ಕನ್ನಡಪ್ರಭ ವಾರ್ತೆ ಹೊನ್ನಾಳಿ
ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲುಂಟಾದ ಕೂಡಲೇ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳ ಮುಖಂಡರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದು, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಡಿದ ಅವಮಾನ ಅಲ್ಲ. ಬದಲಿಗೆ ಭಾರತ ದೇಶದ ಸುಮಾರು 75 ಕೋಟಿ ನಾರಿಶಕ್ತಿಗೆ ಮಾಡಿದ ಅವಮಾನ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಾಂಗ್ರೆಸ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.ತಮ್ಮ ಹೊನ್ನಾಳಿಯ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸತ್ತಿನಲ್ಲಿ ಮಸೂದೆ ಜಾರಿಯಾಗದೇ ವಿಫಲವಾಗಿದೆ. ಇದು ಮಹಿಳಾ ಸಬಲೀಕರಣದ ಕನಸುಗಳಿಗೆ ಬಿದ್ದ ಭಾರಿ ಹೊಡೆತವಾಗಿದೆ. ಸಂಸತ್ತಿನಲ್ಲಿ ಮಸೂದೆ ಬಿದ್ದ ಕೂಡಲೇ ಕಾಂಗ್ರೆಸ್ ನಾಯಕರು ಚಪ್ಪಾಳೆ ತಟ್ಟಿ ಕೆಟ್ಟ ವರ್ತನೆ ತೋರಿದ್ದರಿಂದ ಮಹಿಳೆಯರ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಂತಾಗಿದೆ. ಇದರಿಂದ ಮಹಿಳೆಯರ ಹಕ್ಕುಗಳನ್ನು ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ಕಸಿದುಕೊಂಡಂತಾಗಿದೆ. ಕೂಡಲೇ ಕಾಂಗ್ರೆಸ್ ಹಾಗೂ ಇತರ ಮಿತ್ರಪಕ್ಷಗಳು ಬೇಷರತ್ತಾಗಿ ಮಹಿಳೆಯರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
12ನೇ ಶತಮಾಣದಲ್ಲಿ ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರೂ ಮಹಿಳೆಯರಿಗೆ ಮೀಸಲಾತಿ ನೀಡಿದರೆ ಸೌಟು ಹಿಡಿಯುವ ಕೈಯಲ್ಲಿ ದೇಶದ ಆಡಳಿತ ನಡೆಸುವ ಅವಕಾಶವೂ ಸಿಕ್ಕಂತಾಗುತ್ತದೆ, ಆದ್ದರಿಂದ ಎಲ್ಲ ರಂಗದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷ ಯಾರ ಮಾತಿಗೂ ಮನ್ನಣೆ ನೀಡದೇ ಮಹಿಳೆಯರ ಹಕ್ಕನ್ನು ಕಸಿದುಕೊಂಡಿದೆ ಎಂದು ಟೀಕಿಸಿದರು.ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಸ್ವತಃ ಮಹಿಳೆಯರಾಗಿದ್ದರೂ ಅವರು ಕೂಡ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡದೇ ಇರುವುದು ಅತ್ಯಂತ ದುರ್ದೈವದ ಸಂಗತಿ ಎಂದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಡಳಿತಾವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯಿತಿ, ತಾಲೂಕು ಮತ್ತು ಗಾಮ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಮೀಸಲಾತಿ ತರುವ ಮೂಲಕ ಅವರು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ್ದರು ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಅರಕೆರೆ ನಾಗರಾಜ್, ನಿಕಟಪೂರ್ವ ಅಧ್ಯಕ್ಷ ಸುರೇಶ್ ಜೆ.ಕೆ. ಮುಖಂಡರಾದ ಸಿ.ಆರ್. ಶಿವಾನಂದ, ಮಂಜುನಾಥ್ ನೆಲಹೊನ್ನೆ, ಎಸ್.ಎಸ್.ಬೀರಪ್ಪ, ಮಾರುತಿ ನಾಯ್ಕ್, ಕರಿಬಸವಯ್ಯ ರೆಡ್ಡಿ, ಮಹೇಶ್ ಹುಡೇದ್, ಕೋಟೆಹಾಳ್ ಮಲ್ಲೇಶ, ಪಲ್ಲವಿ ರಾಜು ಇತರರು ಇದ್ದರು.
ಕಾಂಗ್ರೆಸ್ ಸರ್ಕಾರ ಮಹಿಳೆಯವರಿಗೆ ಕೇವಲ ಗೃಹಲಕ್ಷ್ಮೀ ಯೋಜನೆಯ ₹2000 ಉಚಿತ ಪ್ರಯಾಣ ಯೋಜನೆ ಜಾರಿ ಮಾಡಿದ ತಕ್ಷಣ ಮಹಿಳಾ ಸಮುದಾಯದ ಉದ್ಧಾರ ಅಥವಾ ಸಬಲೀಕರಣ ಆಗುವುದಿಲ್ಲ. ಇದನ್ನು ದೇಶದ ಮತ್ತು ನಾಡಿನ ಎಲ್ಲ ಮಹಿಳೆಯವರು ಅರ್ಥ ಮಾಡಿಕೊಂಡು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅನ್ನು ಸಾರಸಗಟಾಗಿ ಧಿಕ್ಕರಿಸಬೇಕು.ಎಂ.ಪಿ.ರೇಣುಕಾಚಾರ್ಯ ಬಿಜೆಪಿ ಮಾಜಿ ಸಚಿವ.