ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುರಾಜ್ಯದ ಕಾಂಗ್ರೆಸ್ ಸರಕಾರ ಆಗಸ್ಟ್ 15ರೊಳಗೆ ಸುಪ್ರಿಂಕೋರ್ಟ್ ಆದೇಶದ ಅನ್ವಯ ಒಳಮೀಸಲಾತಿ ಜಾರಿಗೊಳಿಸದಿದ್ದರೆ, ಕಂಡ ಕಂಡಲ್ಲಿ ಸರಕಾರದ ಸಚಿವರು, ಶಾಸಕರಿಗೆ ಘೇರಾವ್ ಹಾಕುವುದರ ಜೊತೆಗೆ ಅಸಹಕಾರ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಮಾದಿಗ ಮುಖಂಡ ನಿವೃತ್ತ ಐಎಎಸ್ ಅಧಿಕಾರಿ ಅನಿಲ್‌ಕುಮಾರ್ ತಿಳಿಸಿದ್ದಾರೆ.ಮಾದಿಗ ಸಂಘಟನೆಗಳ ಒಕ್ಕೂಟದಿಂದ ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನಗರದ ಟೌನ್‌ಹಾಲ್ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ ವೇಳೆ ಮಾತನಾಡಿದರು.ಒಳಮೀಸಲಾತಿ ಜಾರಿಯ ಸಂಪೂರ್ಣ ಜವಾಬ್ದಾರಿಯನ್ನು ರಾಜ್ಯ ಸರಕಾರಕ್ಕೆ ನೀಡಿ ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿ ಇಂದಿಗೆ ಒಂದು ವರ್ಷ ಕಳೆದಿದೆ. ಆದರೆ ನಿಖರ ದತ್ತಾಂಶದ ಹೆಸರಿನಲ್ಲಿ ಕಾಂಗ್ರೆಸ್ ಸರಕಾರ ಮೀನಮೇಷ ಎಣಿಸುತ್ತಿದೆ. ಇದು ಮಾದಿಗ ವಿರೋಧಿ ಸರಕಾರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅಂತಿಮವಾಗಿ ಇಡೀ ಮಾದಿಗ ಸಮುದಾಯಕ್ಕೆ ಉಳಿದಿರುವ ಏಕೈಕ ಕೂಗೂ ಒಳಮೀಸಲಾತಿ ಜಾರಿ ಮಾಡಿ ಇಲ್ಲವೇ, ಕುರ್ಚಿ ಖಾಲಿ ಮಾಡಿ ಎಂಬುದಾಗಿದೆ ಎಂದರು.ಚಿತ್ರದುರ್ಗದಲ್ಲಿ ನಡೆದ ಐಕ್ಯ ಸಮಾವೇಶ ಹಾಗೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿ ಮಾಡಿಯೇ ತೀರುತ್ತೇವೆ ಎಂದು ಹೇಳಿದ ಕಾಂಗ್ರೆಸ್ ಸರಕಾರ ಸಂವಿಧಾನ ತಿದ್ದುಪಡಿಯ ನೆಪವೊಡ್ಡಿ ಕೆಲ ಸಮಯ ವ್ಯರ್ಥ ಮಾಡಿದರೆ, ಸುಪ್ರಿಂಕೋರ್ಟಿನ ತೀರ್ಪಿನ ನಂತರವೂ ಅನಗತ್ಯ ವಿಳಂಬ ಮಾಡುತ್ತಿದೆ. ನ್ಯಾ.ನಾಗಮೋಹನ್‌ದಾಸ್ ಆಯೋಗಕ್ಕೆ ಸರಿಯಾದ ಮಾಹಿತಿ ದೊರೆಯದಂತೆ ಒಳಮೀಸಲಾತಿ ವಿರೋಧಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೋಡಿಕೊಳ್ಳುತ್ತಿದ್ದಾರೆ. ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿದ್ದ ಡಾ.ಜಿ.ಪರಮೇಶ್ವರ ಸರಕಾರ ಅಧಿಕಾರಕ್ಕೆ ಬಂದ ಎರಡುವರೆ ವರ್ಷದ ನಂತರವೂ ಈ ಕುರಿತು ಚಕಾರ ಎತ್ತುತ್ತಿಲ್ಲ. ಮಾದಿಗರ ಋಣ ನಿಮ್ಮ ಮೇಲಿದೆ ಎಂಬ ಎಚ್ಚರಿಕೆಯನ್ನು ನೀಡುತ್ತೇವೆ ಎಂದರು.ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ರಾಜ್ಯ ಸರಕಾರ ಒಳಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವುದು ಪರಿಶಿಷ್ಟ ಜಾತಿಯವರಲ್ಲಿ ಆತಂಕ ಸೃಷ್ಟಿಯಾಗಿದೆ. ಸಾವಿರಾರು ಯುವಜನರು ಉದ್ಯೋಗಕ್ಕಾಗಿ ಕಾಯುತಿದ್ದಾರೆ. ಒಳಮೀಸಲಾತಿ ಜಾರಿಯ ಒಂದೊಂದು ದಿನದ ವಿಳಂಬವೂ ಪರಿಶಿಷ್ಟ ಜಾತಿಯವರು ಆಯುಷು ಕಳೆದುಕೊಳ್ಳುವಂತಾಗಿದೆ ಎಂದರು.ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಮಂಡಳಿಯ ನೇಮಕಾತಿಗಳಿಗಾಗಿ ಸುಮಾರು ಎರಡು ಲಕ್ಷ ಜನ ಒಳಮೀಸಲಾತಿಗಾಗಿ ಕಾಯುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಶಾಶ್ವತವಾಗಿ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ. ಇರುವವರೆಗಾದರೂ ನಾಲ್ಕು ಜನರಿಗೆ ಉಪಯೋಗವಾಗುವಂತೆ ಬಾಳಿ,ಜನರು ನಿಮ್ಮನ್ನು ನೆನಸಿಕೊಳ್ಳುತ್ತಾರೆ.ಜನರ ಶಾಪಕ್ಕೆ ಗುರಿಯಾಗಬೇಡಿ ಎಂದು ಗೃಹ ಸಚಿವರಿಗೆ ನೇರ ಎಚ್ಚರಿಕೆ ನೀಡಿದರು.ವೈದ್ಯರಾದ ಡಾ.ಲಕ್ಷ್ಮೀಕಾಂತ ಮಾತನಾಡಿ, ಒಳಮೀಸಲಾತಿ ಬಗ್ಗೆ ಕಾಂಗ್ರೆಸ್ ಪಕ್ಷದ ನಾಟಕ ಬಯಲಾಗಿದೆ. ಅಸ್ಪೃಷ್ಯರ ಬಳಿ ಒಂದು ರೀತಿ, ಸ್ಪರ್ಷರ ಬಳಿ ಮತ್ತೊಂದು ರೀತಿ ಮಾತನಾಡುವ ಮೂಲಕ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಈ ಇಬ್ಬಂದಿತನ ಹೆಚ್ಚು ದಿನ ನಡೆಯುವುದಿಲ್ಲ. ಕೂಡಲೇ ಒಳಮೀಸಲಾತಿ ಜಾರಿಗೆ ತನ್ನಿ ಎಂದು ಆಗ್ರಹಿಸಿದರು.ಹೋರಾಟಗಾರರಾದ ರಾಜಸಿಂಹ,ಪಿ.ಎನ್.ರಾಮಯ್ಯ, ನರಸಿಂಹಮೂರ್ತಿ,ರಮೇಶ್,ದಾಡಿ ವೆಂಕಟೇಶ್, ಹೊಸಕೋಟೆ ನಟರಾಜು, ಬಿ.ಜಿ.ಸಾಗರ್, ಸೋರೆಕುಂಟೆಯೋಗೀಶ್,ಸಣ್ಣಭೂತಣ್ಣ, ಕೇಬಲ್ ರಘು, ಟಿ.ಡಿ.ಮೂರ್ತಿ,ವಕೀಲ ರಂಗಧಾಮಯ್ಯ ಸೇರಿದಂತೆ ನೂರಾರುಜನರು ಪಾಲ್ಗೊಂಡಿದ್ದರು,