ಟಿಕೆಟ್ ಸಿಗುವ ವಿಶ್ವಾಸ: ಕೊಪ್ಪಳ ಸಂಸದ ಸಂಗಣ್ಣ ಕರಡಿ

| Published : Mar 08 2024, 01:48 AM IST

ಸಾರಾಂಶ

ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ; ರಾಜ್ಯದ ಪ್ರಥಮ ಪಟ್ಟಿಯಲ್ಲಿಯೇ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ.

ಕೊಪ್ಪಳ: ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ; ರಾಜ್ಯದ ಪ್ರಥಮ ಪಟ್ಟಿಯಲ್ಲಿಯೇ ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ಘೋಷಣೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಟಿಕೆಟ್ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಟಿಕೆಟ್ ಆಕಾಂಕ್ಷಿಗಳು ಅನೇಕರು ಇದ್ದಾರೆ. ಪೈಪೋಟಿ ಇರುವುದೂ ಸಹಜ. ಆದರೆ, ಪಕ್ಷ ನನಗೆ ಟಿಕೆಟ್ ನೀಡುತ್ತದೆ ಎನ್ನುವ ವಿಶ್ವಾಸವಂತೂ ಇದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತೇನೆ. ಟಿಕೆಟ್ ಘೋಷಣೆ ಬೇಗನೇ ಆಗಬೇಕು ಎನ್ನುವುದು ನಮ್ಮ ಬಯಕೆಯೂ ಆಗಿದೆ. ಆದರೆ, ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಟಿಕೆಟ್ ಹೊಂದಾಣಿಕೆಗೆ ಮಾತುಕತೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಮೊದಲ ಪಟ್ಟಿಯಲ್ಲಿ ಕರ್ನಾಟಕದ ಪಟ್ಟಿ ಬಿಡುಗಡೆಯಾಗಿಲ್ಲ. ಇದೆಲ್ಲವನ್ನು ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ನೋಡಿಕೊಳ್ಳುತ್ತಾರೆ ಎಂದರು.

ಲೋಕಸಭಾ ಚುನಾವಣೆಗೂ ಮತ್ತು ವಿಧಾನಸಭಾ ಚುನಾವಣೆಗೂ ವ್ಯತ್ಯಾಸವಿದೆ. ಕೆಲವೊಂದು ವಿಷಯಗಳ ಆಧಾರದಲ್ಲಿ ಚುನಾವಣೆ ನಡೆಯುವುದರಿಂದ ವಿಧಾನಸಭಾ ಚುನಾವಣೆಗೆ ಹೋಲಿಕೆ ಮಾಡಲು ಆಗುವುದಿಲ್ಲ. ಕಳೆದ ಬಾರಿಯೂ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೇವಲ ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರು ಇದ್ದರು. ಅದು ಕುಷ್ಟಗಿಯ ದೊಡ್ಡನಗೌಡ ಪಾಟೀಲರು. ಈ ಬಾರಿಯೂ ಅವರೊಬ್ಬರೇ ಇದ್ದಾರೆ. ಹೀಗಾಗಿ, ಈ ಬಾರಿ ಕೇವಲ ಒಬ್ಬರೇ ಶಾಸಕರು ಇದ್ದಾರೆ ಎನ್ನುವುದು ಸರಿಯಲ್ಲ ಎಂದರು.ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಪಕ್ಷಕ್ಕೆ ಬರುವ ವಿಚಾರ ನಮಗೆ ಗೊತ್ತಿಲ್ಲ. ಅದನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳುತ್ತದೆ. ನಮ್ಮನ್ನು ಕೇಳಿದಾಗ ಅವರು ಬಂದರೆ ಒಂದು ಶಕ್ತಿ ಎಂದಷ್ಟೇ ಹೇಳಿದ್ದೇವೆಯೇ ಹೊರತು ಅದರಲ್ಲಿ ನಾವು ಭಾಗಿಯಾಗಲು ಆಗುವುದಿಲ್ಲ ಎಂದರು.