ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ತನಿಖೆಯಾಗಲಿ

| Published : Feb 08 2025, 12:30 AM IST

ಸಾರಾಂಶ

ಜಿಲ್ಲಾಸ್ಪತ್ರೆ, ಬಿಮ್ಸ್‌ ಆಸ್ಪತ್ರೆಯಲ್ಲಾದ ಬಾಣಂತಿಯರ ಸರಣಿ ಸಾವು ಪ್ರಕರಣವನ್ನು ತನಿಖೆಗೆ ವಹಿಸಬೇಕು

ಬಳ್ಳಾರಿ: ಜಿಲ್ಲಾಸ್ಪತ್ರೆ, ಬಿಮ್ಸ್‌ ಆಸ್ಪತ್ರೆಯಲ್ಲಾದ ಬಾಣಂತಿಯರ ಸರಣಿ ಸಾವು ಪ್ರಕರಣವನ್ನು ತನಿಖೆಗೆ ವಹಿಸಬೇಕು ಎಂದು ಡ್ರಗ್ ಆಕ್ಷನ್ ಫೋರಂ ಕರ್ನಾಟಕ ಹಾಗೂ ಸಾರ್ವತ್ರಿಕ ಆರೋಗ್ಯ ಆಂದೋಲನದ ಮುಖ್ಯಸ್ಥ ಡಾ.ಗೋಪಾಲ್ ದಾಬಾಡೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಳ್ಳಾರಿ ಬಿಮ್ಸ್‌ ಆಸ್ಪತ್ರೆಯಲ್ಲಿ ಸಾವಿಗೀಡಾದ ಮಹಿಳೆಯರಿಗೆ ಚಿಕಿತ್ಸೆವೇಳೆ ನೀಡಲಾದ ರಿಂಗಲ್ ಲ್ಯಾಕ್ಟೇಟ್‌ನಲ್ಲಿ (ಸಲೈನ್) ವಿಷವಿತ್ತು. ಇದರಿಂದಾಗಿಯೇ ಸಾವಾಗಿದೆ. ಇದನ್ನು ಸರ್ಕಾರವೇ ಒಪ್ಪಿಕೊಂಡಿದೆ. ತನಿಖೆ ಮಾಡುವುದಾಗಿ ತಿಳಿಸಿದೆ. ಪಶ್ಚಿಮ ಬಂಗಾಳದ ಕಂಪನಿಯ ಪಶ್ಚಿಮ ಬಂಗಾ ಕಂಪನಿ ಔಷಧಿ ಉತ್ಪಾದಿಸಿ ನೀಡಿತ್ತು. ಅದನ್ನು ಸರ್ಕಾರಿ ಸ್ವಾಮ್ಯದ ಕಂಪನಿಯ ಮೂಲಕ ಖರೀದಿಸಲಾಗಿತ್ತು. ಅಂತೆಯೇ ಎಲ್ಲ ಜಿಲ್ಲೆಗಳಿಗೂ ನೀಡಲಾಗಿತ್ತು. ಬಳ್ಳಾರಿಗೆ ಬಂದ ಔಷಧಿಯ ಕೆಲ ಬ್ಯಾಚ್‌ನಲ್ಲಿ ಗುಣಮಟ್ಟ ಇಲ್ಲದಿರುವುದು ಕಂಡು ಬಂದಿದೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ತಮಿಳುನಾಡು, ರಾಜಸ್ಥಾನ ಹಾಗೂ ಕೇರಳ ಮಾದರಿಯಲ್ಲಿ ಔಷಧಿಯ ಪ್ರತಿಯೊಂದು ಬ್ಯಾಚ್‌ನ್ನು ಪರೀಕ್ಷೆ ಮಾಡಿಯೇ ಬಳಕೆ ಮಾಡಬೇಕು. ಪರೀಕ್ಷೆಗೆ ಒಳಪಡಿಸದೆ ಯಾವುದೇ ಔಷಧಿಯನ್ನು ಬಳಕೆ ಮಾಡಬಾರದು. ಒಂದು ವೇಳೆ ಕಂಪನಿಯಿಂದ ಕಳಿಸಿದ ಔಷಧಿಯಲ್ಲಿ ಲೋಪ ಕಂಡು ಬಂದಲ್ಲಿ ಅಂತಹ ಔಷಧಿ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಿಂದ ಆಯಾ ಜಿಲ್ಲೆಗಳ ಔಷಧಿಯ ಉಗ್ರಾಣಕ್ಕೆ ಬರುವ ಔಷಧಿಗಳನ್ನು ಪರೀಕ್ಷೆ ಮಾಡದೆಯೇ ಬಳಕೆ ಮಾಡುತ್ತಿರುವುದರಿಂದಾಗಿಯೇ ನಾನಾ ಅವಘಡಗಳಾಗುತ್ತಿವೆ. ಅಮಾಯಕ ಹೆಣ್ಣು ಮಕ್ಕಳ ಸಾವುಗಳು ಸಂಭವಿಸುತ್ತಿವೆ. ಇದನ್ನು ತಪ್ಪಿಸುವ ದಿಸೆಯಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಯನ್ನು ಹೊರಗಡೆ ಬರೆದುಕೊಡುವ ಪದ್ಧತಿಯಿದೆ. ಇದು ತಪ್ಪಿಸಬೇಕು. ಆರೋಗ್ಯ ಸಚಿವರು ಹೊರಗಡೆಯಿಂದ ಔಷಧಿ ತರಿಸಬಾರದು ಎಂದು ಹೇಳುತ್ತಾರೆಯೇ ವಿನಃ, ಅನುಷ್ಠಾನದಲ್ಲಿ ಕಂಡು ಬರುತ್ತಿಲ್ಲ ಎಂದರು.

ಸರ್ಕಾರದ ಉಗ್ರಾಣಕ್ಕೆ ಬರುವ ಔಷಧಿಯನ್ನು ಪರೀಕ್ಷೆ ಮಾಡಿಯೇ ಬಳಕೆ ಮಾಡಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಡ್ರಗ್ ಆಕ್ಷನ್ ಫೋರಂ ಕರ್ನಾಟಕ ಹಾಗೂ ಸಾರ್ವತ್ರಿಕ ಆರೋಗ್ಯ ಆಂದೋಲನದ ಮೂಲಕ ರಾಜ್ಯದಾದ್ಯಂತ ಜಾಗೃತಿ ಜಾಥಾ ಮಾಡಲಾಗುತ್ತಿದೆ. ಫೆ.3ರಂದು ಬೀದರ್‌ನಲ್ಲಿ ಶುರುಗೊಂಡ ಜಾಥಾವು ರಾಜ್ಯದ ನಾನಾ ಜಿಲ್ಲೆಗಳಲ್ಲಿ ಸಂಚರಿಸಿ ಫೆ.14ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶದ ಬಳಿಕ ಕೊನೆಗೊಳ್ಳುತ್ತದೆ ಎಂದು ತಿಳಿಸಿದರು.

ಸಾರ್ವತ್ರಿಕ ಆರೋಗ್ಯ ಆಂದೋಲನದ ಸದಸ್ಯೆ ಚಂದ್ರಕುಮಾರಿ ಮಾತನಾಡಿ, ಬಿಮ್ಸ್‌ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ ಮುಂದುವರಿದಿವೆ. ಇತ್ತೀಚೆಗೆ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ರೋಗಿಗಳಿಗೆ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ. ಔಷಧಿಯನ್ನು ಹೊರಗಡೆ ಬರೆದುಕೊಡುತ್ತಾರೆ ಎಂದು ರೋಗಿಗಳು ಹೇಳುತ್ತಾರೆ. ಆಸ್ಪತ್ರೆಗಳಿಗೆ ಭೇಟಿ ನೀಡಿದಾಗ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಂಡು ಬರುತ್ತಿಲ್ಲ. ಜಿಲ್ಲಾಡಳಿತ ಈ ಬಗ್ಗೆ ನಿಗಾ ವಹಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಪಾಲಿಕೆ ಸದಸ್ಯೆ ಹಾಗೂ ಸಾಮಾಜಿಕ ಹೊರಾಟಗಾರ್ತಿ ಪರ್ವಿನ್ ಬಾನು, ಮಹ್ಮದ್ ನೂರ್, ಲಕ್ಷ್ಮಿನರಸಮ್ಮ, ಶೇಖರ ಬಾಬು, ವೀಣಾ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.