ವಿಶ್ವ ಸುರಕ್ಷಿತ ಅಂತರ್ಜಾಲ ದಿನದ ಕಾರ್ಯಾಗಾರದಲ್ಲಿ ಜಿಪಂ ಉಪಕಾರ್ಯದರ್ಶಿ
ಕನ್ನಡಪ್ರಭ ವಾರ್ತೆ ಕಾರವಾರಆಧುನಿಕ ಯುಗದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೂ, ಪ್ರತಿಯೊಬ್ಬರೂ ಅಂತರ್ಜಾಲದ ಬಳಕೆ ಮಾಡುತ್ತಿದ್ದು, ಇದರಲ್ಲಿ ಮಕ್ಕಳು ಹೆಚ್ಚಿನ ವಂಚನೆಗೆ ಒಳಗಾಗುತ್ತಿದ್ದು, ಮೊಬೈಲ್‌ನಿಂದ ಮಕ್ಕಳನ್ನು ದೂರವಿಡಬೇಕು ಎಂದು ಜಿಪಂ ಉಪಕಾರ್ಯದರ್ಶಿ ಅಲ್ಲಾಭಕ್ಷ್ ತಿಳಿಸಿದರು. ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಇವರ ಸಹಯೋಗದಲ್ಲಿ ನಡೆದ ವಿಶ್ವ ಸುರಕ್ಷಿತ ಅಂತರ್ಜಾಲ ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಸುರಕ್ಷಿತಾ ಅಂತರ್ಜಾಲದ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಸಿಇಎನ್ ಅಪರಾಧ ಪೊಲೀಸ್ ವಿಭಾಗದ ಡಿವೈಎಸ್ಪಿ ಬಿ.ಅಶ್ವಿನಿ, ಅಂತರ್ಜಾಲ ಬಳಕೆದಾರರನ್ನು ವಂಚಿಸುವುದಕ್ಕಾಗಿಯೇ ಸಂಘಟಿತ ಅಪರಾಧ ಮಾಡುವ ಜಾಲ ಇಂದು ಜಗತ್ತನ್ನೇ ಆಳುತ್ತಿದೆ. ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೈಬರ್ ವಂಚನೆಯ ಜಾಲಕ್ಕೆ ಒಳಗಾಗುತ್ತಿದ್ದಾರೆ ಎಂದರು.ಅನ್ಯ ನಂಬರ್‌ಗಳಿಂದ ವಂಚಕರು ಆಶ್ಲೀಲ ವಿಡಿಯೋ ಕರೆಗಳ ಮೂಲಕ ಮಾತನಾಡಿ, ರೆಕಾರ್ಡ್ ಮಾಡಿ ಮಾನಸಿಕವಾಗಿ ಕುಗ್ಗಿಸಿ, ವಂಚನೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕರೆ ಕಟ್ ಮಾಡಬೇಕು. ವಂಚನೆಗೆ ಒಳಗಾದ ತಕ್ಷಣ ಉಚಿತ ದೂರವಾಣಿ ಸಂಖ್ಯೆ 1930 ಸಂಪರ್ಕಿಸುವಂತೆ ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕು. ವೈಯಕ್ತಿಕ ಮಾಹಿತಿ, ಒಟಿಪಿ, ಬ್ಯಾಂಕ್ ವಿವರ ಮತ್ತಿತರ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು, ಜಾಲತಾಣ ಅಥವಾ ಇ-ಮೇಲ್ ಪಾಸ್‌ವರ್ಡ್‌ಗಳನ್ನು ಆಟೋ ಸೇವ್ ಮಾಡಬೇಡಿ, ಆಗಾಗ ಫರ್ಗೆಟ್ ಪಾಸ್‌ವರ್ಡ್ ಮೂಲಕ ಪಾಸ್‌ವರ್ಡ್‌ಳನ್ನು ರೀಸೆಟ್ ಮಾಡುವುದರ ಮೂಲಕ ಮತ್ತು ವಿಶಿಷ್ಟ ಚಿಹ್ನೆ ಮತ್ತು ಅಂಕಿಗಳನ್ನು ಒಳಗೊಂಡ ಸ್ಟ್ರಾಂಗ್ ಪಾಸ್‌ವರ್ಡ್ ನೀಡುವುದರಿಂದ ಜಾಲತಾಣಗಳ ವಂಚನೆಯಿಂದ ಸುರಕ್ಷಿತವಾಗಿರಬಹುದು. ಸಾರ್ವಜನಿಕ ವೈಫೈ ಮತ್ತು ಛಾರ್ಜಿಂಗ್ ಬಳಸಬಾರದು ಎಂದರು.
ಜಿಲ್ಲಾ ಮಾಹಿತಿ ಕೇಂದ್ರದ ಅಧಿಕಾರಿ ಸಾಯಿ ಸಾಗರ ಜಲ್ಲು ಮಾತನಾಡಿ, ಸುರಕ್ಷಿತ ಅಂತರ್ಜಾಲದ ಬಗ್ಗೆ ಮಾಹಿತಿ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರು, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತಾ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬಿಬ್ ಇದ್ದರು.