇರಿಸಿದರು. ನ್ಯಾಯಾಧೀಶರಾದ ಎಂ.ಜಿ. ಶಿವಳ್ಳಿ, ಎನ್.ಎಂ. ರಮೇಶ, ಮಹಮ್ಮದ ಅನ್ವರ ಹುಸೇನ ಮೊಗಲಾನಿ, ಆಕರ್ಷ ಎಂ., ಬಿಪಿನ ಎಚ್.ಎಂ., ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್.ಸಿ. ಸಿದ್ದನಗೌಡರ ಇತರರು ಇದ್ದರು.