ಸಾರಾಂಶ
ಕಾಂಗ್ರೆಸ್‌ನಲ್ಲಿ ಬಂಡಾಯ ಸ್ಫೋಟಗೊಂಡಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಅವರು ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದು, ನಾಮಪತ್ರ ಸಲ್ಲಿಕೆಯ ಗಡುವಿಗೆ 10 ನಿಮಿಷಗಳಿರುವಾಗ ಬೈಕ್‌ನಲ್ಲಿ ಬಂದು, ನಾಮಪತ್ರ ಸಲ್ಲಿಸುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.
ಶಿಗ್ಗಾಂವಿ : ಶಿಗ್ಗಾಂವಿ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಶುಕ್ರವಾರ ಕಾಂಗ್ರೆಸ್‌ನಲ್ಲಿ ಬಂಡಾಯ ಸ್ಫೋಟಗೊಂಡಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಅವರು ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದು, ಕೊನೆಯ ಕ್ಷಣದಲ್ಲಿ ಅಂದರೆ ನಾಮಪತ್ರ ಸಲ್ಲಿಕೆಯ ಗಡುವಿಗೆ 10 ನಿಮಿಷಗಳಿರುವಾಗ ಬೈಕ್‌ನಲ್ಲಿ ಬಂದು, ಚುನಾವಣಾಧಿಕಾರಿಗಳ ಬಳಿಗೆ ಓಡೋಡಿ ತೆರಳಿ ನಾಮಪತ್ರ ಸಲ್ಲಿಸುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.
ಖಾದ್ರಿ ಅವರ ಮನವೊಲಿಕೆಗೆ ಆಗಮಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಕಾರಿನ ಮೇಲೆ ಖಾದ್ರಿ ಬೆಂಬಲಿಗರು ಕಲ್ಲು ತೂರಿದ್ದಾರೆ. ಇದೇ ವೇಳೆ, ತಮ್ಮ ಪುತ್ರ ರಾಜು ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಮಾಜಿ ಸಂಸದ ಮಂಜುನಾಥ ಕುನ್ನೂರ ಅಸಮಾಧಾನಗೊಂಡಿದ್ದು, ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಸಡ್ಡು ಹೊಡೆದಿದ್ದಾರೆ.
ಖಾದ್ರಿ ಮನವೊಲಿಕೆ ಯತ್ನ ವಿಫಲ:
ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಅವರ ಮನವೊಲಿಕೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಮುಂದಾದರು. ಹುಲಗೂರಿನಲ್ಲಿರುವ ಖಾದ್ರಿ ಅವರ ಮನೆಗೆ ಜಮೀರ್ ಬಂದಾಗ ಖಾದ್ರಿ ಬೆಂಬಲಿಗರು ಜಮೀರ್ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಕಾಂಗ್ರೆಸ್ ಮುಖಂಡರು ಜಮೀರ್ ಅಹ್ಮದ್ ಅವರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸಿದರು.
ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸದಂತೆ ತಡೆಯಲು ಜಮೀರ್ ನಡೆಸಿದ ಕಸರತ್ತು ಪ್ರಯೋಜನವಾಗಲಿಲ್ಲ. ಕೊನೇ ಗಳಿಗೆಯಲ್ಲಿ ತಹಸೀಲ್ದಾರ್ ಕಚೇರಿಗೆ ಅವಸರದಲ್ಲಿ ಬೈಕ್‌ನಲ್ಲಿ ಬಂದ ಖಾದ್ರಿ, ಕೇವಲ 10 ನಿಮಿಷ ಸಮಯ ಇದಿದ್ದರಿಂದ ಓಡುತ್ತಲೇ ಹೋಗಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.