ಕೇಂದ್ರ ಸರ್ಕಾರ ಕಾಂಗ್ರೆಸ್‌ನವರನ್ನು ಗುರಿಯಾಗಿಸಿಕೊಂಡೇ ಇ.ಡಿ.ದಾಳಿ ಮಾಡುತ್ತಿದೆ. ಬಿಜೆಪಿಯವರ ಮೇಲೆ ದಾಳಿ ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ ಸಿದ್ದರಾಮಯ್ಯ, ಹೆಲಿಪ್ಯಾಡ್‌ನಲ್ಲಿ   ಮಾತನಾಡಿದರು.

ಚಾಮರಾಜನಗರ/ ಗುಂಡ್ಲುಪೇಟೆ : ಕೇಂದ್ರ ಸರ್ಕಾರ ಕಾಂಗ್ರೆಸ್‌ನವರನ್ನು ಗುರಿಯಾಗಿಸಿಕೊಂಡೇ ಇ.ಡಿ.ದಾಳಿ ಮಾಡುತ್ತಿದೆ. ಬಿಜೆಪಿಯವರ ಮೇಲೆ ದಾಳಿ ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಮಂಗಳವಾರ ₹475 ಕೋಟಿ ವೆಚ್ಚದಲ್ಲಿ 110 ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯೂ ಸೇರಿದಂತೆ ಒಟ್ಟು ₹523 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ ಸಿದ್ದರಾಮಯ್ಯ, ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.

ನಲಪಾಡ್ ಮೇಲಿನ ಇ.ಡಿ.ದಾಳಿ ಕುರಿತು ಪ್ರತಿಕ್ರಿಯಿಸಿ, ಇ.ಡಿ.ದಾಳಿ ಮೂಲಕ ಕೇಂದ್ರ ಸರ್ಕಾರ ಕಾಂಗ್ರೆಸ್‌ ನಾಯಕರನ್ನು ಟಾರ್ಗೆಟ್‌ ಮಾಡುತ್ತಿದೆ ಎಂದು ಆರೋಪಿಸಿದರು. ಅಲ್ಪಸಂಖ್ಯಾತರನ್ನು ಕಾಂಗ್ರೆಸ್‌ ಕಡೆಗಣಿಸುತ್ತಿರುವ ಬಗ್ಗೆ ಅಲ್ಪಸಂಖ್ಯಾತರು ಹೈಕಮಾಂಡ್‌ಗೆ ಪತ್ರ ಬರೆದಿರುವ ಕುರಿತು ಮಾತನಾಡಿ, ದಾವಣಗೆರೆ ಕ್ಷೇತ್ರದ ಟಿಕೆಟ್‌ ಹಂಚಿಕೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುವಾಗ ಅಲ್ಪಸಂಖ್ಯಾತ ನಾಯಕರು ಉಪಸ್ಥಿತರಿದ್ದರು. ಅವರೆದುರೇ ತೀರ್ಮಾನವಾಗಿತ್ತು, ನಂತರ ಅವರು ವಿರೋಧ ಮಾಡಿದರು ಎಂದರು.ಮಹಿಳೆಯರಿಗೆ ಮೀಸಲಾತಿ ಅಗತ್ಯ:

ಬಳಿಕ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿಗಳು, ನಗರಸಭೆ, ನಗರಪಾಲಿಕೆಗಳಲ್ಲಿ ಶೇ.50ರಷ್ಟು ಮಹಿಳೆಯರಿದ್ದು, ಇದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ. ಪ್ರಸ್ತುತ, ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿ ಕಾಯ್ದೆಯ ಜೊತೆಗೆ ಡಿಲಿಮಿಟೇಷನ್ ಕಾಯ್ದೆ ತರಲು ಪ್ರಯತ್ನಿಸಿದ್ದರಿಂದ ವಿರೋಧವನ್ನು ವ್ಯಕ್ತಪಡಿಸಲಾಗಿದೆ. ಕಾಂಗ್ರೆಸ್ ಡಿಲಿಮಿಟೇಷನ್ ಕಾಯ್ದೆಯನ್ನು ವಿರೋಧಿಸಿದೆಯೇ ಹೊರತು ಮಹಿಳಾ ಮೀಸಲಾತಿಯನ್ನು ವಿರೋಧಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಮೂಢನಂಬಿಕೆಗಳಲ್ಲಿ ನನಗೆ ನಂಬಿಕೆಯಿಲ್ಲ: ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಕುರಿತು ಪ್ರತಿಕ್ರಿಯಿಸಿ, ಇದೊಂದು ಮೌಢ್ಯ. ಸಿಎಂ ಆದ ಮೇಲೆ ಚಾಮರಾಜನಗರಕ್ಕೆ ನಾನು ಸಾಕಷ್ಟು ಬಾರಿ ಭೇಟಿ ನೀಡುತ್ತಿದ್ದೇನೆ. ಮೂಢನಂಬಿಕೆಗಳಲ್ಲಿ ನನಗೆ ನಂಬಿಕೆಯಿಲ್ಲ. ಇಲ್ಲಿಗೆ ಬಂದರೆ ಕುರ್ಚಿ ಗಟ್ಟಿಯಾಗುತ್ತದೆ ಎಂದು ಪ್ರಾಸಂಗಿಕವಾಗಿ ಹೇಳಿದ್ದೇನೆ ಅಷ್ಟೆ ಎಂದರು.

ಮಹಿಳಾ ಮೀಸಲಾತಿ ಬಿಲ್ ಅನ್ನು ಕಾಂಗ್ರೆಸ್ ವಿರೋಧಿಸಿತು ಎಂದು ಬಿಜೆಪಿಯವರು ಸುಳ್ಳುಪ್ರಚಾರ ಮಾಡುತ್ತಿದ್ದಾರೆ. ಮಹಿಳಾ ಮೀಸಲಾತಿಯನ್ನು ವಿರೋಧಿಸಿದವರನ್ನು ಮಹಿಳೆಯರು ಕ್ಷಮಿಸುವುದಿಲ್ಲ ಎಂದು ಮೋದಿಯವರು ಹೇಳಿದ್ದಾರೆ. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ಸರ್ಕಾರ. 2023ರಲ್ಲಿಯೇ ಮಹಿಳಾ ಮೀಸಲಾತಿ ಕಾಯ್ದೆಯನ್ನು ತರಲಾಗಿದ್ದು, ಈ ಕಾಯ್ದೆಗೆ ವಿರೋಧಿಸದೇ ಸ್ವಾಗತಿಸಿದ್ದೆವು. ಆದರೆ, ಸಹಮತಿ ಸೂಚಿಸಲಾಗಿದ್ದ ಮಹಿಳಾ ಮೀಸಲಾತಿಯನ್ನು 2028ರವರೆಗೆ ಜಾರಿಗೆ ತರಲು ಸಾಧ್ಯವಿಲ್ಲವೆಂದು ಬಿಜೆಪಿಯವರೇ ಹೇಳಿದ್ದರು ಎಂದರು.

ಬಿಜೆಪಿಯವರೇ ನಿಜವಾದ ಮಹಿಳಾ ಮೀಸಲಾತಿ ವಿರೋಧಿಗಳು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನಕ್ಕೆ 73, 74ನೇ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ತಂದಿದ್ದು ಕಾಂಗ್ರೆಸ್ ಪಕ್ಷ. ಅದನ್ನು ರಾಜ್ಯಸಭೆಯಲ್ಲಿ ಕೆಡವಿದವರು ಎನ್‌ಡಿಎದವರು. ಈಗ ರಾಜಕೀಯಕ್ಕಾಗಿ ಕ್ಷೇತ್ರ ಮರುವಿಂಗಡನೆ ಸೇರಿಸಿ ಮಸೂದೆ ಮಂಡಿಸಿದ್ದಾರೆ. ನಮ್ಮದು ಕ್ಷೇತ್ರ ಮರು ವಿಂಗಡಣೆಗೆ ವಿರೋಧವೇ ಹೊರತು ಮಹಿಳಾ ಮೀಸಲಾತಿಗೆ ಅಲ್ಲ. ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದು, ಅವರಿಗೆ ನ್ಯಾಯಯುತವಾದ ಮೀಸಲಾತಿ ದೊರೆಯಬೇಕಿರುವುದು ಅತ್ಯಗತ್ಯ ಎಂದರು.

ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ:

ರಾಜ್ಯದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ವಿರೋಧಿಸಿದರು. ಆದರೆ, ಈಗ ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿಯವರು ಹಲವು ರಾಜ್ಯಗಳಲ್ಲಿ ಅನುಸರಿಸುತ್ತಿದ್ದಾರೆ. ಗ್ಯಾರಂಟಿಗಳನ್ನು ಜಾರಿಗೊಳಿಸಿದರೆ ಕರ್ನಾಟಕ ದಿವಾಳಿಯಾಗುತ್ತದೆ ಎಂದು ಪ್ರಧಾನಿ ಮೋದಿಯವರು ಟೀಕಿಸಿದ್ದರು. ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿಯನ್ನು ಸಾಧಿಸುತ್ತಿರುವುದಕ್ಕೆ ಇಂದು ಗುಂಡ್ಲುಪೇಟೆಯಲ್ಲಿ ನಡೆದಿರುವ ಈ ಕಾರ್ಯಕ್ರಮವೇ ಸಾಕ್ಷಿ ಎಂದರು. 

ಆಕ್ಸಿಜನ್ ದುರಂತ ಸಂತ್ರಸ್ತರಿಗೆ ನ್ಯಾಯ ಒದಗಿಸಿದ್ದೇವೆ:

ಕೊರೋನಾ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ ಆಕ್ಸಿಜನ್ ದುರಂತಕ್ಕೆ ನ್ಯಾಯ ಒದಗಿಸಿದ್ದೇವೆ. ಈ ಬಗ್ಗೆ ವಿಶೇಷ ತೀರ್ಮಾನ ತೆಗೆದುಕೊಂಡು 25 ಕುಟುಂಬಗಳಿಗೆ ಅದೇ ಆಸ್ಪತ್ರೆಯಲ್ಲೇ ಉದ್ಯೋಗ ಕಲ್ಪಿಸಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

2021ರ ಮೇ 2ರಂದು, ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ 36 ಮಂದಿ ಕೋವಿಡ್‌ ರೋಗಿಗಳು ಆಕ್ಸಿಜನ್‌ ಕೊರತೆಯಿಂದ ಮೃತಪಟ್ಟಿದ್ದರು. ಮೃತರ ಕುಟುಂಬ ವರ್ಗಕ್ಕೆ ಕಾಯಂ ಉದ್ಯೋಗ ನೀಡುವುದಾಗಿ ಭಾರತ್‌ ಜೋಡೋ ಯಾತ್ರೆ ವೇಳೆ ರಾಹುಲ್‌ ಗಾಂಧಿ ಅವರು ಭರವಸೆ ನೀಡಿದ್ದರು. ಅದರಂತೆ, ಗುಂಡ್ಲುಪೇಟೆ ಪಟ್ಟಣದ ಡಿ‌.ದೇವರಾಜ ಅರಸು ಕ್ರೀಡಾಂಗಣದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಆಕ್ಸಿಜನ್ ದುರಂತ ಸಂತ್ರಸ್ಥರಿಗೆ ಕಾಯಂ ಉದ್ಯೋಗ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು. 

ಸಂತ್ರಸ್ಥ ಕುಟುಂಬದ ನನ್ನ ಸಹೋದರಿಯರಿಗೆ ಉದ್ಯೋಗ ನೀಡಿದ್ದೇವೆ. ಇವತ್ತು ಸಂತ್ರಸ್ತರ ಕುಟುಂಬದವರ ಮುಖದಲ್ಲಿ ನಗು ಕಂಡು ನನ್ನ ಹೃದಯ ತುಂಬಿ ಬಂದಿದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ- ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ, ಅದೇ ರೀತಿ ಇಂದು ನಾವು ನಮ್ಮ ಕೈಯಿಂದ ನೇಮಕಾತಿ ಪತ್ರ ನೀಡಿದ್ದೇವೆ ಎಂದು ಹೇಳಿದರು.ಆಕ್ಸಿಜನ್ ದುರಂತದಲ್ಲಿ ನಡೆದ ಸಾವುಗಳು ಒಂದರ್ಥದಲ್ಲಿ ಕೊಲೆಗಳು‌. ಸಂತ್ರಸ್ಥ ಕುಟುಂಬಕ್ಕೆ ಕಾಯಂ ಉದ್ಯೋಗ ಕೊಡುವುದಾಗಿ ನಾವು ಮಾತು ಕೊಟ್ಟಿದ್ದೇವು‌‌. 

ಅದರಂತೆ, ಇಂದು ನೇಮಕಾತಿ ಪತ್ರವನ್ನು ವಿತರಣೆ ಮಾಡಿದ್ದೇವೆ ಎಂದರು. ಕೋವಿಡ್ ದುರಂತದಲ್ಲಿ ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ. ಎಲ್ಲರಿಗೂ ನ್ಯಾಯ ಒದಗಿಸಲು ಆಗದೇ ಇದ್ದರೂ ಜಿಲ್ಲೆಯ 25 ಕುಟುಂಬಗಳಿಗೆ ನ್ಯಾಯ ಒದಗಿಸಿರುವುದು ಆತ್ಮತೃಪ್ತಿ ತಂದಿದೆ. ಇಂದು ನನಗೆ ಸಂತೋಷದ ದಿನ. ಘಟನೆ ನಡೆದಾಗ ಸಿದ್ದರಾಮಯ್ಯನವರು ಮತ್ತು ನಾನು ಚಾಮರಾಜನಗರಕ್ಕೆ ಧಾವಿಸಿದ್ದೇವು, ಮಾಜಿ ಸಂಸದ ಧ್ರುವನಾರಾಯಣ, ಸಿ.ಪುಟ್ಟರಂಗಶೆಟ್ಟಿ, ಎ.ಆರ್‌. ಕೃಷ್ಣಮೂರ್ತಿ ಜೊತೆಗೂಡಿ ಸಂತ್ರಸ್ತರ ಮನವಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದೇವು.

 ಘಟನೆ ಸಂಭವಿಸಿದಾಗ ಅಂದಿನ ಆರೋಗ್ಯ ಸಚಿವರಾಗಿದ್ದ ಸುಧಾಕರ್‌ ಅವರು ಆಕ್ಸಿಜನ್ ದುರಂತದಲ್ಲಿ ಮೂರೇ ಮಂದಿ ಮೃತಪಟ್ಟಿರುವುದಾಗಿ ಹೇಳಿದ್ದರು. ಆದರೆ, ನಾವು ಪ್ರತಿಯೊಂದು ಸಂತ್ರಸ್ತರ ಮನೆಗೂ ಭೇಟಿ ನೀಡಿ ನ್ಯಾಯ ಕೊಡಿಸುವುದಾಗಿ ಮಾತು ಕೊಟ್ಟೆವು. ಅದರಂತೆ ಈಗ ನೇಮಕಾತಿ ಪತ್ರವನ್ನು ವಿತರಣೆ ಮಾಡಿದ್ದೇವೆ ಎಂದರು. 

ಗ್ಯಾರಂಟಿಯಿಂದ ಅನುಕೂಲ: 

ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಿಗೆ ಅನುಕೂಲವಾಗುತ್ತಿದೆ. ಎಲ್ಲ ಧಾರ್ಮಿಕ ಕ್ಷೇತ್ರಗಳಿಗೂ ಹೋಗುತ್ತಿದ್ದಾರೆ. ಅಲ್ಲದೇ ಅವರ ಖಾತೆಗೆ ₹2 ಸಾವಿರ ಹಣ ಹೋಗುತ್ತಿದೆ. ಉಚಿತವಾಗಿ ವಿದ್ಯುತ್ ಸಿಗುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಇತರ ರಾಜ್ಯಗಳು ಕಾಪಿ ಮಾಡುತ್ತಿವೆ. ಇದು ಕಾಂಗ್ರೆಸ್ ಪಕ್ಷದ ಇತಿಹಾಸವಾಗಿದೆ ಎಂದು ಹೇಳಿದರು.ಅಸ್ಸಾಂನಲ್ಲಿ ಸರ್ಕಾರ ₹1 ಸಾವಿರ ಹಣ ನೀಡುತ್ತಿದೆ, ನಾವೆಲ್ಲರೂ ಯಾವುದೇ ಭೇದ, ಭಾವ, ಜಾತಿ, ಪಕ್ಷ ನೋಡಿ ಹಣ ನೀಡುತ್ತಿಲ್ಲ. ಆದರೆ ಅಸ್ಸಾಂನಲ್ಲಿ ಕೇವಲ ಅವರ ಕಾರ್ಯಕರ್ತರಿಗೆ ಮಾತ್ರ ಹಣ ನೀಡುತ್ತಿದ್ದಾರೆ. ನಾನು ಅಸ್ಸಾಂಗೆ ಹೋದಾಗ, ನಮಗೆ ಅಧಿಕಾರ ನೀಡಿ ಎಲ್ಲರಿಗೂ ಹಣ ಕೊಡುತ್ತೇವೆ ಎಂದಿದ್ದೇನೆ ಎಂದರು.