ಸಾರಾಂಶ
ಶಿವಮೊಗ್ಗ: ಕಳೆದೊಂದು ದಶಕದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಸಂವಿಧಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ವಿವಾದದ ವಿಷಯನ್ನಾಗಿಸುವ ಕೆಲಸವನ್ನು ಒಂದು ವಲಯ ವ್ಯವಸ್ಥಿತವಾಗಿ ಮಾಡಿಕೊಂಡು ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.
ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಸಂಜೆ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಶಿವಮೊಗ್ಗ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ಸನ್ಮಾನ ಮತ್ತು ಸಂವಿಧಾನ ಬದಲಾಯಿಸಿದ್ದು ಯಾರು ? ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದೇಶದ ಅಭಿವೃದ್ಧಿಗಾಗಿ ದೇಶವನ್ನು ಒಟ್ಟಿಗೂಡಿಸುವ ಬಗ್ಗೆ ಆಲೋಚನೆ ಮಾಡಲು ಪ್ರಾರಂಭಿಸಿದರೆ ಕಾಂಗ್ರೆಸ್‌ನಲ್ಲಿರುವ ಒಂದು ವಲಯಕ್ಕೆ ಹೊಟ್ಟೆಯಲ್ಲಿ ಸಂಕಟ ಆರಂಭವಾಗುತ್ತದೆ. ಈ ಕಾಂಗ್ರೆಸ್ ವಲಯ ನಿರಂತವಾಗಿ ಆರ್‌ಎಸ್‌ಎಸ್ ಅಂಬೇಡ್ಕರ್ ಅವರನ್ನು ವಿರೋಧಿಸುತ್ತಾ ಬಂದಿದೆ. ಆರ್‌ಎಸ್‌ಎಸ್ ಸಂವಿಧಾನವನ್ನು ವಿರೋಧಿಸುತ್ತದೆ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂವಿಧಾನವನ್ನು ರದ್ದು ಮಾಡುತ್ತವೆ ಎಂಬ ಸುಳ್ಳು ಅಂಶವನ್ನು ನಿರಂತವಾಗಿ ಹೇಳಿಕೊಂಡು ಬರುತ್ತಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರನ್ನು ಸಂವಿಧಾನ ರಚನೆ ಸಮಿತಿಯ ಸದಸ್ಯರಾಗದ ರೀತಿ ನೋಡಿಕೊಳ್ಳಲು ಪ್ರಯತ್ನಿಸಿದ ಕಾಂಗ್ರೆಸ್ ನವರು ಇವತ್ತು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಸ್ವಾತಂತ್ಯ ನಂತರ ನಡೆದ ಎರಡು ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿದ ಕಾಂಗ್ರೆಸ್‌ನವರು ಬಿಜೆಪಿ ವಿರುದ್ಧ ಅಪಾದನೆ ಮಾಡುತ್ತಿದ್ದಾರೆ. ಅಂಬೇಡ್ಕರ್ ವಿಚಾರದಲ್ಲಿ ಕಾಂಗ್ರೆಸ್‌ನವರ ಬಂಡವಾಳವನ್ನು ಬಯಲು ಮಾಡಲು ಸಂವಿಧಾನ ಬದಲಾಯಿಸಿದ್ದು ಯಾರು ? ಎಂಬ ಪುಸ್ತಕ ರಚನೆಯಾಗಿದೆ ಎಂದು ತಿಳಿಸಿದರು.1951ರಲ್ಲಿ ಕಾಂಗ್ರೆಸ್ ಆಡಳಿತದಿಂದ ಬೇಸತ್ತು ಅಂಬೇಡ್ಕರ್ ಅವರು ರಾಜೀನಾಮೆ ನೀಡಿದರೆ ಅದನ್ನು ಕಾಂಗ್ರೆಸ್‌ನವರು ಅಂಬೇಡ್ಕರ್ ಅವರಿಗೆ ಹುಷಾರಿಲ್ಲದ ಕಾರಣ ರಾಜೀನಾಮೆ ನೀಡಿದ್ದಾರೆ ತಿರುಚುವಂತ ಪ್ರಯತ್ನ ಮಾಡಿದರು. ಆಗ ಲೋಕಸಭೆಯಲ್ಲೇ ಅಂಬೇಡ್ಕರ್ ಅವರು ನಾನೇ ನಿಶ್ಚಯಿಸಿ ರಾಜೀನಾಮೆ ಕೊಟ್ಟಿದ್ದೇನೆ. ಕಾರಣ ಸಂವಿಧಾನ ರಚನೆ ಪೂರ್ವದಿಂದಲೂ ನೆಹರು ಮಂತ್ರಿಮಂಡಳ ಹಿಂದುಪರ ಕಾಯ್ದೆ ತರಲು ವಿರೋಧ ಮಾಡುತ್ತಿದೆ. ಹಿಂದು ಪರವಾಗಿ ನೆಹರು ಅವರು ಎಂದೂ ಕೂಡ ಮಾತನಾಡುವುದಿಲ್ಲ. ನೆಹರು ಅವರ ಕಾರಣಕ್ಕೆ ಜಮ್ಮು ಕಾಶ್ಮಿರದಲ್ಲಿ ಸಂವಿಧಾನ ಅನ್ವಯವೇ ಆಗುತ್ತಿಲ್ಲ. ನನ್ನ ಜನರ ಅಭಿವೃದ್ಧಿ ಮಾಡಲು ಅನುಕೂಲವಾಗುವಂತ ಮಂತ್ರಿಸ್ಥಾನ ನೀಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ನನ್ನನ್ನು ಕಾನೂನು ಮಂತ್ರಿಯನ್ನಾಗಿ ಮಾಡಿದ್ದಾರೆ. ಈ ಕಾರಣಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಗಾಂಧೀಜಿ ಅವರ ಒತ್ತಾಯಕ್ಕೆ ಸಂವಿಧಾನ ರಚನೆ ಸಮಿತಿಯಲ್ಲಿ ಅಂಬೇಡ್ಕರ್ ಅವರನ್ನು ಸೇರಿಸಿಕೊಂಡ ಕಾಂಗ್ರೆಸ್‌ನವರು ಬಳಿಕ ಅವರನ್ನು ಅವಮಾನೀಯ ರೀತಿ ನಡೆಸಿಕೊಂಡು ಬಂದಿದ್ದಾರೆ. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿಕೊಂಡೇ ಬಂದಿರುವ ಕಾಂಗ್ರೆಸ್‌ನವರು ಇವತ್ತು ಬಿಜೆಪಿಯವರು ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಸಾಮಾಜಿಕ ಮುಖಂಡ ಡಾ.ಭೀಮಪ್ಪ ರಾಮಪ್ಪ ತಹಾಸೀಲ್ದಾರ್, ಕರ್ನಾಟಕ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಪರಿಶಿಷ್ಟ ಜಾತಿ ಮತ್ತು ಪಂಗಡ ಕೈಗಾರಿಕಾ ಸಂಘದ ಅಧ್ಯಕ್ಷ ಪರಶುರಾಮ್, ಪುಸ್ತಕದ ಲೇಖಕ ಪಿ.ವಿಕಾಸ್ ಕುಮಾರ್, ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮತ್ತಿತರರಿದ್ದರು.