ಗ್ಯಾರಂಟಿ ಯೋಜನೆ ಕುರಿತ ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ಖಂಡನೆ

| Published : Apr 16 2024, 01:02 AM IST

ಗ್ಯಾರಂಟಿ ಯೋಜನೆ ಕುರಿತ ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಸ್ವಾಭಿಮಾನಿ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಹಾದಿ ತಪ್ಪುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಖಂಡನೆ ವ್ಯಕ್ತ ಪಡಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಸ್ವಾಭಿಮಾನಿ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿ ಅವರು, ಎಚ್‌ಡಿಕೆ ಹೇಳಿಕೆ ಅವರು ಮಹಿಳೆಯರ ಮೇಲೆ ಹೊಂದಿರುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಮಾಜಿ ಮುಖ್ಯಮಂತ್ರಿಯೊಬ್ಬರು ಈ ರೀತಿಯ ಹೇಳಿಕೆ ನೀಡಿರುವುದರಿಂದ ರಾಷ್ಟ್ರದ ಇಡೀ ಮಹಿಳೆಯರನ್ನು ಅವಮಾನಿಸಿದಂತಾಗಿದೆ ಎಂದು ಟೀಕಿಸಿದರು.

ಮಹಿಳೆಯರ ಬಗ್ಗೆ ಕುಮಾರಸ್ವಾಮಿ ಅವರಿಗೆ ಇರುವ ಭಾವನೆಯನ್ನು ಯಾವ ಸ್ವಾಭಿಮಾನಿ ಮಹಿಳೆ ಕೂಡ ಸಹಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮಹಿಳೆಯೂ ಇಂದು ಅವರ ವಿರುದ್ಧ ದಿಕ್ಕಾರ ಕೂಗುವ ಪರಿಸ್ಥಿತಿ ಉದ್ಭವಿಸಿದೆ. ಕುಮಾರಸ್ವಾಮಿ ಅವರಿಂದ ಗ್ಯಾರಂಟಿ ಯೋಜನೆಗಳ ಮಹಿಳಾ ಫಲಾನುಭವಿಗಳಿಗೆ ದೊಡ್ಡ ಮಟ್ಟದ ಅವಮಾನವಾಗಿದೆ. ಯಾವ ಮಹಿಳೆ ಕೂಡ ಇವರಿಗೆ ಮತ್ತು ಇವರು ಮೈತ್ರಿ ಮಾಡಿಕೊಂಡಿರುವ ಎನ್‌ಡಿಎ ಕೂಟಕ್ಕೆ ಮತ ನೀಡುವುದಿಲ್ಲ ಎಂದರು.

ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಿತ್ರ ಪಕ್ಷ ಬಿಜೆಪಿ ಧ್ವನಿ ಎತ್ತದೆ ಇರುವುದು ಖಂಡನೀಯ. ಜಾತಿವಾದದ ಪಕ್ಷದೊಂದಿಗೆ ಕೈಜೋಡಿಸಿರುವ ಜಾತ್ಯತೀತ ಜನತಾದಳ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬಿಜೆಪಿಯ ಮೌನ ಮಹಿಳೆಯರ ಮೇಲೆ ಆ ಪಕ್ಷಕ್ಕೂ ಗೌರವವಿಲ್ಲ ಎನ್ನುವುದನ್ನು ಸಾಬೀತು ಪಡಿಸಿದೆ ಎಂದು ವೀಣಾ ಆರೋಪಿಸಿದರು.

ನಾಳೆ ಪ್ರತಿಭಟನೆ: ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಿ ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ಏ.17 ರಂದು ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ ನಡೆಯಲಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವೀಣಾ ಅಚ್ಚಯ್ಯ ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಅವರು ಮಾತನಾಡಿ ಎಚ್. ಡಿ. ಕುಮಾರಸ್ವಾಮಿ ಅವರ ಹೇಳಿಕೆಯ ವಿರುದ್ಧ ಇಡೀ ಮಹಿಳಾ ಸಮುದಾಯ ದಿಕ್ಕಾರ ಕೂಗುತ್ತಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಯಾವ ಮಹಿಳೆಯೂ ಇವರಿಗೆ ಮತ ನೀಡಬಾರದು. ಮಹಿಳೆಯರು ಎಲ್ಲೂ ದಾರಿ ತಪ್ಪುತ್ತಿಲ್ಲ, ಕುಮಾರಸ್ವಾಮಿ ಅವರೇ ದಾರಿ ತಪ್ಪಿದ್ದಾರೆ ಎಂದು ಆರೋಪಿಸಿದ ಅವರು ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಲಕ್ಷಾಂತರ ಮಂದಿಗೆ ಅನುಕೂಲವಾಗಿದೆ. ಇದನ್ನು ಸಹಿಸದೆ ಹೊಟ್ಟೆಕಿಚ್ಚಿನಿಂದ ಕುಮಾರಸ್ವಾಮಿ ಅವರು ಕ್ಷುಲ್ಲಕ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಶೈಲಾ ಕುಟ್ಟಪ್ಪ, ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಹಾಗೂ ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಸುದ್ದಿಗೋಷ್ಠಿಯಲ್ಲಿದ್ದರು.