ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಧರ್ಮಕ್ಷೇತ್ರ ಹಾಗೂ ಯುನೈಟೆಡ್ ಕ್ರಿಶ್ಚಿಯನ್ ಫೋರಂ (ಯುಸಿಎಫ್) ವತಿಯಿಂದ ನ.26 ರಂದು ಸಂವಿಧಾನ ದಿನಾಚರಣೆ ಆಯೋಜಿಸಲಾಗಿದೆ ಎಂದು ಮೈಸೂರು ಬಿಷಪ್ ಡಾ.ಎಸ್.ಜೆ. ಫ್ರಾನ್ಸಿಸ್ ಸೆರಾವೊ ತಿಳಿಸಿದರು.

ನಗರದ ಸಂತ ಫಿಲೋಮಿನಾ ಚರ್ಚ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.26ರ ಬೆಳಗ್ಗೆ 8ಕ್ಕೆ ಸಿಎಸ್ಐ ಯೇಸು ಕರುಣಾಲಯ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಧಾರ್ಮಿಕ ಹಾಗೂ ಸಮುದಾಯದ ಗಣ್ಯರ ಸಮ್ಮುಖದಲ್ಲಿ ಧ್ವಜಾರೋಹಣ ನೆರವೇರಲಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಗುವುದು ಎಂದರು.

ನಂತರ ಬೆಳಗ್ಗೆ 9ಕ್ಕೆ ಸಂತ ಫಿಲೋಮಿನಾ ಚರ್ಚ್ ನಲ್ಲಿ ಮುಖ್ಯ ಸಮಾವೇಶ ನಡೆಯಲಿದ್ದು, ವಿವಿಧ ಕ್ರೈಸ್ತ ಸಭೆ-ಸಮುದಾಯಗಳನ್ನು ಪ್ರತಿನಿಧಿಸುವ 3000 ಅಧಿಕ ಮಂದಿ ಭಾಗವಹಿಸಲಿದ್ದಾರೆ. ಈ ವೇಳೆ ಸಂವಿಧಾನ ತಜ್ಞ ರಾಜಶೇಖರ ಮೂರ್ತಿ ಅವರು ಸಂವಿಧಾನ ದಿನಾಚರಣೆ ಕುರಿತು ಮಾತನಾಡುವರು. ಇದೇ ವೇಳೆ ದೇಶಭಕ್ತಿಗೀತೆಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಗೆ ಒತ್ತು:


ಈ ವರ್ಷದ ಸಂವಿಧಾನ ದಿನಾಚರಣೆಯ ಪ್ರಮುಖ ಆಶಯ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಿಸುವುದು ಹಾಗೂ ಸಂವಿಧಾನಾತ್ಮಕ ಹಕ್ಕುಗಳ ಕುರಿತು ಜನ ಜಾಗೃತಿ ಮೂಡಿಸುವುದಾಗಿದೆ. ಸಂವಿಧಾನದ 25ನೇ ವಿಧಿ ಪ್ರತಿಯೊಬ್ಬ ವ್ಯಕ್ತಿಗೂ ಆತ್ಮಸಾಕ್ಷಿಯ ಸ್ವಾತಂತ್ರ್ಯ ಹಾಗೂ ತನ್ನ ಧರ್ಮವನ್ನು ಸ್ವೀಕರಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಖಾತರಿಪಡಿಸಿದೆ. ಶಾಂತಿಯುತವಾಗಿ ಧಾರ್ಮಿಕ ನಂಬಿಕೆ ಪ್ರತಿಪಾದಿಸುವುದು ಮತ್ತು ಇತರರೊಂದಿಗೆ ಹಂಚಿಕೊಳ್ಳುವುದು ಸಂವಿಧಾನಬದ್ಧ ಹಕ್ಕಾಗಿದೆ. ಈ ಹಕ್ಕು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರದೆ ಎಲ್ಲ ನಾಗರಿಕರಿಗೂ ಸಮಾನವಾಗಿ ಅನ್ವಯಿಸುತ್ತದೆ ಎಂದರು.

ಇದೇ ವೇಳೆ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕುಗಳ ಸಂರಕ್ಷಣಾ ಕಾಯಿದೆ- 2022 ಅನ್ನು ರದ್ದುಪಡಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು. ಕಾಯಿದೆಯ ಕೆಲವು ನಿಬಂಧನೆಗಳು ಮತ್ತು ಅದರ ಅನುಷ್ಠಾನದ ಕುರಿತು ಇರುವ ಆತಂಕಗಳು ಧಾರ್ಮಿಕ ಅಲ್ಪಸಂಖ್ಯಾತರಲ್ಲಿ, ವಿಶೇಷವಾಗಿ ಕ್ರೈಸ್ತ ಸಮುದಾಯದಲ್ಲಿ, ಧಾರ್ಮಿಕ ಗುರುತು, ನಂಬಿಕೆಯ ಅಭಿವ್ಯಕ್ತಿ ಹಾಗೂ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಕುರಿತು ಅನಿಶ್ಚಿತತೆ ಉಂಟು ಮಾಡಿವೆ ಎಂದರು.

ಬಲವಂತ, ವಂಚನೆ, ಬೆದರಿಕೆಯ ಮೂಲಕ ನಡೆಯುವ ಧಾರ್ಮಿಕ ಮತಾಂತರಗಳನ್ನು ತಡೆಯಲು ಕಾನೂನು ಕ್ರಮ ಅಗತ್ಯ. ಆದರೆ, ಶಾಂತಿಯುತ ಧಾರ್ಮಿಕ ಪ್ರಚಾರ, ಸ್ವಯಂಪ್ರೇರಿತ ಧಾರ್ಮಿಕ ಆಯ್ಕೆಯನ್ನು ಅಪರಾಧವೆಂದು ಪರಿಗಣಿಸುವಂತಾಗಬಾರದು. ಅಲ್ಲದೆ, ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ದುರ್ಬಲ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಯುವ ದ್ವೇಷ ಭಾಷಣ, ಕೋಮು ಪ್ರಚೋದನೆ, ಬೆದರಿಕೆ ಮತ್ತು ಹಿಂಸಾಚಾರ ತಡೆಯಲು ಸರ್ಕಾರ ಸಮಗ್ರ ಹಾಗೂ ಪರಿಣಾಮಕಾರಿ ರಕ್ಷಣಾ ನೀತಿ ರೂಪಿಸಲು ಆಗ್ರಹಿಸಲಾಗುವುದು ಎಂದು ಅವರು ಹೇಳಿದರು.

ಸಿಆರ್ ಐ ಅಧ್ಯಕ್ಷ ಆಲ್ಫೋನ್ಸ್ ಬ್ರಿಟ್ಟೊ, ಸಂತ ಫಿಲೋಮಿನಾ ಚರ್ಚ್ ಫಾ. ಅಲೆಕ್ಸ್ ಸಿಕ್ವೇರಾ, ಯುನೈಟೆಸ್ ಕ್ರಿಶ್ಚಿಯನ್ ಫೋರಂ ಸದಸ್ಯರಾದ ವೀಣಾ ವಿಲಿಯಂಸ್, ಅನಿಲ್ ಥಾಮಸ್ ಇದ್ದರು.