ಕೊಪ್ಪಳ: ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಏನೂ ಸಾಧಿಸಿಲ್ಲ, ಅದು ಭ್ರಷ್ಟಾಚಾರದಲ್ಲಿ ಗಿನ್ನೆಸ್‌ ದಾಖಲೆ ಮಾಡಿದೆ ಅಷ್ಟೇ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಮತ್ತು ತುಮಕೂರಿನಲ್ಲಿ ನಡೆಸಿದ ಸರ್ಕಾರದ ಸಾಧನಾ ಸಮಾವೇಶದ ವಿರುದ್ಧ ಅವರು ತೀವ್ರ ವಾಗ್ದಾಳಿ ಮಾಡಿದರು.

ಸರ್ಕಾರದ ದುಡ್ಡು ಖರ್ಚು ಮಾಡಿ, ಯಾವ ಸಾಧನೆಗಾಗಿ ಇಂತಹ ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದರು.

ವಾಲ್ಮೀಕಿ ಹಗರಣದ ಮೂಲಕ ₹ 80 ಕೋಟಿ ಹಣವನ್ನು ಬಳ್ಳಾರಿ ಮತ್ತು ಗೋವಾ ಚುನಾವಣೆಯಲ್ಲಿ ಬಳಕೆ ಮಾಡಲಾಗಿದೆ. ದಲಿತರಿಗೆ ಮೀಸಲಿಟ್ಟ ಹಣ ದುರುಪಯೋಗ ಮಾಡಿಕೊಂಡಿದೆ. ರಾಜ್ಯ ಸರ್ಕಾರ ಸಾಲ ಮಾಡುವುದರಲ್ಲಿ ಗಿನ್ನೆಸ್‌ ದಾಖಲೆ ಮಾಡಿದ್ದು, ಅದನ್ನು ತೋರಿಸಬೇಕು ಎಂದು ಆಗ್ರಹಿಸಿದರು.

ಅಬಕಾರಿ ಇಲಾಖೆಯಲ್ಲಿ ನಡೆದಿರುವುದು ಸಣ್ಣ ಹಗರಣವೇ, ಬಾರ್ ಲೈಸನ್ಸ್ ನೀಡಲು ₹700 ಕೋಟಿ ಲಂಚದ ಹಗರಣ ಇದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಕುಟುಂಬವೇ ಭಾಗಿಯಾಗಿದೆ. ಇಂತಹ ಸರ್ಕಾರ ಅದ್ಯಾವ ಗಿನ್ನೆಸ್ ದಾಖಲೆಯ ಸಾಧನೆ ಮಾಡಿದೆ. ಇದಕ್ಕಿಂತ ಮಿಗಿಲಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾಂಗ್ರೆಸ್ ಪಕ್ಷಕ್ಕೆ ಎಟಿಎಂ ಆಗಿದೆ ಎಂದು ಆರೋಪಿಸಿದರು.


ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ಡಾ. ಬಸವರಾಜ ಕ್ಯಾವಟರ, ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಡಿ.ಕೆ. ಆಗೋಲಿ ಅಂಬರೀಷ್ ಮುರಳಿ, ಯಮನೂರಪ್ಪ ಚೌಡ್ಕಿ, ವೆಂಕಟೇಶ ಜಬ್ಬಲಗುಡ್ಡ ಇದ್ದರು.

ಕೇಸರಿ ಪೇಟ ಧರಿಸಲಿ : ಶಾಲೆಗಳಿಗೆ ವಿದ್ಯಾರ್ಥಿಗಳು ಕೇಸರಿ ಶಾಲು ಮತ್ತು ಪೇಟಾ ಧರಿಸಿ ಹೋಗಲಿ ಎಂದು ಜನಾರ್ದನ ರೆಡ್ಡಿ ಹೇಳಿದರು.

ಶಾಸಕ ಬಸನಗೌಡ ಪಾಟೀಲ್ ಹೇಳಿರುವ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಜೈ ಶ್ರೀರಾಮ್ ಎಂದು ಹೇಳಲಿ. ನಮ್ಮ ಪಕ್ಷದಲ್ಲಿ ಇಲ್ಲದಿದ್ದರೂ ಅವರು ಒಳ್ಳೆಯ ಮಾತು ಹೇಳಿದ್ದಾರೆ. ಕೇಸರಿ ಶಾಲು ಹಾಕಿಕೊಂಡು ಅಮೇರಿಕಾದಲ್ಲಿ ಹೋಗೋಕೆ ಆಗುತ್ತಾ. ನಮ್ಮ ರಾಜ್ಯದ ಶಾಲೆಗಳಿಗೆ ಹೋಗಬೇಕು ತಾನೆ ಎಂದು ಹೇಳಿದರು.