ಸುಡು ಬೇಸಿಗೆಯಲ್ಲೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ವಾರಪೂರ್ತಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏ.22 ರಿಂದ 26ವರೆಗೆ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು : ಸುಡು ಬೇಸಿಗೆಯಲ್ಲೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ವಾರಪೂರ್ತಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏ.22 ರಿಂದ 26ವರೆಗೆ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ.
17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಏ.22ರಂದು ರಾಜ್ಯದ 17 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ನೀಡಿದೆ. ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಉತ್ತರ ಕನ್ನಡ ಕನ್ನಡ, ಬೆಳಗಾವಿ, ಉಡುಪಿ, ದಕ್ಷಿಣ ಕನ್ನಡ, ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಇದ್ದು ಗುಡುಗು ಸಹಿತ ಮಳೆಯಾಗಲಿದೆ. ಏ.23 ರಂದು ರಾಜ್ಯದ 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದ್ದು, ಬೆಳಗಾವಿ, ಗದಗ, ಹಾವೇರಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಿಗೆ ಗುಡುಗು ಸಹಿತ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮುಂದಿನ ನಾಲ್ಕು ದಿನ ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಂದೆರಡು ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ.
ರಾಜ್ಯದ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಂಗಳವಾರವೂ 40. ಡಿ.ಸೆ.ಉಷ್ಣಾಂಶ ದಾಟಿದೆ. ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗುತ್ತಿದೆ.
ಉಳಿದ ಕೆಲ ಪ್ರದೇಶಗಳಲ್ಲಿ ಬಿಸಿ ಮತ್ತು ತೇವಾಂಶದ ವಾತಾವರಣ ಇರಲಿದೆ. ಕೆಲ ಕಡೆಗಳಲ್ಲಿ ಒಣ ಹವೆ ಮುಂದುವರೆಯುವ ಸಾಧ್ಯತೆ ಇರಲಿದೆ. ಏ.22ರಂದು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಒಂದೆರಡು ಸ್ಥಳಗಳಲ್ಲಿ ಸಾಧಾರಣ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಒಣ ಹವೆ ಇರುವ ಸಾಧ್ಯತೆಯಿದೆ.
ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೆಳಗಾವಿ, ಬೀದರ್, ಧಾರವಾಡ ಮತ್ತು ಹಾವೇರಿಯಲ್ಲಿ ಏ.22ರಿಂದ ಏ.28ವರೆಗೆ ಗುಡುಗು, ಆಲಿಕಲ್ಲು ಸಹಿತ ವರ್ಷಧಾರೆಯಾಗಲಿದೆ. ಮೈಸೂರು, ಚಾಮರಾಜನಗರದಲ್ಲಿ ಮುಂದಿನ 3 ದಿನ, ವಿಜಯಪುರ, ಗದಗದಲ್ಲಿ ಮುಂದಿನ 2 ದಿನ ಮತ್ತು ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ಮಂಡ್ಯ, ಕಲಬುರಗಿಯಲ್ಲಿ ಏ.24ರಂದು ಸಾಧಾರಣ ಮಳೆಯಾಗಲಿದೆ. ಈ ವೇಳೆ ಕೆಲ ಪ್ರದೇಶಗಳಲ್ಲಿ ಗಾಳಿಯ ವೇಗ ಜಾಸ್ತಿ ಇರಲಿದೆ.ಈ ಹಿನ್ನೆಲೆಯಲ್ಲಿ ಕರಾವಳಿಯ ಬಹುತೇಕ ಜಿಲ್ಲೆಗಳು ಮತ್ತು ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮುಂದಿನ 5 ದಿನ ಶಾಖ ಅಲೆ (ಹೀಟ್‌ವೇವ್) ಮುಂದುವರಿಯಲಿದೆ. ಬೆಂಗಳೂರು ನಗರದಲ್ಲಿ ಮುಂದಿನ 2 ದಿನ ಶುಭ್ರ ವಾತಾವರಣ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 36 ಮತ್ತು 24 ಡಿ.ಸೆ. ದಾಖಲಾಗುವ ಸಂಭವ ಇದೆ. ಗರಿಷ್ಠ ತಾಪಮಾನದಲ್ಲಿ ವಾಡಿಕೆಗಿಂತ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ನಿನ್ನೆ 5 ಜಿಲ್ಲೆಗಳಲ್ಲಿ ಮಳೆ:
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಧಾರವಾಡ, ಹಾವೇರಿ, ಗದಗ, ರಾಯಚೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಬಿರುಗಾಳಿ, ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಆರಂಭಗೊಂಡ ಮಳೆ 1 ಗಂಟೆಗೂ ಹೆಚ್ಚು ಕಾಲ ಸುರಿಯಿತು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಸಂಜೆಯ ವೇಳೆ ಸುಮಾರು ಅರ್ಧ ಗಂಟೆ ಆಲಿಕಲ್ಲು ಮಳೆ ಸುರಿಯಿತು. ವಿಜಯನಗರ ಜಿಲ್ಲೆಯ ಕೂಡ್ಲಿಗಿ, ಹೂವಿನಹಡಗಲಿ, ಹರಪನಹಳ್ಳಿಗಳಲ್ಲಿಯೂ ಮಳೆಯಾಗಿದ್ದು, ಕೆಲವೆಡೆ ಬಾಳೆ ಬೆಳೆ ನಾಶವಾಗಿದೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಹಿರೇದಿನ್ನಿ ಗ್ರಾಮದಲ್ಲಿ ಸಿಡಿಲಿಗೆ ತೆಂಗಿನಮರವೊಂದು ಸುಟ್ಟು ಭಸ್ಮವಾಗಿದೆ.