ಸಾರಾಂಶ
ಗಂಗಾವತಿ : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತೆ ಇಬ್ಭಾಗವಾಗಿದ್ದು, ಪ್ರತ್ಯೇಕ ಸಭೆಗಳು ನಡೆಯುತ್ತಿರುವುದು ಇದಕ್ಕೆ ಪುಷ್ಟಿ ನೀಡಿದೆ. ಇದು ವರಿಷ್ಠರು, ಕಾರ್ಯಕರ್ತರಿಗೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ಎರಡು ವಿಧಾನಸಭೆ ಚುನಾವಣೆಯಿಂದ ಪ್ರಾರಂಭವಾದ ಕಾಂಗ್ರೆಸ್ ಮುಖಂಡರ ಭಿನ್ನಮತ ಈಗಲೂ ಮುಂದುವರಿದಿದೆ. ಗಂಗಾವತಿಯ ಕಾಂಗ್ರೆಸ್ ಮುಖಂಡರನ್ನು ಮುಖ್ಯಮಂತ್ರಿಗಳು ಕರೆಸಿ ಒಗ್ಗಟ್ಟಾಗಿ ಲೋಕಸಭೆ ಅಭ್ಯರ್ಥಿ ಪರ ಪ್ರಚಾರ ಕೈಗೊಂಡು ಗೆಲ್ಲಿಸಿ ಎಂಬ ಮಾತಿಗೆ ಬೆಲೆ ನೀಡಿಲ್ಲ. ಇದಕ್ಕೆ ಪ್ರತ್ಯೇಕವಾಗಿ ನಡೆಯುತ್ತಿರುವ ಕಾಂಗ್ರೆಸ್ ಸಭೆಗಳು ಸಾಕ್ಷಿಯಾಗಿವೆ.
ಪ್ರತ್ಯೇಕ ಸಭೆಗಳು:
ಒಂದು ವಾರದ ಹಿಂದೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಮ್ಮ ನಿವಾಸದಲ್ಲಿ ಸಭೆ ಕರೆದಿದ್ದರು. ಈಗ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಏ. 8ರಂದು ತಮ್ಮ ನಿವಾಸದಲ್ಲಿ ಕಾಂಗ್ರೆಸ್ ಸಭೆ ಕರೆದಿದ್ದಾರೆ.
ಅನ್ಸಾರಿ ನಡೆಸಿದ ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ, ಶಾಸಕ ರಾಘವೇಂದ್ರ ಹಿಟ್ನಾಳ, ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಭಾಗವಹಿಸಿದ್ದರು. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಸೇರಿದಂತೆ ಕೆಲವು ಮುಖಂಡರು ಗೈರಾಗಿದ್ದರು.
ಆದರೆ ಸಭೆಯ ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ನಿವಾಸಕ್ಕೆ ತೆರಳಿದ್ದರು.
ಮುಖಂಡರ ನಡೆ ಏನು?:
ನಗರದಲ್ಲಿ ಪ್ರತ್ಯೇಕವಾಗಿ ನಡೆಯುತ್ತಿರುವ ಕಾಂಗ್ರೆಸ್ ಸಭೆಗಳಲ್ಲಿ ಭಾಗವಹಿಸುವ ಮುಖಂಡರ ನಡೆ ಏನೆಂಬ ಪ್ರಶ್ನೆ ಉದ್ಭವಿಸಿದೆ. ಪ್ರತ್ಯೇಕವಾಗಿ ಸಭೆ ನಡೆಸುವ ಪೂರ್ವದಲ್ಲಿ ಕಾಂಗ್ರೆಸ್ ವರಿಷ್ಠರು ಭಿನ್ನಮತ ಹೊಂದಿರುವ ಮುಖಂಡರನ್ನು ಒಂದೇ ವೇದಿಕೆಗೆ ಕರೆಸಬೇಕಿತ್ತು. ಈಗ ಮುಖಂಡರ ನಡೆಯಿಂದ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದ್ದು, ಸಭೆಗಳಲ್ಲಿ ಭಾಗವಹಿಸುವ ಕುರಿತು ವ್ಯಾಪಕ ಚರ್ಚೆಯಾಗುತ್ತಿದೆ. ಅಲ್ಲದೇ ಯಾವ್ಯಾವ ಮುಖಂಡರು, ಯಾವ್ಯಾವ ಸಭೆಗಳಿಗೆ ಭಾಗವಹಿಸುತ್ತಾರೆ ಎನ್ನುವ ಪ್ರಶ್ನೆಯೂ ಉಂಟಾಗಿದೆ. ಏ. 8ರಂದು ಕರೆದಿರುವ ಸಭೆಗೆ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೋಗಬಾರದೆಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಂದೇಶ ನೀಡಿದ್ದಾರೆ.
ಒಟ್ಟಿನಲ್ಲಿ ಗಂಗಾವತಿಯಲ್ಲಿ ಕಾಂಗ್ರೆಸ್ ಮತ್ತೆ ಇಬ್ಭಾಗವಾಗಿದ್ದು, ಇದು ಲೋಕಸಭಾ ಚುನಾವಣೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಕಾಂಗ್ರೆಸ್ ಸಭೆಗೆ ಹೋಗದಂತೆ ಅನ್ಸಾರಿ ಆಡಿಯೋ ಸಂದೇಶ:
ನಗರದಲ್ಲಿ ಏ. 8ರಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕರೆದಿರುವ ಸಭೆಗೆ ಯಾರೂ ಹೋಗಬಾರದೆಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಕಾರ್ಯಕರ್ತರಿಗೆ ಆಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ಹೆಸರಿನಲ್ಲಿ 8ರಂದು ಸಭೆ ಕರೆದಿದ್ದಾರೆ. ಅವರೆಲ್ಲ ಕೆಆರ್‌ಪಿ ಪಕ್ಷದವರು. ಅವರ್‍ಯಾರೂ ಕಾಂಗ್ರೆಸ್‌ಗೆ ದುಡಿದವರಲ್ಲ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಕೆಲವರು ಕೆಆರ್‌ಪಿ ಪಕ್ಷದೊಂದಿಗೆ ಡೀಲ್ ಮಾಡಿಕೊಂಡಿದ್ದರು. ಈಗ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ದರಿಂದ ಅವರು ಅತಂತ್ರರಾಗಿದ್ದು, ಅವರಿಗೆ ಈಗ ಕಾಂಗ್ರೆಸ್ ಅಗತ್ಯವಾಗಿದೆ ಎಂದಿದ್ದಾರೆ.
ನನಗೆ ಮತ್ತು ಕಾಂಗ್ರೆಸ್‌ಗೆ ವಂಚನೆ ಮಾಡಿದ್ದಾರೆ. ಈಗ ಬ್ಲಾಕ್ ಘಟಕದ ಅಧ್ಯಕ್ಷರೆಂದು ಹೇಳಿಕೊಂಡು ಸಭೆ ಕರೆದಿದ್ದಾರೆ. ಹಾಗಾಗಿ ಅವರು ಕರೆದಿರುವ ಸಭೆಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೋಗಬಾರದೆಂದು ಇಕ್ಬಾಲ್ ಅನ್ಸಾರಿ ಆಡಿಯೋದಲ್ಲಿ ಮನವಿ ಮಾಡಿದ್ದಾರೆ.