ಮುಸ್ಲಿಂ ಓಲೈಕೆಗಾಗಿ ಮೀಸಲಾತಿ ಕಸಿಯುವ ಷಡ್ಯಂತ್ರ: ಸದಾನಂದ ಭಟ್

| Published : Apr 26 2024, 12:47 AM IST

ಮುಸ್ಲಿಂ ಓಲೈಕೆಗಾಗಿ ಮೀಸಲಾತಿ ಕಸಿಯುವ ಷಡ್ಯಂತ್ರ: ಸದಾನಂದ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದುಳಿದ ವರ್ಗದ ನೇತಾರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಹಿಂದುಳಿದ ವರ್ಗದ ಮೀಸಲಾತಿ ಕಸಿದು ಮುಸ್ಲಿಮರಿಗೆ ನೀಡಲು ಹೊರಟಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ಆರೋಪಿಸಿದರು.

ಶಿರಸಿ: ಮುಸ್ಲಿಂ ಓಲೈಕೆಗಾಗಿ ಮೀಸಲಾತಿಯನ್ನು ಸಂಪೂರ್ಣ ತಲೆ ಕೆಳಗೆ ಮಾಡಿ ಹಿಂದುಳಿದ ವರ್ಗದ, ಪರಿಶಿಷ್ಟರ ಸೌಲಭ್ಯ ಕಸಿಯುವ ಷಡ್ಯಂತ್ರ ಕಾಂಗ್ರೆಸ್‌ದಿಂದ ನಡೆದಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗದ ನೇತಾರ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಹಿಂದುಳಿದ ವರ್ಗದ ಮೀಸಲಾತಿ ಕಸಿದು ಮುಸ್ಲಿಮರಿಗೆ ನೀಡಲು ಹೊರಟಿದ್ದಾರೆ. ಶೇ. ೧೨.೯೮ ಜನಸಂಖ್ಯೆ ಹೊಂದಿರುವ ಮುಸ್ಲಿಮರಿಗೆ ಹಿಂದುಳಿದ, ಪರಿಶಿಷ್ಟ ಜಾತಿ- ಪಂಗಡದ ಮೀಸಲಾತಿ ನೀಡಿ, ತುಷ್ಟೀಕರಣದ ಪರಮಾವಧಿಯನ್ನು ಮಾಡುತ್ತಿದೆ. ಇದರಿಂದ ಹಿಂದುಳಿದ ವರ್ಗಕ್ಕೆ ಸಿಗುವ ಸೌಲಭ್ಯ ಕಡಿತವಾಗಲಿದೆ. ಉದ್ಯೋಗ, ಶಿಕ್ಷಣದಲ್ಲಿ ಹಿಂದುಳಿದವರಿಗೆ ಮೋಸವಾಗಲಿದೆ. ದೊಡ್ಡದಾದ ಅನ್ಯಾಯವಾಗುತ್ತಿದೆ. ಕದ್ದುಮುಚ್ಚಿ ಮಾಡುವ ಮೀಸಲಾತಿ ಬದಲಾವಣೆ ಮಾಡಲು ಹೊರಟಿದೆ ಎಂದು ವಾಗ್ದಾಳಿ ನಡೆಸಿದರು.

ಕ್ಷೇತ್ರಾದ್ಯಂತ ಅದ್ಭುತವಾಗಿ ಬಿಜೆಪಿ ಪ್ರಚಾರ ಕಾರ್ಯ ನಡೆಸಲಾಗುತ್ತಿದೆ. ಕಾರ್ಯಕರ್ತರು ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಟೀಕಿಸುವುದನ್ನು ಪ್ರವೃತ್ತಿಯನ್ನಾಗಿ ಮಾಡಿಕೊಂಡ ಕಾಂಗ್ರೆಸ್ ಮುಖಂಡರು ಸುಳ್ಳು ಆರೋಪ ನಮ್ಮ ಅಭ್ಯರ್ಥಿಯ ಮೇಲೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮ್ ಕುಮಾರ್, ಶಿರಸಿ ನಗರ ಘಟಕದ ಅಧ್ಯಕ್ಷ ಆನಂದ ಸಾಲೇರ್, ಶಿರಸಿ ಗ್ರಾಮೀಣ ಘಟಕದ ಅಧ್ಯಕ್ಷೆ ಉಷಾ ಹೆಗಡೆ, ಪ್ರಮುಖರಾದ ಆರ್.ವಿ. ಹೆಗಡೆ ಚಿಪಗಿ, ನಾಗರಾಜ ನಾಯ್ಕ, ರವಿ ಶೆಟ್ಟಿ ಇತರರು ಇದ್ದರು.

ಕಾಂಗ್ರೆಸ್‌ ನಾಯಕರ ಹೇಳಿಕೆಗೆ ಖಂಡನೆ

ಅಮೆರಿಕದಲ್ಲಿ ವ್ಯಕ್ತಿಯ ಮರಣಾನಂತರ ಆತನ ಸಂಪತ್ತಿನ ಮೇಲೆ ಶೇ. 55 ತೆರಿಗೆ ಹಾಕುವ ಮೂಲಕ ಮಕ್ಕಳು, ಕುಟುಂಬಕ್ಕೆ ಶೇ. 45ರಷ್ಟು ಪಿತ್ರಾರ್ಜಿತ ಪಾಲನ್ನು ಮಾತ್ರ ವರ್ಗಾಯಿಸಲಾಗುತ್ತದೆ. ಹೀಗೆ ವಶಕ್ಕೆ ಪಡೆದ ಆಸ್ತಿಯನ್ನು ಬಡವರಿಗಾಗಿ ವಿನಿಯೋಗ ಮಾಡಲಾಗುತ್ತದೆ. ಇದೇ ಸಂಪತ್ತಿನ ನಿಜವಾದ ಮರು ಹಂಚಿಕೆ ವಿಧಾನ ಎಂದು ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿರುವುದು ಖಂಡನೀಯ. ಸಂಪತ್ತಿನ ಸಮಾನ ಹಂಚಿಕೆ ಮೂಲಕ ಕಾಂಗ್ರೆಸ್ ಹಿಂದುಗಳ ಮಂಗಳಸೂತ್ರವನ್ನೂ ಕಿತ್ತುಕೊಳ್ಳಲು ಹೊರಟಿದೆ. ಕಾಂಗ್ರೆಸ್ ಬದುಕಿದ್ದಾಗಲಷ್ಟೇ ಅಲ್ಲ, ಸತ್ತ ಮೇಲೂ ಲೂಟಿ ಮಾಡುತ್ತದೆ ಎಂದು ಸದಾನಂದ ಭಟ್ ವಾಗ್ದಾಳಿ ನಡೆಸಿದರು.‌