ಸಾರಾಂಶ
ಗದಗ: ಕಾಂಗ್ರೆಸ್ ಇಷ್ಟೊಂದು ದಶಕಗಳ ಕಾಲ ಅಧಿಕಾರ ನಡೆಸಿದರೂ ದಲಿತರ ಅಭಿವೃದ್ಧಿಗೆ ಶ್ರಮಿಸಿಲ್ಲ, ಕಾಂಗ್ರೆಸ್ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಸಂವಿಧಾನ ಬದಲಾವಣೆಯ ಅಪಪ್ರಚಾರ ಮಾಡುತ್ತಿದೆ ಎಂದು ಹಾವೇರಿ ಗದಗ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಶುಕ್ರವಾರ ಗದಗ ನಗರದ ಖೋಡೆ ಕಲ್ಯಾಣ ಮಂಟಪದಲ್ಲಿ ಎಸ್ಸಿ-ಎಸ್ಟಿ ಸಮಾಜದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅಂಬೇಡ್ಕರ್ ಸ್ವಾತಂತ್ರ್ಯ ಹೋರಾಟದ ಮೇಲೆ ಪರಿಣಾಮ ಬೀರಿದರು. ಬ್ರಿಟಿಷರು ಅಂಬೇಡ್ಕರ್ ಮೇಲೆ ಪರಿಣಾಮ ಬೀರುವ ಪ್ರಯತ್ನ ಮಾಡಿದರು. ಸಂವಿಧಾನ ರಚನೆಯ ಸಂದರ್ಭದಲ್ಲಿ ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ನಡುವೆ ಸಾಕಷ್ಟು ಚರ್ಚೆಯಾಗಿದೆ. ಅದರ ಫಲವಾಗಿ ಎಲ್ಲರಿಗೂ ಸಮಾನ ನ್ಯಾಯ ನೀಡುವ ಸಂವಿಧಾನ ರಚನೆಯಾಗಿದೆ ಎಂದರು.ಅಂಬೇಡ್ಕರ್ ಅವರನ್ನು ಸೋಲಿಸಿದವರು ಕಾಂಗ್ರೆಸ್ ನವರು, ಅಂಬೇಡ್ಕರ್ ವಿರುದ್ಧ ಕಾಂಗ್ರೆಸ್ ನವರು ಶ್ರೀಮಂತ ಅಭ್ಯರ್ಥಿಯನ್ನು ಹಾಕಿ ಸೋಲಿಸಿದರು.ಅವರು ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೆ ಜಾಗ ನೀಡಲಿಲ್ಲ. ಈಗ ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಬು ಜಗಜೀವನ ರಾಮ್ ಗೆ ಪಿಎಂ ಹುದ್ದೆ ತಪ್ಪಿಸಿದವರು ಕಾಂಗ್ರೆಸ್ ನವರು, ಅಂಬೇಡ್ಕರ್ ಇನ್ನೊಂದು ಶಕ್ತಿ ಬಾಬು ಜಗಜೀವನ್ ರಾಮ್, ಕಾಂಗ್ರೆಸ್ ಇಬ್ಬಾಗವಾದಾಗ ಇಂದಿರಾ ಗಾಂಧಿ, ಬಾಬು ಜಗಜೀವನ್ ರಾಮ್ ಅವರ ಫೋಟೊ ಹಾಕಿ ಚುನಾವಣೆಯಲ್ಲಿ ಆರಿಸಿ ಬಂದರು. ಇಂಡಿಯಾ ಪಾಕಿಸ್ತಾನ ಯುದ್ದದ ಸಮಯದಲ್ಲಿ ಬಾಬು ಜಗಜೀವನ ರಾಮ್ ರಕ್ಷಣಾ ಮಂತ್ರಿಯಾಗಿ ದೇಶದ ಗೆಲುವಿನಲ್ಲಿ ಪಾತ್ರವಹಿಸಿದರು.ಬಾಬು ಜಗಜೀವನ್ ರಾಮ್ ಹಸಿರು ಕ್ರಾಂತಿ ಮಾಡಿ ಭಾರತವನ್ನು ಸ್ವಾಭಿಮಾನಿಗಳನ್ನಾಗಿ ಮಾಡಿದರು.ಅದಕ್ಕೂ ಮೊದಲು ಭಾರತ ಬೇರೆ ದೇಶಗಳಲ್ಲಿ ಆಹಾರಕ್ಕಾಗಿ ಭಿಕ್ಷೆ ಬೇಡುತ್ತಿತ್ತು. ಅಮೇರಿಕಾದವರು ದನಗಳಿಗೆ ಹಾಕುವ ಗೋದಿ ಕೊಡುತ್ತಿದ್ದರು. ಜಗಜೀವನ್ ರಾಮ್ ಕಾಂಗ್ರೆಸ್ ನಿಂದ ಹೊರ ಬಂದು ಪಕ್ಷ ಕಟ್ಟಿದರು. ಜನತಾ ಪಕ್ಷದೊಂದಿಗೆ ಸೇರಿ ರಚನೆಯಾದ ಸರ್ಕಾರದಲ್ಲಿ ಉಪ ಪ್ರಧಾನಿ ಆದರು, ಅವರನ್ನು ಪ್ರಧಾನಿ ಮಾಡಲು ವಾಜಪೇಯಿಯವರು ಪ್ರಸ್ತಾಪ ಇಟ್ಟಿದ್ದರು. ಆದರೆ ಕಾಂಗ್ರೆಸ್ ಅದಕ್ಕೆ ಅವಕಾಶ ಕೊಡಲಿಲ್ಲ, ಇದು ಕಾಂಗ್ರೆಸ್ ದಲಿತರಿಗೆ ಮಾಡಿರುವ ಅನ್ಯಾಯ ಎಂದರು.
ಮೀಸಲಾತಿ ಹೆಚ್ಚಳ ಕ್ರಾಂತಿಕಾರಕ ನಿರ್ಧಾರ: ರಾಜ್ಯದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಬೇಕೆಂದು ಕಳೆದ ಮೂವತ್ತು ವರ್ಷಗಳಿಂದ ಬೇಡಿಕೆ ಇತ್ತು. ಯಾವ ಮುಖ್ಯಮಂತ್ರಿಗಳು ಅದನ್ನು ಮಾಡಲು ಹೋಗಿರಲಿಲ್ಲ. ನಾನು ಮೀಸಲಾತಿ ಹೆಚ್ಚಳ ಮಾಡುವ ಕ್ರಾಂತಿಕಾರಣ ತೀರ್ಮಾನ ಮಾಡಿದ್ದೆ, ತಾವು ಈ ರೀತಿಯ ದಿಟ್ಟ ನಿರ್ಧಾರ ತೆಗೆದುಕೊಳ್ಳಲು ತಮ್ಮ ಜೀವನದಲ್ಲಿ ನಡೆದ ಅನುಭವ ಹಂಚಿಕೊಂಡ ಅವರು, ನಾನು ಪೂನಾದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ರೈಲಿನಲ್ಲಿ ಬರುವಾಗ ಸ್ಟೇಶನ್ ಬಳಿ ದಲಿತ ಕೇರಿ ನೋಡಿ ಅಲ್ಲಿ ಹೋಗಿ ಅವರನ್ನು ಮಾತನಾಡಿಸುತ್ತಿದ್ದೆ. ಆಗಲೇ ಈ ಸಮುದಾಯ ಇಷ್ಟೊಂದು ಕಷ್ಟದಲ್ಲಿದ್ದಾರೆ. ಇವರಿಗೆ ನ್ಯಾಯ ಕೊಡಿಬೇಕು ಎಂದು ಚಿಂತನೆ ಮಾಡುತ್ತಿದ್ದೆ. ಆ ಸಮುದಾಯಕ್ಕೆ ನ್ಯಾಯ ಕೊಡುವ ಅವಕಾಶ ಸಿಕ್ಕಾಗ ಮೀಸಲಾತಿ ಹೆಚ್ಚಳ ಮಾಡಿದೆ ಎಂದರು.ಮೀಸಲಾತಿ ಹೆಚ್ಚಳ ಮಾಡಲು ಮುಂದಾದಾಗ ಜೇನುಗೂಡಿಗೆ ಕೈ ಹಾಕಬೇಡಿ ಎಂದರು. ನಾನು ನನಗೆ ಜೇನು ಕಡಿದರೂ ಚಿಂತೆಯಿಲ್ಲ,ಈ ಸಮಾಜಕ್ಕೆ ನ್ಯಾಯ ಕೊಡಿಸುತ್ತೇನೆ ಎಂದು ಈ ಸಮಾಜಕ್ಕೆ ನ್ಯಾಯ ಕೊಡಿಸುವ ಕ್ರಾಂತಿಕಾರಕ ನಿರ್ಧಾರ ಮಾಡಿದೆ. ಈಗ ಜಾರಿಯಾಗಿ ಒಂದೂವರೆ ವರ್ಷವಾಯಿತು. ಇದರಿಂದ 3500 ಎಂಜನಿಯರ್ ಸೀಟುಗಳು, 400 ವೈದ್ಯರ ಸೀಟುಗಳು ಹೆಚ್ಚಿಗೆ ದೊರೆತಿವೆ. ಮೀಸಲಾತಿ ಹೆಚ್ಚಳದಿಂದ ಬಡ್ತಿ ದೊರೆಯುತ್ತದೆ. ಕಾಂಗ್ರೆಸ್ ನವರು ಬ್ಯಾಕ್ ಲಾಗ್ ಹುದ್ದೆಗಳನ್ನು ತುಂಬುತ್ತಿಲ್ಲ ಎಂದು ಹೇಳಿದರು.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಖರ್ಗೆ ಪಿಎಂ ಅಭ್ಯರ್ಥಿ ಅಂತ ಹೇಳಿದರು. ಆದರೆ, ರಾಜ್ಯ ಕಾಂಗ್ರೆಸ್ ನವರು ರಾಹುಲ್ ಗಾಂಧಿ ಆಗಲಿ ಎಂದರು. ಅವರು ನಾನು ಆಗುವುದಿಲ್ಲ ಎನ್ನುತ್ತಾರೆ. ಇಂಡಿಯಾ ಒಕ್ಕೂಟದಲ್ಲಿ ಪ್ರಧಾನಿ ಆಗುವ ಮುಖವೇ ಇಲ್ಲ. ಒಂದು ಕಡೆ ಮೋದಿ ಎನ್ನುವ ಸಿಂಹ ಇದೆ. ಇನ್ನೊಂದೆಡೆ ನಾಯಕರೇ ಇಲ್ಲ ಎಂದು ಹೇಳಿದರು.ಎಸ್ಸಿ ಅಧ್ಯಕ್ಷ ಮಂಜುನಾಥ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಶಾಸಕ ಡಾ. ಚಂದ್ರು ಲಮಾಣಿ, ಬಿಜೆಪಿ ಅಧ್ಯಕ್ಷ ರಾಜು ಕುರಡಗಿ, ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
;Resize=(128,128))
;Resize=(128,128))