ಸಾರಾಂಶ
ಗಣಿಭಾದಿತ ಪ್ರದೇಶಗಳ ಅಭಿವೃದ್ಧಿಗೆಂದು ಮೀಸಲಿಟ್ಟಿರುವ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಅರ್ಥಿಕ ಅಭಿವೃದ್ದಿಗೆ ಬಳಸುವಂತೆ ಸರಕಾರದ ಮೇಲೆ ನಿಗಾವಹಿಸುವುದು, ಹೊಸ ಗಣಿಗಾರಿಕೆಗೆ ಅನುಮತಿ ನೀಡದಂತೆ ಸರಕಾರದ ಮೇಲೆ ಒತ್ತಡ ತರುವುದು ಹಾಗೂ ಸೆಸ್ ಹಣ ಅನ್ಯ ಉದ್ದೇಶಗಳಿಗೆ ಬಳಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಜಾಗೃತಿ ಮೂಡಿಸಲು ಆಗಸ್ಟ್ 16 ರಂದು ಬಳ್ಳಾರಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜನಾಂದೋಲನ ಮಹಾಮೈತ್ರಿಯ ಎಸ್.ಆರ್.ಹಿರೇಮಠ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ತುಮಕೂರು
ಗಣಿಭಾದಿತ ಪ್ರದೇಶಗಳ ಅಭಿವೃದ್ಧಿಗೆಂದು ಮೀಸಲಿಟ್ಟಿರುವ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಅರ್ಥಿಕ ಅಭಿವೃದ್ದಿಗೆ ಬಳಸುವಂತೆ ಸರಕಾರದ ಮೇಲೆ ನಿಗಾವಹಿಸುವುದು, ಹೊಸ ಗಣಿಗಾರಿಕೆಗೆ ಅನುಮತಿ ನೀಡದಂತೆ ಸರಕಾರದ ಮೇಲೆ ಒತ್ತಡ ತರುವುದು ಹಾಗೂ ಸೆಸ್ ಹಣ ಅನ್ಯ ಉದ್ದೇಶಗಳಿಗೆ ಬಳಕೆಯಾಗುವುದನ್ನು ತಡೆಯುವ ಉದ್ದೇಶದಿಂದ ಜಾಗೃತಿ ಮೂಡಿಸಲು ಆಗಸ್ಟ್ 16 ರಂದು ಬಳ್ಳಾರಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜನಾಂದೋಲನ ಮಹಾಮೈತ್ರಿಯ ಎಸ್.ಆರ್.ಹಿರೇಮಠ್ ತಿಳಿಸಿದ್ದಾರೆ.ನಗರದ ವಿಜ್ಞಾನ ಕೇಂದ್ರದಲ್ಲಿ ಜನಾಂದೋಲನ ಮಹಾಮೈತ್ರಿ ವತಿಯಿಂದ ಆಗಸ್ಟ್ 16 ರಂದು ಹಮ್ಮಿಕೊಂಡಿರುವ ಗಣಿ ಭಾದಿತ ಪ್ರದೇಶಗಳ ಪುನಶ್ಚೇತನ ಸಮಾಲೋಚನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಬಳ್ಳಾರಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಗಾಲಿ ಜನಾರ್ಧನ್ ರೆಡ್ಡಿ ನೇತೃತ್ವದಲ್ಲಿ ನಡೆದ ಎಗ್ಗಿಲ್ಲದ ಗಣಿಗಾರಿಕೆಯಿಂದ ತೊಂದರೆಗೆ ಒಳಗಾದ ಜನರು ಹೋರಾಟದ ಫಲವಾಗಿ 2011 ರಲ್ಲಿ ಸುಪ್ರಿಂಕೋರ್ಟು ನೀಡಿದ ತೀರ್ಪಿನ ಅನ್ವಯ ಜೈಲು ಶಿಕ್ಷೆ ಅನುಭವಿಸಿದ್ದಲ್ಲದೆ, ದಂಡವನ್ನು ಕಟ್ಟಬೇಕಾಯಿತು. ಇವೆಲ್ಲವೂ ಸಾಧ್ಯವಾಗಿದ್ದು, ರೈತರು, ಕಾರ್ಮಿಕರು, ಪರಿಸರವಾದಿಗಳು, ಹೋರಾಟಗಾರರ ಐಕ್ಯ ಹೋರಾಟದಿಂದ. ಹಾಗಾಗಿ ಈ ಹೋರಾಟವನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಆ.16ರ ಸಮಾವೇಶದಲ್ಲಿ ಹೆಚ್ಚು ಯುವಜನರು ಪಾಲ್ಗೊಳ್ಳುವಂತಾಗಬೇಕು ಎಂದರು.ಗಣಿ ಭಾದಿತ ಪ್ರದೇಶಗಳ ಅಭಿವೃದ್ಧಿ ನಿಗಮದಲ್ಲಿ ಸುಮಾರು 30 ಸಾವಿರ ಕೋಟಿ ಹಣವಿದೆ. ಇದನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಕೇಂದ್ರದ ಕೈಗಾರಿಕಾ ಮಂತ್ರಿಗಳು ಸೇರಿದಂತೆ ಹಲವು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಇದಕ್ಕೆ ಸರ್ವೋಚ್ಛ ನ್ಯಾಯಾಲಯ ಅವಕಾಶ ಮಾಡಿಕೊಟ್ಟಿಲ್ಲ. ಆ ಪ್ರದೇಶಗಳ ಜನರ ಶೈಕ್ಷಣಿಕ ,ಆರೋಗ್ಯ ಮತ್ತು ಆದಾಯ ವೃದ್ದಿಗೆ ಈ ಹಣ ಸದುಪಯೋಗವಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಿದೆ. ಇಂತಹ ಸಮಾಲೋಚನಾ ಸಭೆಗಳ ಮೂಲಕ ಆ ಪ್ರದೇಶಗಳ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಹೋರಾಟಗಾರರಿಂದ ಮಾಹಿತಿ ಸಂಗ್ರಹಿಸಿ ನಿಗಮದ ಅಧ್ಯಕ್ಷರಿಗೆ ಸಲ್ಲಿಸಲಾಗುವುದು ಎಂದರು. ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ,ಪರಿಸರವಿದ್ದರೆ ನಾವು, ಗಣಿಯಿಂದಾಗಿ ಪರಿಸರದ ಮೇಲಾದ ದುಷ್ಪರಿಣಾಮದಿಂದ ಹವಾಮಾನ ವೈಪರಿತ್ಯ ಉಂಟಾಗಿ ಜನರು ವಿವಿಧ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಆಗಸ್ಟ್ ೧೬ ರಂದು ಬಳ್ಳಾರಿಯಲ್ಲಿ ನಡೆಯುವ ಸಮಾವೇಶದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ ಎಂದು ಕರೆ ನೀಡಿದರು.ಜನಾಂದೋಲನ ಮಹಾಮೈತ್ರಿಯ ಜಿಲ್ಲಾಧ್ಯಕ್ಷ ಪಂಡಿತ್ ಜವಾಹರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪರಿಸರವಾದಿ ಸಿ.ಯತಿರಾಜು, ಮಹಾ ಮೈತ್ರಿಯ ಕೆ.ವಿ.ಭಟ್ ಉಪಸ್ಥಿತರಿದ್ದರು. ಕೃಷಿ ವಿಜ್ಞಾನಿ ಡಾ.ಮಂಜುನಾಥ್, ರೈತರಾದ ರವೀಶ್, ಚಿಕ್ಕಬೋರೇಗೌಡ ಇತರರಿದ್ದರು.