ಸಿಎಂ ಸಿದ್ದರಾಮಯ್ಯನವರು ಈಗ ಕಾಂಪ್ರಮೈಸ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಕಾಂಪ್ರಮೈಸ್ ಪಾಲಿಟಿಕ್ಸ್ ಈಗ ಅನಿವಾರ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು/ಚಾಮರಾಜನಗರ
ಸಿಎಂ ಸಿದ್ದರಾಮಯ್ಯನವರು ಈಗ ಕಾಂಪ್ರಮೈಸ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ. ಕಾಂಪ್ರಮೈಸ್ ಪಾಲಿಟಿಕ್ಸ್ ಈಗ ಅನಿವಾರ್ಯವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಪಾದಿಸಿದ್ದಾರೆ.ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲ ಟೈಮ್‌ನಲ್ಲೂ ಒಂದೇ ರೀತಿ ಬಿಗಿಯಾಗಿ ರಾಜಕಾರಣ ಮಾಡಲು ಆಗಲ್ಲ. ಕಾಂಪ್ರಮೈಸ್ ಅನಿವಾರ್ಯ ಎಂದರು.
ಬೆಂಬಲಿಗರನ್ನು ಕಾಪಾಡುವ ವಿಚಾರದಲ್ಲಿ ಸಿದ್ದರಾಮಯ್ಯ ವೀಕ್ ಆಗಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ನನಗೆ ಹಾಗೆ ಅನ್ನಿಸುವುದಿಲ್ಲ, ರಾಜಕೀಯದಲ್ಲಿ ಕೆಲವೊಮ್ಮೆ ವೀಕ್ ಆಗಿರಬೇಕಾಗುತ್ತದೆ, ಮತ್ತೆ ಕೆಲವೊಮ್ಮೆ ಸ್ಟ್ರಾಂಗ್ ಕೂಡ ಆಗಬೇಕಾಗುತ್ತದೆ. ಎಲ್ಲವೂ ಸಮಯ-ಸಂದರ್ಭಕ್ಕೆ ತಕ್ಕಂತೆ ಇರಬೇಕು ಎಂದರು.ಜಬ್ಬಾರ್ ಅಮಾನತು ಕುರಿತು ಪ್ರತಿಕ್ರಿಯಿಸಿ, ನಮ್ಮಲ್ಲಿ ಬಹಳಷ್ಟು ಜನ ಸಸ್ಪೆಂಡ್ ಆದವರು ಮತ್ತೆ ವಾಪಸ್ ಬಂದಿದ್ದಾರೆ. ಜಬ್ಬಾರ್ ಕೂಡ ವಾಪಸ್ ಬರುತ್ತಾರೆ ಎಂದು ಹೇಳುವ ಮೂಲಕ ವಿಧಾನಪರಿಷತ್ ಸದಸ್ಯ ಜಬ್ಬಾರ್ ಅಮಾನತು ತೆರುವಾಗುವ ಸುಳಿವು ನೀಡಿದರು.
ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತರು ಮುನಿಸಿಕೊಂಡಿರುವುದರ ಬಗ್ಗೆ ಮಾತನಾಡಿ, ಇದನ್ನು ಸರಿಪಡಿಸುತ್ತೇವೆ, ಇದು ರಾಜ್ಯದ ಸಮಸ್ಯೆಯಲ್ಲ, ದಾವಣಗೆರೆಯಲ್ಲಿ ಮಾತ್ರ ಆಗಿರುವುದು ಎಂದರು.ದಾವಣಗೆರೆ ಉಪ ಚುನಾವಣೆ ಸಂಬಂಧ ಮುಸ್ಲಿಂ ನಾಯಕರಿಗೆ ನೋಟಿಸ್ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಫಲಿತಾಂಶ ಬರುವವರೆಗೂ ಕಾಯಬೇಕು. ಅಷ್ಟರಲ್ಲೇ ನೋಟಿಸ್ ಕೊಡುವುದು, ಸಸ್ಪೆಂಡ್ ಮಾಡುವುದು ಸರಿಯಲ್ಲ. ಇದು ಮುಸ್ಲಿಂ ಮತಬ್ಯಾಂಕ್ ಮೇಲೆ ಪರಿಣಾಮ ಬೀರಲಿದೆ. ಮೊದಲು ಫಲಿತಾಂಶ ಬರಲಿ. ಯಾರದ್ದಾದರೂ ತಪ್ಪಾಗಿದ್ದರೆ ಆಮೇಲೆ ಕ್ರಮ ಕೈಗೊಳ್ಳೋಣ. ಈಗಲೇ ಈ ಕ್ರಮಗಳು ಸರಿಯಲ್ಲ ಎಂದು ಪಕ್ಷದ ನಾಯಕರಿಗೆ ಹೇಳಿದ್ದೇನೆ. ಯಾರ್ಯಾರು ಪಕ್ಷ ವಿರೋಧಿ ಚಟುವಟಿಕೆ ಮಾಡಿದರು, ಯಾವ ರೀತಿ ಮಾಡಿದರು ಎಂಬ ಬಗ್ಗೆ ಚರ್ಚೆ ಮಾಡುವ ಸಮಯ ಇದಲ್ಲ. ಮೊದಲು ಫಲಿತಾಂಶ ಬರಲಿ ಎಂದರು.
ಸಂಪುಟ ಪುನಾರಚನೆ ಕುರಿತು ಪ್ರತಿಕ್ರಿಯಿಸಿ, ಹೈಕಮಾಂಡ್ ಒಪ್ಪಿದ ಬಳಿಕವೇ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಆಗಲಿದೆ. ಆದರೆ, ಯಾವಾಗ ಎಂಬುದು ಗೊತ್ತಿಲ್ಲ. ಹೈಕಮಾಂಡ್ ಸಿಗ್ನಲ್ ಕೊಟ್ಟ ಬಳಿಕ ಸೀನಿಯರ್-ಜೂನಿಯರ್ ಮಿಕ್ಸ್ ಆಗಲಿದೆ ಎಂದು ಹೇಳಿದರು.