ಶಾಲೆಯ ಆವರಣದಲ್ಲಿ ‌ನಡೆಯುತ್ತಿರುವ ವಸತಿ ಸಮುಚ್ಚಯ ಕಾಮಗಾರಿ ಸ್ಥಳದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ರೈಲ್ವೆ ಇಲಾಖೆ, ಸ್ಥಳೀಯ ಶಾಸಕರು ಮತ್ತು ಸಂಸದರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 108 ವರ್ಷದ ಇತಿಹಾಸವುಳ್ಳ ಸರ್ಕಾರಿ ಶಾಲೆಯ ಅಸ್ತಿತ್ವ ಉಳಿಸಲು ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುವಂತೆ ಆಗ್ರಹ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಯಾದವಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಒಂಟಿಕೊಪ್ಪಲು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶಾಲೆಯ ಅಸ್ತಿತ್ವಕ್ಕೆ ಧಕ್ಕೆಯಾಗುವಂತೆ ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ಮೂರು ವಸತಿ ಸಮುಚ್ಚಯ (ಅಪಾರ್ಟ್‌ ಮೆಂಟ್ ಗಳ) ನಿರ್ಮಾಣ ಕಾಮಗಾರಿಯನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ಮೈಸೂರು ಗ್ರಾಹಕರ ಪರಿಷತ್, ಎಐಡಿಎಸ್ಒ ಸಹಯೋಗದೊಂದಿಗೆ ಯಾದವಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಒಂಟಿಕೊಪ್ಪಲು ಸರ್ಕಾರಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದವರು ಮಂಗಳವಾರ ಪ್ರತಿಭಟಿಸಿದರು.

ಶಾಲೆಯ ಆವರಣದಲ್ಲಿ ‌ನಡೆಯುತ್ತಿರುವ ವಸತಿ ಸಮುಚ್ಚಯ ಕಾಮಗಾರಿ ಸ್ಥಳದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ರೈಲ್ವೆ ಇಲಾಖೆ, ಸ್ಥಳೀಯ ಶಾಸಕರು ಮತ್ತು ಸಂಸದರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 108 ವರ್ಷದ ಇತಿಹಾಸವುಳ್ಳ ಸರ್ಕಾರಿ ಶಾಲೆಯ ಅಸ್ತಿತ್ವ ಉಳಿಸಲು ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

1918 ರಿಂದ ಶಾಲೆ ‌ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ. ಕೃಷ್ಣ, ಮಾಜಿ ಶಾಸಕ ವಾಸು, ವಿಧಾನಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ, ರಾಷ್ಟ್ರಕವಿ ಕುವೆಂಪು ಅವರ ಸಂಬಂಧಿಕರು ಸೇರಿದಂತೆ ಅನೇಕ ಗಣ್ಯರು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಪ್ರಸ್ತುತ 120 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರತೀ ವರ್ಷವೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ನೀಡುತ್ತಿದೆ ಎಂದರು.

ಉತ್ತಮ ಫಲಿತಾಂಶದ ಜೊತೆಗೆ ಪಾರಂಪರಿಕ ಇತಿಹಾಸವುಳ್ಳ ಶಾಲೆಯ ಸುತ್ತಲೂ ಈಗಾಗಲೇ ರೈಲ್ವೆ ಇಲಾಖೆಯಿಂದ ಐದಾರು ವಸತಿ ಸಮುಚ್ಚಯಗಳು, ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಈಗ ಶಾಲೆಯ ಕಾಂಪೌಂಡ್ ಒಳ ಭಾಗದಲ್ಲಿಯೇ ಕಾಂಪೌಂಡನ್ನು ಕೆಡವಿ 3 ವಸತಿ ಸಮುಚ್ಚಯ ನಿರ್ಮಿಸುತ್ತಿರುವುದು ರೈಲ್ವೆಯವರ ಆಕ್ರಮಣ ನೀತಿಗೆ ಸಾಕ್ಷಿಯಾಗಿದೆ ಎಂದು ಅವರು ಕಿಡಿಕಾರಿದರು.

ಕರ್ನಾಟಕ ಸರ್ಕಾರಿ ಶೈಕ್ಷಣಿಕ ಸಂಸ್ಥೆಯ ಭೂಮಿಗಳ(ರಕ್ಷಣಾ ಮತ್ತು ಸಕ್ರಮಾತಿ) ಅಧಿನಿಯಮ 2026 ರನ್ವಯ ಕನಿಷ್ಠ 12 ವರ್ಷಗಳಿಂದ ಬಳಸುತ್ತಿರುವ ಸರ್ಕಾರಿ ಶಾಲೆಯ ಜಾಗವು ಆ ಶಾಲೆಗೆ ಸೇರಲಿದೆ. ಅಲ್ಲದೆ ಬಡ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರೈಲ್ವೆ ಇಲಾಖೆಯು ಶಾಲೆಗೆ ಜಾಗವನ್ನು ಬಿಟ್ಟುಕೊಡಬೇಕು. ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿಯನ್ನು ಕೂಡಲೇ‌ ನಿಲ್ಲಿಸಿ, ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಿಕೊಳ್ಳಬೇಕು. ಶಾಲೆ ಆವರಣದಲ್ಲಿ ಸುರಿದಿರುವ ಮಣ್ಣು, ಮರದ ದಿಮ್ಮಿಗಳು, ಕಾಂಕ್ರೀಟ್ ವಸ್ತುಗಳನ್ನು ತೆರವುಗೊಳಿಸಬೇಕು. ಹಾಗೆಯೇ ಜಿಲ್ಲಾಡಳಿತ ಶಾಲೆಯ ಹೆಸರಿಗೆ ಜಾಗದ ಖಾತೆ ಮಾಡಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಪ್ರೊ. ಕಾಳಚನ್ನೇಗೌಡ, ರಾಯ್ ಜೋಸೆಫ್, ಎಸ್‌.ಕೆ. ದಿನೇಶ್, ರವಿ ಬೇಲ್, ಅಶ್ವಿನಿ ರಂಜನ್, ರವಿಚಂದ್ರ, ಡಿ.ವಿ. ದಯಾನಂದ ಸಾಗರ್, ರಾಕೇಶ್, ಮಾಲವಿಕ ಗುಬ್ಬಿವಾಣಿ, ಇ. ರತಿ ರಾವ್, ನಿತಿನ್, ಬಿ.ಆರ್. ಸ್ವಾತಿ, ವಿಕಾಳ ಚನ್ನೇಗೌಡ, ವಿ. ಮಹೇಂದ್ರ ಉಂಡವಾಡಿ, ಎಸ್. ದರ್ಶನ್, ಎನ್. ದರ್ಶನ್, ಪವನ್, ಕಾವೇರಪ್ಪ, ಸಿ. ದರ್ಶನ್, ವಿ. ಚಂದ್ರು, ಕೋಮಲ, ಸಹನಾ, ಅಕ್ಷತಾ, ಸುಶೀಲಾ ಮೊದಲಾದವರು ಇದ್ದರು.