ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರಿದಿದ್ದು, ಹಾವೇರಿ, ಹಾಸನ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕಲಬುರಗಿ, ವಿಜಯಪುರ ಸೇರಿ 9 ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದೆ.

ಹಾಸನ ಜಿಲ್ಲೆ ಆಲೂರು ತಾಲೂಕಿನ ಮಾದಿಹಳ್ಳಿಯಲ್ಲಿ ಸಿಡಿಲಿಗೆ ನೀಲಮ್ಮ (70) ಎಂಬುವರು ಮೃತಪಟ್ಟಿದ್ದಾರೆ. ಮರದ ಕೆಳಗೆ ನಿಂತಿದ್ದ ವೇಳೆ ಅವರಿಗೆ ಸಿಡಿಲು ಬಡಿಯಿತು. ವಿಜಯಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಜೆಯ ವೇಳೆ ಸುರಿದ ಮಳೆ ಜನರಿಗೆ ತಂಪನ್ನೆರೆಯಿತು. ಕೊಡಗಿನ ಎಮ್ಮೆಮಾಡು ವ್ಯಾಪ್ತಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು-ಸಿಡಿಲು ಸಹಿತ ಮಳೆ ಸುರಿಯಿತು.

ಕರಾವಳಿ ಭಾಗದಲ್ಲೂ ಮಳೆ ಸುರಿದಿದ್ದು, ಸೋಮವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು, ಗಾಳಿ ಸಹಿತ ಭಾರೀ ಮಳೆ ಸುರಿಯಿತು. ಉಜಿರೆ- ಕೊಕ್ಕಡ ರಸ್ತೆಯ ಉಜಿರೆಯ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಬೃಹತ್ ಗಾತ್ರದ ರೆಂಬೆಯೊಂದು ಮುರಿದುಬಿದ್ದಿದೆ. ಕಾರಿಗೆ ಹಾನಿಯಾಗಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತರೊಬ್ಬರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಸುಳ್ಯ ತಾಲೂಕಿನ ಕೆಲವೆಡೆ ಮರಗಳು ಮುರಿದು ಬಿದ್ದು, ವಿದ್ಯುತ್ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಶೃಂಗೇರಿ, ಮೂಡಿಗೆರೆ, ಕಳಸ ಸೇರಿ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಸುಮಾರು 1 ಗಂಟೆ ಕಾಲ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು, ಗಾಳಿ, ಮಳೆಯ ರಭಸಕ್ಕೆ ಹಲವು ಕಡೆ ಮರಗಳು ಧರೆಗುರುಳಿವೆ. ಕಟ್ಟಡಗಳ ಮೇಲೆ ಅಳವಡಿಕೆ ಮಾಡಲಾಗಿದ್ದ ತಗಡಿನ ಶೀಟ್‌ಗಳು ಹಾರಿ ಹೋಗಿವೆ. ಕಲಬುರಗಿ ಜಿಲ್ಲೆ ಆಳಂದ ಸಮೀಪದ ಹಿರೋಳಿಯಲ್ಲಿ ಸಿಡಿಲಿಗೆ ಎರಡು ಎತ್ತುಗಳು ಸಾವನ್ನಪ್ಪಿವೆ. ಹಾವೇರಿ, ರಾಣಿಬೆನ್ನೂರು ಸೇರಿ ಹಾವೇರಿ ಜಿಲ್ಲೆಯ ಹಲವೆಡೆಯೂ ಮಳೆಯಾಗಿದೆ.